ಮುಡಿಪು : ಮಂಗಳೂರು ವಿ.ವಿ.ಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಆವರಣದಲ್ಲಿ ಕರಾವಳಿ ಜಾನಪದ ಸಂಸ್ಕೃತಿಯನ್ನು ಅನಾವರಣಗೊಳಿಸುವ ‘ಸಂಸ್ಕೃತಿ ಸಿರಿ’ ಕಾರ್ಯಕ್ರಮವು ದಿನಾಂಕ 19-01-2024ರ ಶುಕ್ರವಾರದಂದು ನಡೆಯಿತು.
ಕರಾವಳಿಯ ಕೃಷಿ ಪದ್ಧತಿಯನ್ನು ಪರಿಚಯಿಸುವ ಪುಟ್ಟ ಗದ್ದೆ ನಿರ್ಮಾಣ, ಅದರಲ್ಲಿ ನೇಜಿ, ಪಕ್ಕದಲ್ಲೇ ತುಳುನಾಡಿನ ಕ್ರೀಡೆ ಮೂಡಯಿ ಪಡ್ಡಾಯಿ ಎಂಬ ಕಂಬಳದ ಗದ್ದೆ, ಇನ್ನೊಂದೆಡೆ ಯಕ್ಷಗಾನದ ರಂಗಸ್ಥಳ, ಮತ್ತೊಂದೆಡೆ ತುಳುನಾಡಿನ ಆಚರಣೆಯನ್ನು ಪರಿಚಯಿಸುವ ದೈವದ ಕೊಡಿಯಡಿ, ನಾಗಬನದ ನಿರ್ಮಾಣ, ಮಧ್ಯದ ವೇದಿಕೆಗೆ ಹೆಣೆದ ಮಡಲು ಮತ್ತು ಮುಳಿ ಹುಲ್ಲು ಹಾಸಿ ಮಾಡಿದ ಮನೆ. ಅದರೊಳಗೆ ಒಲೆಯಲ್ಲಿ ಹಾಲು ಕಾಯಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಸ್ವತ: ವಿವಿಯ ಕುಲಪತಿಗಳೇ ಒಲೆಗೆ ಕಟ್ಟಿಗೆಯಿಟ್ಟು ಬೆಂಕಿ ಹಚ್ಚಿದರು. ಪುಟ್ಟ ಮೆರವಣಿಗೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಕುಲಪತಿ ಪ್ರೊ. ಜಯರಾಜ್ ಅಮೀನ್, ಸಿಂಡಿಕೇಟ್ ಸದಸ್ಯ ಅಚ್ಯುತ ಗಟ್ಟಿ, ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಹೊಂಗಳ್ಳಿ, ಪ್ರಾಧ್ಯಾಪಕರುಗಳಾದ ಡಾ. ನಾಗಪ್ಪ ಗೌಡ, ಡಾ. ಧನಂಜಯ ಕುಂಬ್ಳೆ, ಡಾ. ಯಶುಕುಮಾರ್ ಸಹಿತ ಗಣ್ಯರು ಅಗಮಿಸಿದರು. ಹರೇಕಳ ಹಾಜಬ್ಬರು ಉರುವಲು ತೆಗೆಯುವ ಮೂಲಕ ಆವರಣ ಪ್ರವೇಶಿಸಿದರು. ಬಳಿಕ ಮಾತನಾಡಿದ ಕುಲಪತಿ ಪ್ರೊ. ಜಯರಾಜ್ ಅಮೀನ್ “ತುಳುನಾಡಿನ ಸಂಸ್ಕೃತಿ ಕೃಷಿ ಮೂಲ ಸಂಸ್ಕೃತಿ. ಇಲ್ಲಿ ಹಲವು ಜಾತಿ ಮತ ಸಮುದಾಯಗಳು ಇದ್ದರೂ ಸಹಬಾಳ್ವೆ ಇಲ್ಲಿನ ನೆಲದ ಗುಣ. ಆಧುನಿಕತೆಯ ಪ್ರವಾಹದಲ್ಲಿ ನಮ್ಮ ನಾಡಿನ ಸಂಸ್ಕೃತಿ ಕೊಚ್ಚಿಕೊಂಡು ಹೋಗದಂತೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ಹೀಗೊಂದು ಅನುಭವಗಳಿಗೆ ತಮ್ಮನ್ನು ಒಡ್ಡಿಕೊಂಡು ಕರಾವಳಿಯ ಸಂಸ್ಕೃತಿಯನ್ನು ಅನಾವರಣ ಮಾಡಿರುವುದು ಶ್ಲಾಘನೀಯ.” ಎಂದರು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ “ತುಳುನಾಡಿನ ತನ್ನ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಾ ಬಡತನವಿದ್ದರೂ ಆಗ ನೆಮ್ಮದಿಯಿತ್ತು. ಊರವರೆಲ್ಲಾ ಒಟ್ಟು ಸೇರಿಕೊಂಡು ಸಂಭ್ರಮಿಸುತ್ತಿದ್ದೆವು. ತುಳುನಾಡಿನ ಈ ಬದುಕೇ ಸಮಾಜಸೇವೆಯ ಮನಸ್ಸನ್ನು ನನ್ನಲ್ಲಿ ರೂಪಿಸಿದ್ದು.” ಎಂದರು.
