ಬೆಂಗಳೂರು : ಬೆಂಗಳೂರಿನ ‘ಪದ’ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ ‘ಹಾದಿಗಲ್ಲು’ ಪುಸ್ತಕದ 12ನೇ ಮುದ್ರಣದ ಅನಾವರಣ ಮತ್ತು ಚಿತ್ರಕಲಾ ಶಿಬಿರವು ದಿನಾಂಕ 20-01-2024ರಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ‘ವರ್ಣ ಆರ್ಟ್ ಗ್ಯಾಲರಿ’ಯಲ್ಲಿ ನಡೆಯಿತು.
ಈ ಶಿಬಿರದಲ್ಲಿ 12 ಮಂದಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಭಾಗವಹಿಸಿ ಹಾದಿಗಲ್ಲು ಪುಸ್ತಕವನ್ನು ಓದಿ ಚಿತ್ರಕಲೆಯನ್ನು ಕ್ಯಾನ್ವಾಸ್ ಮೇಲೆ ಬಿಡಿಸಿದ್ದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಸರಾಂತ ಸಾಹಿತಿಗಳಾದ ಡಾ. ರಾಜಪ್ಪ ದಳವಾಯಿ ಮಾತನಾಡಿ “ಒಂದು ಪುಸ್ತಕ ಜನರಿಗೆ ಹತ್ತಿರವಾಗಬೇಕೆಂದರೆ ಅದರೊಳಗೆ ಹೂರಣ ಚೆನ್ನಾಗಿರಲೇಬೇಕು. ಈ ನಿಟ್ಟಿನಲ್ಲಿ ಕೆ.ಎ. ದಯಾನಂದ್ ಅವರ ‘ಹಾದಿಗಲ್ಲು’ ಬಹಳ ಸೊಗಸಾಗಿ ಮೂಡಿ ಬಂದಿದೆ. ಅವರ ನೆನಪುಗಳು ಅಚ್ಚಾಗಿದೆ. ಆ ನೆನಪುಗಳು ನಮ್ಮದೇ ಎಂದು ಓದುಗ ಭಾವಿಸಿ ತನ್ನ ಹಳೆಯ ನೆನಪಿಗೆ ಜಾರುತ್ತಾರೆ. ಹೀಗೆ ಬಾಯಿಂದ ಬಾಯಿಗೆ ಪುಸ್ತಕದ ಹೂರಣ ಹರಡಿ ಎಲ್ಲರ ಮಸ್ತಕದಲ್ಲೂ ಹಾದಿಗಲ್ಲು ಹರಡಿದೆ. ಇದು ಸಂತಸ ಪಡುವ ವಿಷಯ. ಕೆ.ಎ. ದಯಾನಂದ ಅವರು ಉತ್ತಮ ಆಡಳಿತಗಾರರು, ಒಳ್ಳೆಯ ಬರಹಗಾರರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ. ಸರ್ ಮಿರ್ಜಾ ಇಸ್ಮಾಯಿಲ್ ಅವರಿಂದ ಹಿಡಿದು ಅನೇಕ ಮಂದಿ ಸಜ್ಜನ ಸಹೃದಯ ದಕ್ಷ ಪ್ರಾಮಾಣಿಕ ಅಧಿಕಾರಿಗಳು ಕರ್ನಾಟಕ ಸರ್ಕಾರದಲ್ಲಿ ಕೆಲಸ ಮಾಡಿದ್ದಾರೆ. ಬಡಬಗ್ಗರಿಗೆ ಶ್ರಮಿಕರಿಗೆ ನೋವಾಗದ ಹಾಗೆ ಅವರ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಅವರ ಸಾಲಿಗೆ ಅಂದರೆ ಕಷ್ಟದಿಂದ ಮಿಡಿಯುವ ಜನರಿಗೆ ಸ್ಪಂದಿಸುವ ಕೆಲವೇ ಅಧಿಕಾರಿಗಳಲ್ಲಿ ಕೆ.ಎ. ದಯಾನಂದ ಅವರು ಕೂಡ ಒಬ್ಬರು. ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನಾಟಕ ಮತ್ತು ಸಿನಿಮಾ ಜನರ ಜೀವನದಿಗಳು. ಜನರ ಜೀವನದಿಗಳನ್ನು ಹಿಡಿದಿಟ್ಟು ಮತ್ತಷ್ಟು ಜನರಿಗೆ ಹತ್ತಿರವಾಗಲಿ.” ಎಂದು ಶುಭ ಹಾರೈಸಿದರು.
ಕೆ.ಎ. ದಯಾನಂದ ಮಾತನಾಡಿ “ಪುಸ್ತಕ ಇಷ್ಟರ ಮಟ್ಟಿಗೆ ಪ್ರಶಂಸೆಗೆ ಒಳಪಡುತ್ತದೆ ಎಂದು ನಾನು ಭಾವಿಸಿರಲಿಲ್ಲ. ಒಂದು ರೀತಿ ನನಗೆ ವಿಸ್ಮಯವಾಗಿದೆ.” ಎಂದರು.
ಅಧ್ಯಕ್ಷತೆ ವಹಿಸಿದ ಡಾಕ್ಟರ್ ಎಂ.ಎಸ್. ಮೂರ್ತಿ ತಮ್ಮದೇ ಶೈಲಿಯಲ್ಲಿ ರಚಿತವಾದ ‘ಹಾದಿಗಲ್ಲಿ’ನ ಚಿತ್ರಾಕೃತಿಯನ್ನು ದಂಪತಿಗಳಿಗೆ ನೀಡಿ ಶುಭ ಕೋರಿದರು. ಬಳಿಕ ಮಾತನಾಡಿದ ಅವರು “ತಾಯಿಯ ಅಂತರಂಗವನ್ನು ಅರಿತವರಿಗೆ ಮಾತ್ರ ತಾಯಿಯ ಹೃದಯವಿರುತ್ತದೆ. ಇಂತಹ ಹೃದಯವಂತ ದಯಾನಂದ ಅವರ ಪುಸ್ತಕ ಪುತ್ರ ಕೃತಿಯಾಗಿರುವುದು ನಮಗೆಲ್ಲರಿಗೂ ಹರ್ಷದಾಯಕವಾಗಿದೆ.” ಅವರಿಗೆ ಶುಭವಾಗಲಿ ಎಂದು ಹಾರೈಸಿದರು.
ಆಯೋಜಕರಾದ ಪದ ದೇವರಾಜ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, “ಪದ ಸಂಸ್ಥೆ ನಿರಂತರವಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದೆ. ಉತ್ತಮವಾದ ಕಾರ್ಯಕ್ರಮವನ್ನು ಮಾಡಲು ಉತ್ತಮವಾದ ಮನಸ್ಸುಗಳು ಸೇರಲು ಇಂತಹ ಕಾರ್ಯಕ್ರಮಗಳು ಸಂಗಮವಾಗಿದೆ.“ ಎಂದು ಎಲ್ಲರಿಗೂ ವಂದಿಸಿದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಗಾಯಕರಾದ ಶಂಕರ್ ಭಾರತಿಪುರ, ಅಪ್ಪುಗೆರೆ ತಿಮ್ಮರಾಜು, ಡಾಕ್ಟರ್ ಲಕ್ಷ್ಮೀನಾರಾಯಣ ಹಾಗೂ ಡಾ. ಲಕ್ಷ್ಮಣ ದಾಸ್ ಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು. ಕಾರ್ಯಕ್ರಮವನ್ನು ಶ್ರೀ ಶಿವಲಿಂಗಪ್ರಸಾದ್ ನಿರೂಪಿಸಿದರು.