ಉಡುಪಿ : ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವ ಪ್ರಯುಕ್ತ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ‘ಹರ್ಷ’ ಸ್ವರಾಂಜಲಿ ಕಾರ್ಯಕ್ರಮವು ದಿನಾಂಕ 17-01-2024ರಂದು ಅಜ್ಜರಕಾಡು ಟೌನ್‌ಹಾಲ್‌ನಲ್ಲಿ ನೆರವೇರಿತು. ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಹರ್ಷ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸೂರ್ಯಪ್ರಕಾಶ್ ಕೆ., ಆಪರೇಶನ್ ಡೈರೆಕ್ಟರ್ ಅಶೋಕ್ ಕುಮಾರ್ ಕೆ., ಮಾರ್ಕೆಟಿಂಗ್ ಡೈರೆಕ್ಟರ್ ಹರೀಶ್ ಎಂ., ಎಚ್.ಆರ್. ಡೈರೆಕ್ಟರ್ ಸುರೇಶ್ ಎಂ., ಇನ್ಫ್ರಾಸ್ಟ್ರಕ್ಟರ್ ಡೈರೆಕ್ಟರ್ ರಾಜೇಶ್ ಉದ್ಘಾಟಿಸಿದರು.
ಚಿತ್ರನಟಿ ವಿನಯಾ ಪ್ರಸಾದ್ ಕಾರ್ಯಕ್ರಮ ನಡೆಸಿಕೊಟ್ಟರು. ಈ ಬಾರಿಯ ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ‘ಅರಾಜ್’ ಎಂಬ ಯುವ ಪ್ರತಿಭೆಗಳ ತಂಡ ‘ಹರ್ಷ ಸ್ವರಾಂಜಲಿ’ ಕಾರ್ಯಕ್ರಮದ ಮೂಲಕ ಸಂಗೀತ ಲೋಕವನ್ನೇ ಸೃಷ್ಟಿಸಿ, ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು. ಪ್ರತೀಕ್ ಸಿಂಗ್ ಗಾಯನಕ್ಕೆ ಇಶಾನ್ ಘೋಷ್ (ತಬಲಾ), ಮೆಹ್ತಾಬ್ ಅಲಿ ನಿಯಾಝ್ (ಸಿತಾರ್), ವನರಾಜ್ ಶಾಸ್ತ್ರೀ (ಸಾರಂಗಿ), ಎಸ್. ಆಕಾಶ್ (ಕೊಳಲು) ಹಾಗೂ ಇನ್ನಿತರ ಕಲಾವಿದರು ಸಾಥ್ ನೀಡಿದ್ದರು.
ಮುಂಬಯಿಯಲ್ಲಿರುವ ‘ಸಂಗೀತ ಮಹಾಭಾರತಿ ಸಂಸ್ಥೆ’ಯ ಸಂಗೀತ ಸ್ಥಾಪಕ, ತಬಲಾ, ಸಿತಾರ್ ಮಾಂತ್ರಿಕ ಪಂಡಿತ್ ನಯನ್ ಘೋಷ್ ಅವರ ಪುತ್ರ ತಬಲಾ ಮಾಂತ್ರಿಕ ಇಶಾನ್ ಘೋಷ್ ಅವರು ಯುವ ಶಾಸ್ತ್ರೀಯ ಸಂಗೀತಗಾರರ ತಂಡ ಕಟ್ಟಿಕೊಂಡು ಭಾರತೀಯ ಹಿಂದೂಸ್ಥಾನಿ ಶಾಸ್ತ್ರೀಯ ಕಲಾ ಪ್ರಕಾರಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ. ಶಾಸ್ತ್ರೀಯ ಸಂಗೀತದಲ್ಲಿ ವಿಭಿನ್ನ ಪರಿಕಲ್ಪನೆಯ ಮೂಲಕ ಜನಪ್ರಿಯರಾದ ಇಶಾನ್ ಘೋಷ್ 2016ರಲ್ಲಿ ಮೊದಲ ಕಚೇರಿಯನ್ನು ನೀಡಿದ ನಂತರ ಒಂದು ತಂಡವಾಗಿ ಪ್ರೇಕ್ಷಕರಿಗೆ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಬೇರೆ ಬೇರೆ ಸಂಗೀತ ಕಾರ್ಯಕ್ರಮದಲ್ಲಿ ಪರಿಚಯವಾಗಿದ್ದ ಪ್ರತೀಕ್ ಸಿಂಗ್, ಮೆಹ್ತಾಬ್, ವನರಾಜ್ ಇತ್ಯಾದಿ ಕಲಾವಿದರನ್ನು ಸೇರಿಸಿಕೊಂಡು 2018ರಲ್ಲಿ ಮೊದಲ ಪ್ರದರ್ಶನ ನೀಡಿದ್ದರು.
ಎಲ್ಲರನ್ನೂ ಒಗ್ಗೂಡಿಸುವ ಮಾಂತ್ರಿಕ ಶಕ್ತಿಯೊಂದಿಗೆ ಜಗತ್ತಿನ ಶಾಂತಿ, ಸಂತೋಷಕ್ಕೆ ಭಾರತೀಯ ಸಂಗೀತ ಕಲಾ ಪ್ರಕಾರವೇ ಔಷಧವಾಗಿ ಸಂಗೀತದಲ್ಲಿದೆ. ಒಬ್ಬ ಸಂಗೀತಗಾರ ತನ್ನ ಹೃದಯದಿಂದ ಸಂಗೀತ ನುಡಿಸಿದಾಗ ಮಾತ್ರ ಪ್ರೇಕ್ಷಕರ ಹೃದಯ ಮುಟ್ಟುವಂತಿರುತ್ತದೆ. ಹಾಗೇ ನಮ್ಮ ತಂಡವು ನಿಯೋ ಕ್ಲಾಸಿಕ್ ಶೈಲಿಯಲ್ಲಿ ಸಂಯೋಜಿಸಿ ಸಂಗೀತ ಪ್ರಿಯರನ್ನು ಮಂತ್ರಮುಗ್ಧಗೊಳಿಸುವಲ್ಲಿ ವಿಶೇಷ ಪ್ರಯತ್ನ ಮುಂದುವರಿದಿದೆ. ‘ಅರಾಜ್’ ಎಂದರೆ ಪ್ರಾರ್ಥನೆ ಎಂದರ್ಥವಾಗಿದ್ದು, ನಮ್ಮ ಸಂಗೀತ ಕಲಾ ಪ್ರಕಾರದ ಸಂಸ್ಕೃತಿಯನ್ನು ಬಿಂಬಿಸುವ ಒಂದು ಪರಿಕಲ್ಪನೆಯಾಗಿದೆ. ವಿದೇಶಗಳಲ್ಲಿಯೂ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದ್ದು, ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅತ್ಯುತ್ತಮ ಸ್ಪಂದನೆ ಹಾಗೂ ಬೇರೆ ಬೇರೆ ಆಯಾಮಗಳಲ್ಲಿ ಇದಕ್ಕೆ ಸಿಕ್ಕಿದ ವಿಮರ್ಶೆ ಅನನ್ಯವಾಗಿತ್ತು.