ಕರಾವಳಿ ಜಾನಪದದ ಕುರಿತು ಉಪನ್ಯಾಸ ನೀಡಿದ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ “ಕರಾವಳಿಯ ಜಾನಪದ ಶ್ರೀಮಂತವಾಗಿದೆ. ನಮ್ಮ ಹಿರಿಯರು ಶ್ರಮದ ಬೆವರಿನ ಮೂಲಕ ಕಟ್ಟಿದ ಕೃಷಿ ಸಂಸ್ಕೃತಿ ಇಂದು ಅವಗಣನೆಗೆ ಒಳಗಾಗುತ್ತಿದೆ. ಕರಾವಳಿಯ ಜಾನಪದ ಸಂಶೋಧನೆಗೆ ಮಂಗಳೂರು ವಿ.ವಿ.ಯ ಕೊಡುಗೆ ಅನನ್ಯವಾದುದು. ಕಲಿಕೆಯಲ್ಲಿ ಅನುಭವಕ್ಕೆ ಒತ್ತು ನೀಡಿ ಸಂಸ್ಕೃತಿ ಕಲಿಕೆ ವಿ. ವಿ. ಗಳಲ್ಲಿ ಸಾಧ್ಯವಾಗಬೇಕು.” ಎಂದು ಹೇಳಿದರು.
ಕನ್ನಡ ಎಸ್.ವಿ.ಪಿ. ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳು ರೂಪಿಸಿದ ಈ ಸೃಜನಶೀಲ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರುಗಳಾದ ಸುರೇಶ್ ಕುಮಾರ್ ಬಿ. ನಾವೂರು, ರಘುರಾಜ್ ಕದ್ರಿ, ಸವಾದ್ ಸುಳ್ಯ, ಫಾದರ್ ಮೈಕಲ್ ಸಂತುಮಯಾರ್ ಜೂಡಿತ್ ಮೆಂಡೋನ್ಸಾ ಕುಂದಾಪುರ, ಸೆಮಿರಾ ಹಾಗೂ ವಿವಿಧ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವೀಕ್ಷಿಸಿದರು.
ಸಮಾರಂಭದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ರಂಗೋಲಿ, ಚಿತ್ರಕಲೆ, ಕರಕುಶಲ, ದೇಸೀ ಆಟಗಳು, ಜಾನಪದ ಹಾಡು, ಸಮೂಹ ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿದ್ಯಾರ್ಥಿ ಶಂಕರ್ ಓಬಳಬಂಡಿ ಸ್ವಾಗತಿಸಿ, ವೀಕ್ಷಿತ ನಿರೂಪಿಸಿ, ಬ್ರಿಜೇಶ್, ವಿಸ್ಮ, ತೇಜಶ್ರೀ ಅತಿಥಿಗಳನ್ನು ಪರಿಚಯಿಸಿ, ಸೌಮ್ಯ ಪಿ.ಪಿ. ವಂದಿಸಿದರು.