ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಿರಿಯಡ್ಕದ ಸಂಸ್ಕೃತಿ ಸಿರಿ ಟ್ರಸ್ಟ್ ಹಾಗೂ ಆಭರಣ್ ಜುವೆಲ್ಲರ್ಸ್ ಸಹಯೋಗದಲ್ಲಿ ಆಯೋಜಿಸಿದ ‘ಜನಪದ’ ದೇಶೀಯ ಕಲೆಯ ಸರಣಿ ಕಲಾ ಕಾರ್ಯಾಗಾರದ ಒಂಭತ್ತು ಮತ್ತು ಹತ್ತನೇ ಆವೃತ್ತಿ ಹಾಗೂ ‘ಗಿಲ್ಡೆಡ್ ಡಿವೈನಿಟಿ’ ಶೀರ್ಷಿಕೆಯ ಮೈಸೂರು ಚಿತ್ರಗಳ ಕಲಾಪ್ರದರ್ಶನವು ದಿನಾಂಕ 27-01-2024ರಂದು ಬಡಗುಪೇಟೆಯ ‘ಹತ್ತು ಮೂರು ಇಪ್ಪಂತ್ತೆಂಟು ಗ್ಯಾಲರಿ’ಯಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಇವರು ಉದ್ಘಾಟಿಸಿ ಮಾತನಾಡುತ್ತ “ಭಾರತೀಯ ಕಲಾ ಪ್ರಕಾರಗಳೆಲ್ಲ ಬಹಳ ವಿಶಿಷ್ಟತೆಯಿಂದ ಕೂಡಿದುದು. ಉಡುಪಿಯ ಪರಿಸರದಲ್ಲಿ ಈ ದೇಶೀಯ ಪರಂಪರೆಯ ಮೈಸೂರು ಹಾಗೂ ಗಂಜೀಫಾ ಚಿತ್ರಶೈಲಿಗಳನ್ನು ಪರಿಚಯಿಸುತ್ತಿರುವುದು ಜೊತೆಗೆ ಸಮಕಾಲೀನ ಸಾಧ್ಯತೆಗಳನ್ನು ಕೂಡ ಪ್ರಾಯೋಗಿಕವಾಗಿ ಸಾಧ್ಯವಾಗುವಂತೆ ನಡೆಸಿಕೊಡುತ್ತಿರುವ ಭಾವನಾ ಪೌಂಡೇಶನ್‌ನ ಕಾರ್ಯ ಶ್ಲಾಘನೀಯ. ಜೊತೆಗೆ ಈ ಎಲ್ಲಾ ದೇಶೀಯ ಚಿತ್ರ ಪರಂಪರೆಗಳ ಚಿತ್ರಸಂತೆಯೊಂದನ್ನು ಉಡುಪಿಯಲ್ಲಿ ಆಯೋಜಿಸಿದರೆ ಖಂಡಿತ ಕಲೆ, ಕಲಾವಿದರಿಗೆ ಉತ್ತಮ ಪ್ರೋತ್ಸಾಹ ದೊರಕಬಹುದು” ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ಈಶಾವಾಸ್ಯ ಪ್ರತಿಷ್ಠಾನದ ವಿಶ್ವಸ್ಥರಾದ ವಿನಯ್ ಬನ್ನಂಜೆಯವರು “ಮೈಸೂರು ಹಾಗೂ ಗಂಜೀಫಾ ಕಲೆ ಆಧ್ಯಾತ್ಮಕ್ಕೆ ಬಹು ಹತ್ತಿರವಾದುದೆಂಬುದಾಗಿ ಸ್ವತಃ ಕೆಲವು ಪೆನ್ಸಿಲ್ ರೇಖಾಚಿತ್ರಗಳನ್ನು ರಚಿಸಿದ್ದ ಬನ್ನಂಜೆ ಗೋವಿಂದಾಚಾರ್ಯರ ಅಭಿಪ್ರಾಯವಾಗಿತ್ತು. ಈ ಕಲಾಪ್ರದರ್ಶನವು ಉಡುಪಿಯ ಕಲಾ ರಸಿಕರಿಗೆ ಡಿವಿನಿಟಿಯ ದರ್ಶನವನ್ನು ನೀಡಲಿ” ಎಂದು ಹಾರೈಸಿದರು. ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್ ಹಾಗೂ ಮಂಗಳೂರಿನ ಆರ್ಕಿಟೆಕ್ಟ್ ಪ್ರಮುಖ್ ರೈಯವರು ಉಪಸ್ಥಿತರಿದ್ದರು.
ಈ ಕಲಾ ಕಾರ್ಯಾಗಾರದಲ್ಲಿ ಮೈಸೂರು ಚಿತ್ರಶೈಲಿ ಹಾಗೂ ಗಂಜೀಫಾ ಚಿತ್ರಕಲೆಯನ್ನು ಕಲಿಸಿಕೊಡಲು ಬಂದಿರುವ ಶಶಾಂಕ್ ಭಾರಧ್ವಾಜ್ ರವರು ಈ ಕಲೆಯ ವೈಶಿಷ್ಟ್ಯತೆಯನ್ನು ತಿಳಿಸಿದರು. ಈ ಎರಡೂ ಕಲೆಗಳ ಕಲಾಪ್ರದರ್ಶನವು 30ನೆಯ ಮಂಗಳವಾರದ ತನಕ ನಡೆಯಲಿದ್ದು ಶ್ರೀ ರಾಮ, ಕೃಷ್ಣ, ವೆಂಕಟೇಶ, ಗಣಪತಿ, ಶಿವ ಹಾಗೂ ದೇವಿಗೆ ಸಂಬಂಧಿಸಿದ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಅಪರಾಹ್ನ 3ರಿಂದ 7ರ ತನಕ ಸಾರ್ವಜನಿಕರಿಗೆ ನೋಡಲು ಮತ್ತು ಖರೀದಿಸಲು ಮುಕ್ತ ಅವಕಾಶವಿದೆ ಎಂಬುದಾಗಿ ಸಂಯೋಜಕರಾದ ಡಾ. ಜನಾರ್ದನ ಹಾವಂಜೆಯವರು ಮಾಹಿತಿಯಿತ್ತರು.