ಕಾಸರಗೋಡು: ರಂಗಚಿನ್ನಾರಿ( ರಿ) ಕಾಸರಗೋಡು ಇದರ ಸಂಗೀತ ಘಟಕ ‘ಸ್ವರ ಚಿನ್ನಾರಿ’ಯ ಸರಣಿ ಕಾರ್ಯಕ್ರಮದ ನಾಲ್ಕನೇ ಹಂತವಾಗಿ ‘ಕನ್ನಡ ಧ್ವನಿ’ ಕನ್ನಡ ನಾಡಗೀತೆ ಭಾವಗೀತೆಗಳ ಕಲಿಕಾ ಶಿಬಿರವು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 5,6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 23-01-2024 ರಂದು ಬೆಳಿಗ್ಗೆ ಘಂಟೆ 10.00 ರಿಂದ ಯಶಸ್ವಿಯಾಗಿ ನಡೆಯಿತು.
ಶಾಲಾ ಮ್ಯಾನೇಜರ್ ಶ್ರೀ ಜಯಪ್ರಕಾಶ್ ಪಜಿಲ ದೀಪ ಬೆಳಗಿಸಿ ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತನ್ನಾಡಿದ ರಂಗಚಿನ್ನಾರಿ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ಸತೀಶ್ಚಂದ್ರ ಭಂಡಾರಿ “ಶಾಲಾ ವಿದ್ಯಾರ್ಥಿಗಳನ್ನು ನೋಡುವಾಗ ತಮ್ಮ ಬಾಲ್ಯದ ಗೆಳೆತನ ನೆನಪಾಗುತ್ತಿದೆ. ನಾಲ್ಕು ಜನರ ಗೆಳೆತನ ‘ರಂಗಚಿನ್ನಾರಿ’ ಎಂಬ ಪ್ರತಿಷ್ಠಿತ ಸಂಸ್ಥೆಯನ್ನು ಹುಟ್ಟು ಹಾಕಿ, ಕನ್ನಡದ ಉಳಿವಿನ ಹಾಗೂ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಗಳನ್ನು ರೂಪಿಸಿ ಕೊಡುವ ಸದುದ್ದೇಶ ಹೊಂದಿದ್ದು, ಸಂಸ್ಥೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಕಲಿಕೆ ಎಂಬುದನ್ನು ವಿದ್ಯೆ ಮತ್ತು ಪ್ರತಿಭೆ ಎರಡಕ್ಕೂ ಸಮಾನ ರೀತಿಯಲ್ಲಿ ಹಂಚುತ್ತಾ ಜೀವನದಲ್ಲಿ ಸಾಧನೆಯತ್ತ ಸಾಗಬೇಕು.” ಎಂಬ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಮಾತನಾಡಿ “ರಂಗಚಿನ್ನಾರಿ ಮತ್ತು ಭಾರತೀ ವಿದ್ಯಾಪೀಠ ಶಾಲೆಯ ಸಂಬಂಧ ತುಂಬಾ ಗಟ್ಟಿಯಾದುದು, ‘ರಂಗಚಿನ್ನಾರಿ’ ನಿರ್ದೇಶಕರಲ್ಲಿ ಒಬ್ಬರಾದ ಕಾಸರಗೋಡು ಚಿನ್ನಾ ಅವರ ನೇತೃತ್ವದ ಕನ್ನಡದ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಯಶಸ್ವಿಯಾಗುವುದು ಖಚಿತ. ತಮ್ಮ ಶಾಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವ ಕನ್ನಡದ ಯಾವುದೇ ಅವಕಾಶಗಳಿಂದ ಮಕ್ಕಳನ್ನು ವಂಚಿತರಾಗಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ‘ಸ್ವರಚಿನ್ನಾರಿ’ಯ ಸಂಗೀತ ಕಾರ್ಯ ಪ್ರಶಂಸನೀಯ.” ಎಂದರು.
ಶಿಬಿರ ನಿರ್ದೇಶಕರಾದ ಶ್ರೀಮತಿ ಪ್ರತಿಜ್ಞಾ ರಂಜಿತ್ ಮತ್ತು ಶ್ರೀಮತಿ ಅಕ್ಷತಾ ಪ್ರಕಾಶ್ ಉಪಸ್ಥಿತರಿದ್ದು, ಸುಮಾರು 75 ಮಕ್ಕಳಿಗೆ ಕನ್ನಡ ನಾಡಗೀತೆ ಮತ್ತು ಭಾವಗೀತೆಯನ್ನು ಹಾಡಲು ತರಬೇತಿ ನೀಡಿದರು.
ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯರು ಅವನಿ, ಪ್ರಕೃತಿ ,ಸ್ತುತಿ, ದಶಮಿ ಹಾಗೂ ವಿಸ್ಮಯ ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥಿಸಿ, ಏಳನೇ ತರಗತಿಯ ವಿದ್ಯಾರ್ಥಿನಿ ತಸ್ವಿ ಸ್ವಾಗತಿಸಿ, ವರ್ಷಿತ್ ವಂದಿಸಿದರು. ಶಾಲಾ ಶಿಕ್ಷಕ ವೃಂದ ಕಾರ್ಯಕ್ರಮದ ಯಶಸ್ವಿಗಾಗಿ ಉತ್ತಮ ರೀತಿಯಲ್ಲಿ ಸಹಕರಿಸಿದರು.