ದೇರಳಕಟ್ಟೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ವತಿಯಿಂದ ದೇರಳಕಟ್ಟೆ ಕಂಪರ್ಟ್ಸ್ ಇನ್ ಸಭಾಂಗಣದಲ್ಲಿ ರವೀಂದ್ರ ರೈ ಕಲ್ಲಿಮಾರು ಇವರ ‘ಮೇಲೋಗರ’ ಎಂಬ ಚಿಂತನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 27-01-2024ರಂದು ನಡೆಯಿತು. ಕೃತಿ ಬಿಡುಗಡೆಗೊಳಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮಾತನಾಡುತ್ತಾ “ಯುವ ತಲೆಮಾರು ದಾರಿ ತಪ್ಪದಂತೆ ಮಾರ್ಗದರ್ಶನ ಮಾಡುವ ಹಾಗೂ ಯುವಕರನ್ನು ಮರುಳು ಮಾಡುವ ಸಾಮಾಜಿಕ ವ್ಯವಸ್ಥೆಯಲ್ಲಿ ಮೌಲ್ಯಯುತವಾದ ಚಿಂತನೆಗಳು ಬೇಕಾಗಿವೆ. ರವೀಂದ್ರ ರೈಗಳ ‘ಮೇಲೋಗರ’ ಕೃತಿ ಈ ಮಾರ್ಗದರ್ಶನ ನೀಡಬಲ್ಲ ಹೊತ್ತಗೆ” ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ವಿದ್ವಾಂಸರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪಗೌಡ ಮಾತನಾಡಿ “ಅತ್ಯುತ್ತಮ ಶಿಕ್ಷಕರಾದವರಿಗೆ ಮಾರ್ಗದರ್ಶಕ ಚಿಂತನೆಗಳನ್ನು ನೀಡಲು ಸಾಧ್ಯ. ಸಾಂದರ್ಭಿಕವೂ ಸಾಮಾಜಿಕ ಕಾಳಜಿಯನ್ನು ಹೊಂದಿದ ರವೀಂದ್ರ ರೈಗಳ ಚಿಂತನ ಕೃತಿ ಎಲ್ಲರಿಗೂ ಮಾರ್ಗದರ್ಶಿ. ಇತ್ತೀಚಿನ ಕೆಲವು ಘಟನೆಗಳನ್ನು ಗಮನಿಸುವಾಗ ಸಮಾಜದಲ್ಲಿ ನಮಗೆ ಅರಗಿಸಿಕೊಳ್ಳಲಾಗದ, ವಿವರಿಸಲಾಗದ ನೈತಿಕ ಅಧ:ಪತನ ಎದ್ದು ಕಾಣುತ್ತಿದೆ. ಈಗ ಬೇಕಿರುವುದು ಸರಳವಾದ ಭಾಷೆಯಲ್ಲಿ ಮೌಲ್ಯಗಳನ್ನು ಹೇಳುವ ಚಿಂತನೆಗಳು. ಪ್ರಬಂಧದ ಗುಣವನ್ನು ಹೊಂದಿರುವ ಮೌಲಿಕ ಚಿಂತನೆಯ ‘ಮೇಲೋಗರ’ ಅದ್ಭುತ ಕೃತಿಯಾಗಿದೆ. ಅನ್ನ ದಾಸೋಹ ಎಷ್ಟು ಶ್ರೇಷ್ಠವೋ ಗ್ರಂಥ ದಾಸೋಹವೂ ಅಷ್ಟೇ ಪವಿತ್ರವಾದುದು. ಲೇಖಕರನ್ನು ಪ್ರೋತ್ಸಾಹಿಸುವ ದಾನಿಗಳು ಹೆಚ್ಚಬೇಕು. ಎಂದು ಹೇಳಿದರು.
ತುಳುನಾಡ ಐಕ್ಯತಾ ವೇದಿಕೆ ಅಧ್ಯಕ್ಷ ಎ.ಎ. ಹೈದರ್ ಪರ್ತಿಪ್ಪಾಡಿ ಉಪಸ್ಥಿತರಿದ್ದರು. ಕೃತಿಯ ಲೇಖಕ ಕೆ. ರವೀಂದ್ರ ರೈ ಕಲ್ಲಿಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಘಟಕದ ಕೋಶಾಧಿಕಾರಿ, ದಿ ಕಂಫರ್ಟ್ ಇನ್ ಹೊಟೇಲ್ ಮಾಲೀಕರಾದ ಚಂದ್ರಹಾಸ್ ಶೆಟ್ಟಿ ವಂದಿಸಿ, ಭಾಗ್ಯರಾಜ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗಾಯಕ ತೋನ್ಸೆ ಪುಷ್ಕಳ ಕುಮಾರ್ ಬಳಗದಿಂದ ಭಾವ ಸಂಧ್ಯಾ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಉಳ್ಳಾಲ ಕಸಾಪ ವತಿಯಿಂದ ಲೇಖಕ ರವೀಂದ್ರ ರೈ ಕಲ್ಲಿಮಾರು ದಂಪತಿಯನ್ನು ಸನ್ಮಾನಿಸಲಾಯಿತು.