ಕುಶಾಲನಗರ : ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ರಥಬೀದಿಯಲ್ಲಿ ಆಯೋಜಿಸಿದ್ದ ‘ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ’ ಕಾರ್ಯಕ್ರಮವು ದಿನಾಂಕ 26-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನೀರ್ ಅಹಮದ್ “ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ರಂಗೋಲಿ ಸ್ಪರ್ಧೆ ಖಂಡಿತ ಸಹಕಾರಿಯಾಗಿದೆ. ಉತ್ತಮ ಸಮಾಜವನ್ನು ರೂಪಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಮಹತ್ವವಾದದ್ದು. ಇದರಲ್ಲಿ ಎಲ್ಲರೂ ಒಟ್ಟಾಗಿ ಸೇರಿ ನಮ್ಮಲ್ಲಿ ಪರಸ್ಪರ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಕುಟುಂಬದಲ್ಲಿ ಇರುವ ಹಿರಿಯರು ಯುವ ಜನಾಂಗಕ್ಕೆ ಆಚಾರ ವಿಚಾರಗಳನ್ನು ತಿಳಿಸುವ ಮೂಲಕ ಜಾಗೃತಿ ಮೂಡಿಸಬೇಕು. ಸಾರ್ವಜನಿಕವಾಗಿ ಇಂತಹ ಕಾರ್ಯಕ್ರಮ ಮಾಡುವುದರಿಂದ ಅಸಕ್ತಿಯಿಲ್ಲದವರು ಬಂದು ನೋಡಿ ಸ್ಫೂರ್ತಿ ಪಡೆಯಲು ಅವಕಾಶ ಮೂಡಿದಂತಾಗುತ್ತದೆ ಎಂದು ಹೇಳಿದರು. ಎಷ್ಟೋ ವಿಚಾರಗಳು ಮೊಬೈಲ್ ನಿಂದ ತಮ್ಮ ಘನತೆಯನ್ನು ಕಳೆದುಕೊಳ್ಳುತ್ತಿದೆ. ಹಾಗಂತ ಮೊಬೈಲ್ ಬಿಟ್ಟಿರಲು ಸಾಧ್ಯವಿಲ್ಲ. ಸಂಸ್ಕೃತಿ, ಕಲೆ, ಸಾಹಿತ್ಯ ವಿಚಾರ ಬಂದಾಗ ಜಾಗೃತರಾಗುವುದು ನಮ್ಮಗಳ ಅಧ್ಯತೆಯಾಗಬೇಕು” ಎಂದು ಹೇಳಿದರು.
ಉದ್ಯಮಿ ಎಸ್.ಕೆ. ಸತೀಶ ಮಾತನಾಡಿ, “ಕುಶಾಲನಗರ ತಾಲೂಕು ಕಸಾಪ ಉತ್ತಮವಾದ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಜನರಲ್ಲಿ ಸಾಹಿತ್ಯ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಸದ್ದುದೇಶದಿಂದ ರಂಗೋಲಿ ಸ್ಪರ್ಧೆಗಳು ಸಹಕಾರಿ” ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, “ನೆಲವನ್ನೇ ಕ್ಯಾನ್ವಾಸ್ ಮಾಡಿಕೊಂಡು ಬಗೆಬಗೆ ಕಲಾಕೃತಿಗಳಂಥ ರಂಗೋಲಿ ಬಿಡಿಸುತ್ತಿದ್ದುದು ಗಮನ ಸೆಳೆಯಿತು. ವೈವಿಧ್ಯಮಯ ವರ್ಣರಂಜಿತ ಮತ್ತು ಆಕರ್ಷಕ ರಂಗೋಲಿಗಳನ್ನು ಚಿತ್ರಿಸಲಾಗಿದ್ದು, ಕುಶಾಲನಗರ ಪಟ್ಟಣದ ಸ್ಪರ್ಧಿಗಳು ಮಾತ್ರವಲ್ಲದೆ ಸುತ್ತಲಿನ ಪ್ರದೇಶಗಳಿಂದ ಮಹಿಳೆಯರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಸ್ಥಳಕ್ಕೆ ಆಗಮಿಸಿದ್ದರಿಂದ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ರಂಗೋಲಿಯು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕವಾಗಿದ್ದು, ಆಧುನಿಕ ಯುಗದಲ್ಲಿ ಪ್ರಾಚೀನ ಸಂಸ್ಕೃತಿ ಮತ್ತು ಈ ಕಲೆಯು ನಶಿಸಿಹೋಗುತ್ತಿದೆ. ಈ ದಿಸೆಯಲ್ಲಿ ಇಂತಹ ಸ್ಪರ್ಧೆಗಳ ಮೂಲಕ ರಂಗೋಲಿ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಈ ಸ್ಪರ್ಧೆಯು ಸಹಕಾರಿಯಾಗಿದೆ” ಎಂದರು.
ಅತಿಥಿಗಳಾದ ಕೆ.ಜೆ. ಚಿನ್ನಸ್ವಾಮಿ, ಎಸ್.ಎಲ್. ಶ್ರೀಪತಿ, ದಿನೇಶ್, ವಿ.ವಿ. ನಾಗೇಂದ್ರ ಶೆಟ್ಟಿ, ಕಾರ್ಯದರ್ಶಿಗಳಾದ ಎಸ್. ನಾಗರಾಜ್, ಟಿ.ವಿ. ಶೈಲಾ, ಖಜಾಂಚಿ ಕೆ.ವಿ. ಉಮೇಶ್, ನಿರ್ದೇಶಕರಾದ ಎಂ.ಎನ್. ಕಾಳಪ್ಪ, ಹೇಮಲತಾ, ಟಿ.ಬಿ. ಮಂಜುನಾಥ್, ಡಿ.ಎಸ್. ಸೋಮಶೇಖರ್, ಜಿಲ್ಲಾ ಸಮಿತಿಯ ಕೆ.ಎನ್. ದೇವರಾಜ್, ಹೆಬ್ಬಾಲೆ ಘಟಕ ಅಧ್ಯಕ್ಷ ಎಂ.ಎನ್. ಮೂರ್ತಿ, ದೇವಿಪ್ರಸಾದ್, ಹರೀಶ್ ಗುಡ್ಡೆಮನೆ ಇತರರು ಉಪಸ್ಥಿತರಿದ್ದರು.
ಪ್ರಶಸ್ತಿ ವಿಜೇತರು :
ಕುಶಾಲನಗರದ ಬಿ.ಎ. ಐಶ್ವರ್ಯ ಮೊದಲ ಸ್ಥಾನ, ದ್ವಿತೀಯ ಸ್ಥಾನವನ್ನು ಕೂಡ್ಲುರೂ ಗ್ರಾಮದ ಕೆ.ಎನ್. ಪುಣ್ಯ, ತೃತೀಯ ಸ್ಥಾನವನ್ನು ಅವರ್ತಿ ಗ್ರಾಮದ ಎಸ್. ಸಂಗೀತ ಹಾಗೂ ಸಮಾಧಾನಕರ ಬಹುಮಾನವನ್ನು ಗುಮ್ಮನಕೊಲ್ಲಿ ಗ್ರಾಮದ ಬಿ.ಜೆ. ತೇಜಸ್ವಿನಿ, ಕುಶಾಲನಗರದ ಬಿ.ಡಿ. ಯಶುಮತಿ ಮತ್ತು ಲಲಿತ ಜಿ. ಭಟ್ ಇವರುಗಳು ಪಡೆದುಕೊಂಡರು.