ಕಾಸರಗೋಡು : ಕಲೆ, ಸಾಹಿತ್ಯ, ಸಂಸ್ಕೃತಿಗೆ ಮಹೋನ್ನತ ಕೊಡುಗೆಯಿತ್ತು ಅಮರರಾದ ಪುಂಡೂರು ದಾಮೋದರ ಪುಣಿಂಚಿತ್ತಾಯ ಪ್ರತಿಷ್ಠಾನದ ನೇತೃತ್ವದಲ್ಲಿ ಸಾಹಿತ್ಯ, ಕಲೋಪಾಸಕ ಕೀರ್ತಿಶೇಷ ರಾಮಚಂದ್ರ ಪುಣಿಂಚಿತ್ತಾಯರ ಪ್ರಥಮ ವರ್ಷಾಂತಿಕ ಸಂಸ್ಮರಣೆಯೊಂದಿಗೆ ನಾಡಿನ ಹಿರಿಯ ಕವಿ, ಕಲಾಸಾಹಿತ್ಯ ಚಿಂತಕ, ಅರ್ಥದಾರಿ ಡಾ.ರಮಾನಂದ ಬನಾರಿ ಅವರಿಗೆ ದಂಪತಿ ಸಹಿತ ಪುಂಡೂರು ದಾಮೋದರ ಪುಣಿಂಚಿತ್ತಾಯ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 18-01-2024ರಂದು ನಡೆಯಿತು.
ಪುಂಡೂರು ನೀರ್ಮಜೆಯ “ಶ್ರೀ ರಂಜಿನಿ” ಮನೆಯಂಗಳದಲ್ಲಿ ತಂತ್ರಿ ಉಳಿಯ ವಿಷ್ಣು ಆಸ್ರ ಇವರ ಅಧ್ಯಕ್ಷತೆ ಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ, ದಿ.ರಾಮಚಂದ್ರ ಪುಣಿಂಚಿತ್ತಾಯರು ರಚಿಸಿದ “ಭಕ್ತಿ ಭಾವ ಯಾನ” ಎಂಬ ಭಕ್ತಿಗೀತೆಗಳ ಕೃತಿ ಬಿಡುಗಡೆಗೈದು ಆಶೀರ್ವಚನವಿತ್ತರು. ನೂತನ ಕೃತಿಗೆ ಮುನ್ನುಡಿ ಬರೆದ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಕೃತಿ ಪರಿಚಯ ಮಾಡಿದರು.
ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅತಿಥಿಯಾಗಿ ಶುಭಾಶಂಸನೆಗೈದು “ಪುಂಡೂರು ಮನೆತನದ ಕಲಾ,ಸಾಹಿತ್ಯ, ಸಾಂಸ್ಕೃತಿಕ ಕೊಡುಗೆಯಲ್ಲಿ ಗಡಿನಾಡಿನ ಇತಿಹಾಸವೇ ಹುದುಗಿದೆ. ಅದರ ಅಧ್ಯಯನ ನಡೆಯಬೇಕು ಎಂದರು.” ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಹಿರಿಯ ಸದಸ್ಯ ಶ್ರೀಪತಿ .ಟಿ ಅವರನ್ನು ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಪುರುಷೋತ್ತಮ ಪುಣಿಂಚಿತ್ತಾಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸ್ನೇಹಲತಾ ಅಮ್ಮಣ್ಣಾಯ ಮತ್ತು ಸೌಮ್ಯ ಸರಸ್ವತಿ ಪ್ರಾರ್ಥನೆಯನ್ನು ಹಾಡಿ, ಗುರುರಂಜನ್ ಪುಣಿಂಚಿತ್ತಾಯ ಸನ್ಮಾನ ಪತ್ರ ವಾಚಿಸಿ, ಸತ್ಯಮೂರ್ತಿ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿ, ವಾಮದೇವ ಪುಣಿಂಚಿತ್ತಾಯ ವಂದಿಸಿದರು.
ಸಂಸ್ಮರಣೆಯ ಅಂಗವಾಗಿ ಹಿರಿಯ ಕಲಾವಿದರು ಪಾಲ್ಗೊಂಡ “ಕರ್ಮಬಂಧ” ತಾಳಮದ್ದಳೆ ನಡೆಯಿತು. ಅರ್ಥಗಾರಿಕೆಯಲ್ಲಿ ಡಾ.ಎಂ.ಪ್ರಭಾಕರ ಜೋಷಿ, ಡಾ. ರಮಾನಂದ ಬನಾರಿ, ಶ್ರೀಕರ ಭಟ್ ಮರಾಠೆ ಭಾಗವಹಿಸಿ ಮಾತಿನ ಮಂಟಪ ಕಟ್ಟಿದರು. ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ ಅಮ್ಮಣ್ಣಾಯ ಹಾಗೂ ಚಂಡೆ,ಮದ್ದಳೆಯಲ್ಲಿ ಮನೋಜ್ಞ ಭಾಗವತಿಕೆಯಲ್ಲಿ ನಡೆದ ಕೂಟದ ಹಿಮ್ಮೇಳದಲ್ಲಿ ಲಕ್ಷೀಶ ಅಮ್ಮಣ್ಣಾಯ, ಅಡೂರು ಮೋಹನ ಸರಳಾಯ ಭಾಗವಹಿಸಿದರು.4