ಮಂಗಳೂರು : ಕರ್ನಾಟಕ ಕೊಂಕಣಿ ಭಾಷಾ ಮಂಡಳ್ ಇದರ ಸುವರ್ಣ ಮಹೋತ್ಸವದ ಸಮಾರೋಪ ಹಾಗೂ ಕೊಂಕಣಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ‘ಭಾಂಗಾರೋತ್ಸವ್’ವು ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 09-01-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಂಗಳೂರಿನ ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ರೊನಾಲ್ಡ್ ಫೆರ್ನಾಂಡಿಸ್ ಇವರು “ಕೊಂಕಣಿ ಭಾಷೆಗೆ ಅದರದ್ದೇ ಆದ ಸ್ಥಾನಮಾನವಿದೆ. ತನ್ನದೇ ವ್ಯಾಪ್ತಿಯನ್ನು ಒಳಗೊಂಡಿದೆ. ಕೊಂಕಣಿ ಉಳಿವಿಗೆ ಅನೇಕರು ಶ್ರಮಿಸಿದ್ದಾರೆ. ಕರಾವಳಿಯ ಕೊಂಕಣಿ ಭಾಷಿಗರು ದೇಶಕ್ಕಾಗಿ ಸೇವೆ ಸಲ್ಲಿಸಿರುವುದು ಅವಿಸ್ಮರಣೀಯ. ಕೊಂಕಣಿ ಭಾಷೆ ಎಲ್ಲಿಯೂ ಬಂಧಿಯಾಗಿಲ್ಲ. ಕೊಂಕಣಿ ಮಾತನಾಡುವ ಜನರಿಂದ ಭಾಷೆ ಬೆಳೆಯುತ್ತಿದೆ. ಸಾಹಿತಿಗಳೊಂದಿಗೆ ಓದುಗರ ಪಾತ್ರವೂ ಕೊಂಕಣಿಗೆ ಮಹತ್ವದ್ದಾಗಿದೆ. ಸಂಘಟನೆ, ಸರಕಾರದ ಪ್ರೋತ್ಸಾಹವು ಸಾಹಿತ್ಯ ಭಾಷೆಯ ಬೆಳವಣಿಗೆ ಪೂರಕವಾಗಿವೆ. ಮುಂದೆಯೂ ಭಾಷೆಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು” ಎಂದು ಹೇಳಿದರು.
ಕೊಂಕಣಿ ಭಾಷಾ ಮಂಡಳ್‌ನ ಸ್ಥಾಪಕ ಖಜಾಂಚಿ ವಂದನೀಯ ಮಾರ್ಕ್ ವಾಲ್ಟರ್ ಮಾತನಾಡಿ ಭಾಷಾ ಮಂಡಳ್ ಇದರ ಆರಂಭದ ದಿನಗಳನ್ನು ನೆನಪಿಸಿಕೊಂಡರು. “ಕೊಂಕಣಿ ಭಾಷೆ ಉಳಿವಿಗಾಗಿ ನಮ್ಮ ಹಿರಿಯರು ಶ್ರಮಿಸಿದ್ದಾರೆ. ಭಾಷಾ ಮಂಡಳ್ ನ ನಿರಂತರ ಹೋರಾಟದಿಂದ ಕೊಂಕಣಿ ಭಾಷೆ ಉಳಿದಿದೆ. ಭಾಷೆ ಉಳಿಸಿ ಬೆಳೆಸಲು ಮಂಡಳ್ ಶ್ರಮಿಸಲಿದೆ. ಕೊಂಕಣಿಯ ವ್ಯಾಪ್ತಿ ಹೆಚ್ಚಾಗಲು ಅದನ್ನು ಮಾತನಾಡುವ ಜನರೇ ಕಾರಣ. ಮಾತೃ ಭಾಷೆಯ ಪ್ರೀತಿ ಎಂದರೆ ತಾಯಿಯನ್ನು ಪ್ರೀತಿಸುವುದು” ಎಂದು ಹೇಳಿದರು.
