ಮಂಗಳೂರು : ಸುರತ್ಕಲ್ ತಡಂಬೈಲ್ ಇಲ್ಲಿರುವ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಇದರ ವಾರ್ಷಿಕೋತ್ಸವ ಹಾಗೂ ಒಂಭತ್ತನೇ ವರ್ಷದ ಮಹಿಳಾ ಯಕ್ಷಗಾನ ತಾಳಮದ್ದಳೆ ಸಪ್ತಾಹ 2024 ಕಾರ್ಯಕ್ರಮವು ದಿನಾಂಕ 29-01-2024ರಿಂದ 05-02-2024ರವರೆಗೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ದಿನಾಂಕ 29-01-2024ರಂದು ಮಂಡಳಿಯ ಒಂಭತ್ತನೇ ವರ್ಷದ ವಾರ್ಷಿಕೋತ್ಸವವನ್ನು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ವೇದಮೂರ್ತಿ ಶ್ರೀ ಐ. ರಮಾನಂದ ಭಟ್ ಮತ್ತು ಶ್ರೀಮತಿ ಶಕುಂತಲಾ ರಮಾನಂದ ಭಟ್ ಇವರು ಜ್ಯೋತಿ ಬೆಳಗಿ ಉದ್ಘಾಟಿಸಲಿದ್ದಾರೆ. ಸುರತ್ಕಲ್ ಬಂಟರ ಸಂಘ ಅಧ್ಯಕ್ಷರಾದ ಶ್ರೀ ಲೋಕಯ್ಯ ಶೆಟ್ಟಿ ಮುಂಚೂರು ಇವರು ಅಧ್ಯಕ್ಷತೆ ವಹಿಸಲಿದ್ದು ಸುರತ್ಕಲ್ ಬಂಟರ ಸಂಘ ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಭವ್ಯಾ ಎ. ಶೆಟ್ಟಿ ಇವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಕವಿ ಮಧುಕುಮಾರ್ ಬೋಳಾರ ವಿರಚಿತ ‘ಸುದರ್ಶನ ವಿಜಯ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ದಿನಾಂಕ 30-01-2024ರಂದು ಸಪ್ತಾಹದ ಸಮಾರಂಭವನ್ನು ವಕೀಲರಾದ ಶ್ರೀ ಪಿ. ಸದಾಶಿವ ಐತಾಳ ಇವರ ಅಧ್ಯಕ್ಷತೆಯಲ್ಲಿ ಪಚ್ಚನಾಡಿ ಪ್ರಸಿದ್ಧ ಜ್ಯೋತಿಷಿ ವೇದಮೂರ್ತಿ ಶ್ರೀ ಸೀತಾರಾಮ ಆಚಾರ್ಯ ಮತ್ತು ಶ್ರೀಮತಿ ಸ್ವಾತಿ ಆಚಾರ್ಯ ಇವರು ಜ್ಯೋತಿ ಬೆಳಗಿ ಉದ್ಘಾಟಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಕವಿ ಅಜಪುರ ವಿಷ್ಣು ಭಾಗವತ ವಿರಚಿತ ‘ಉತ್ತರನ ಪೌರುಷ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ದಿನಾಂಕ 31-01-2024ರಂದು ಕವಿ ಹಲಸಿನ ನರಸಿಂಹ ಶಾಸ್ತ್ರಿ ವಿರಚಿತ ‘ರುಕ್ಮಿಣಿ ಸ್ವಯಂವರ’, ದಿನಾಂಕ 01-02-2024ರಂದು ‘ಶ್ರೀರಾಮ ದರ್ಶನ’, ದಿನಾಂಕ 02-02-2024ರಂದು ‘ಶಿವಭಕ್ತ ವೀರಮಣಿ’, ದಿನಾಂಕ 03-02-2024ರಂದು ಕವಿ ಪಾರ್ತಿಸುಬ್ಬ ವಿರಚಿತ ‘ಪಟ್ಟಾಭಿಷೇಕ ವನಗಮನ’, ದಿನಾಂಕ 04-02-2024ರಂದು ‘ವಾಲಿ ಮೋಕ್ಷ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ದಿನಾಂಕ 05-02-2024ರಂದು ನಡೆಯಲಿರುವ ಸಮಾರೋಪ ಸಮಾರಂಭವನ್ನು ವೇದಮೂರ್ತಿ ಶ್ರೀ ವೆಂಕಟರಮಣ ಐತಾಳ ಮತ್ತು ಶ್ರೀಮತಿ ಇಂದಿರಾ ಐತಾಳ ಇವರು ದೀಪ ಬೆಳಗಿ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರು ಇದರ ಸದಸ್ಯರು ಕವಿ ದೇವಿದಾಸ ವಿರಚಿತ ‘ದಕ್ಷಯಜ್ಞ’ ಯಕ್ಷಗಾನ ತಾಳಮದ್ದಳೆಯನ್ನು ನಡೆಸಿಕೊಡಲಿದ್ದಾರೆ.