ಕಾಸರಗೋಡು: ರಂಗಚಿನ್ನಾರಿಯ ಸಂಗೀತ ಘಟಕ ‘ಸ್ವರ ಚಿನ್ನಾರಿ’ಯ ಐದನೇ ಸರಣಿ ಕಾರ್ಯಕ್ರಮ ‘ಕನ್ನಡ ಧ್ವನಿ’ ಕನ್ನಡ ನಾಡಗೀತೆ ಭಾವಗೀತೆಗಳ ಕಲಿಕಾ ಶಿಬಿರವು ದಿನಾಂಕ 23-01-2024ನೇ ಮಂಗಳವಾರ ಮಹಾಜನ ಸಂಸ್ಕೃತ ಕಾಲೇಜು ನೀರ್ಚಾಲು ಇಲ್ಲಿ ಪ್ರೌಢ ಶಾಲಾ ಮಕ್ಕಳಿಗಾಗಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಶಾಲಾ ಮ್ಯಾನೇಜರ್ ಶ್ರೀ ಜಯದೇವ ಖಂಡಿಗೆ ಮಾತನಾಡಿ “ರಂಗಚಿನ್ನಾರಿ ಸಂಸ್ಥೆಯ ಕನ್ನಡದ ಕಾರ್ಯಗಳು ಪ್ರಶಂಸನೀಯ. ಹಾಡನ್ನು ಕಲಿಯುವ ಮಕ್ಕಳು ಮುಂದೆ ಉತ್ತಮ ಕಲಾವಿದರಾಗಲಿ.” ಎಂದು ಹಾರೈಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ರಂಗಚಿನ್ನಾರಿಯ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ಸತೀಶ್ಚಂದ್ರ ಭಂಡಾರಿ “ಪಾಠ ಪುಸ್ತಕಗಳಿಂದ ಕಲಿಯುವ ವಿದ್ಯೆಗೆ ಎಷ್ಟು ಉತ್ತೇಜನ ಕೊಡುತ್ತೇವೋ ಅದರ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಹಾಡು, ನೃತ್ಯ, ಚಿತ್ರಕಲೆ ಹಾಗೂ ಯೋಗ ಮುಂತಾದವುಗಳಿಗೂ ಪ್ರಾಶಸ್ತ್ಯ ಕೊಡುವುದರಿಂದ ಮುಂದೆ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ತಮ್ಮನ್ನು ತಾವು ನೋಡಿಕೊಳ್ಳಬಹುದು. ಕನ್ನಡ ನಮ್ಮೆಲ್ಲರ ಮಾತೃಭಾಷೆ ಆದ್ದರಿಂದ ಅದನ್ನು ಉಳಿಸಿ ಬೆಳೆಸಲು ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ಇಂತಹ ಕಲಿಕಾ ಶಿಬಿರಗಳು ಅನಿವಾರ್ಯವಾಗಿವೆ.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ್ಯೋಪಾಧ್ಯಾಯರಾದ ಶ್ರೀ ಶಿವಪ್ರಕಾಶ್ ಎಮ್. ಕೆ. “ಶಾಲಾ ದಿನನಿತ್ಯದ ಪಾಠಗಳ ನಿಮಿತ್ತ ಹಲವು ಆಸಕ್ತ ಮಕ್ಕಳಿಗೆ ಈ ಶಿಬಿರಕ್ಕೆ ಪಾಲ್ಗೊಳ್ಳುವ ಅವಕಾಶ ಸಿಗದೇ ಇದ್ದು, ಮುಂದೆ ಶಾಲೆಯ ಎಲ್ಲಾ ಕನ್ನಡ ವಿದ್ಯಾರ್ಥಿಗಳೂ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಶಿಬಿರವನ್ನು ಸೂಕ್ತ ಸಮಯದಲ್ಲಿ ಏರ್ಪಡಿಸಲಾಗುವುದು. ಹಾಡು ಏಕಾಗ್ರತೆಯ ಮೂಲ.” ಎಂದು ಹೆಳಿದರು.
ಶಿಬಿರ ನಿರ್ದೇಶಕರು ಶ್ರೀಮತಿ ಪ್ರತಿಜ್ಞಾ ರಂಜಿತ್ ಮತ್ತು ಶ್ರೀಮತಿ ಅಕ್ಷತಾ ಪ್ರಕಾಶ್ ಉಪಸ್ಥಿತರಿದ್ದು, ಮಧ್ಯಾಹ್ನ ಘಂಟೆ 1.30ರಿಂದ ನಡೆದ ಈ ಶಿಬಿರದಲ್ಲಿ ಕನ್ನಡ ನಾಡಗೀತೆ ಮತ್ತು ಭಾವಗೀತೆಗಳನ್ನು ಸುಮಾರು 35 ಮಕ್ಕಳಿಗೆ ಕರೋಕೆಯಲ್ಲಿ ಹಾಡಲು ತರಬೇತಿ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಾಲಾ ಕನ್ನಡ ಶಿಕ್ಷಕಿ ಶ್ರೀಮತಿ ವಿದ್ಯಾಲಕ್ಷ್ಮೀ ಕಾರ್ಯಕ್ರಮವನ್ನು ನಿರ್ವಹಿಸಿದರು.