ಸಮಾರಂಭದಲ್ಲಿ ಕೊಂಕಣಿ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ರಾಮದಾಸ್ ಗುಲ್ವಾಡಿಯವರಿಗೆ ‘ಜೀವಮಾನ ಸಾಧಕ’ ಪುರಸ್ಕಾರ, ಲೋಕವೇದ ಕಲಾವಿದ ಹಾಗೂ ಹಳ್ಳಿಯ ಚಿಕಿತ್ಸಕಿ ಕಲ್ಯಾಣಿಬಾಯಿ ನೀರ್ಕೆರೆ ಅವರಿಗೆ ‘ಜಾನಪದ ಪುರಸ್ಕಾರ’, ಕೊಂಕಣಿ ವಾರ ಪತ್ರಿಕೆ ಚಂದಾದಾರ ರನ್ನು ಮಾಡಿ ಅದರಲ್ಲಿಯೇ ಜೀವನ ನಡೆಸುವ ಸಾಗರದ ಅಪ್ಪುರಾಯ ಪೈ ಅವರಿಗೆ ‘ಕಾರ್ಯಕರ್ತ ಪುರಸ್ಕಾರ’, ಕೊಂಕಣಿ ನಟ ಕ್ಲಾನ್ ವಿನ್ ಫೆರ್ನಾಂಡಿಸ್ ಇವರಿಗೆ ‘ಯುವ ಪುರಸ್ಕಾರ’, ಕೃತಿಕಾ ಕಾಮತ್ ಅವರ ದಿವೋಚೋ ಉಜ್ವಾಡ್ ಮೊದಲ ಕೊಂಕಣಿ ಕೃತಿಗೆ ‘ಪುಸ್ತಕ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಮತ್ತು ಸಂಘ ಸಂಸ್ಥೆಗಳನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕೊಂಕಣಿ ಭಾಷಾ ಮಂಡಳ್ ಅಧ್ಯಕ್ಷ ಕೆ. ವಸಂತ್ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್, ಉದ್ಯಮಿ ಪ್ರಶಾಂತ್ ಶೇಟ್ ಶುಭ ಹಾರೈಸಿದರು. ಕೊಂಕಣಿ ಭಾಷಾ ಮಂಡಳ್ ಉಪಾಧ್ಯಕ್ಷ ರತ್ನಾಕರ್ ಕುಡ್ವಾ, ಖಜಾಂಚಿ ಸುರೇಶ್ ಶೆಣೈ, ಸಹ ಕಾರ್ಯದರ್ಶಿ ಜೂಲಿಯೆಟ್ ಫೆರ್ನಾಂಡಿಸ್, ಸದಸ್ಯರಾದ ಡಾ. ಅರವಿಂದ ಶಾನಭಾಗ್, ಲಾರೆನ್ಸ್ ಪಿಂಟೊ, ಮೀನಾಕ್ಷಿ ಎನ್. ವೈ, ಜೋಸ್ಸಿ ಎಡ್ವರ್ಡ್ ಪಿಂಟೊ , ನವೀನ್ ನಾಯಕ್, ಫೆಲ್ಸಿ ಲೋಬೊ, ರಾಬರ್ಟ್ ಮೆನೆಜಸ್, ನಿರಂಜನ್, ವಿದ್ಯಾ ವಿ. ಬಾಳಿಗಾ, ವೆಂಕಟೇಶ್ ಎನ್. ಬಾಳಿಗಾ, ಗೀತಾ ಕಿಣಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಹಾಗೂ ಮಂಡಲ್‌ನ ಕಾರ್ಯದರ್ಶಿ ರೇಮಂಡ್ ಡಿ ಕುನ್ನಾ ಸ್ವಾಗತಿಸಿ, ವೆಂಕಟೇಶ್ ನಾಯಕ್ ಹಾಗೂ ರೈನಾ ಡಿಕುನ್ಹಾ ನಿರೂಪಿಸಿದರು.