ಪ್ರತಿ ಋತುಗಳು ಒಂದೊಂದು ರೀತಿಯಲ್ಲಿ ಪ್ರಕೃತಿಯನ್ನು ಕಾಪಾಡಲು ಕಾರಣವಾಗುತ್ತವೆ. ಪ್ರತಿ ಋತುವು ಸಂವತ್ಸರದ ಆಜ್ಞಾಧಾರಿಯಾಗಿದೆ. ಬೇಸಿಗೆಯ ಮೊದಲು ಚಳಿಗಾಲದಲ್ಲಿ ಶಿಶಿರ ಋತುವಿನಲ್ಲಿ ಎಲೆಗಳೆಲ್ಲಾ ಒಣಗಿ ಹೊಸ ಚಿಗುರಿಗೆ ದಾರಿ ಮಾಡಿಕೊಡುತ್ತದೆ.
ಬೇಸಿಗೆ ಬಂತೆಂದರೆ ಹೂ ಹಣ್ಣುಗಳಿಂದ ಮೈ ತುಂಬಿಕೊಳ್ಳುವ ಪ್ರಕೃತಿ. ಮಾವಿನ ಹೂವು, ಹಣ್ಣಿನ ಗೊಂಚಲು ನೋಡೋದೆ ಸಂಭ್ರಮ. ವಿವಿಧ ಬಗೆಯ ಪಕ್ಷಿಗಳ ಇಂಚರಕ್ಕೆ ನೀರಿನ ಜುಳು ಜುಳು ನಾದಕ್ಕೆ ಬೇಸಿಗೆ ರಜೆ ಕಳೆಯೋದೆ ಮಜಾ. ಹಸಿವು, ನಿದ್ರೆ, ನೀರಡಿಕೆ, ಆಯಾಸ, ಎಲ್ಲವೂ ಜಾಸ್ತಿ. ಹಿಂಜಿದ ಹತ್ತಿಯನ್ನು ಹರಡಿರುವಂತೆ ಬಿಳಿ ಮೋಡ ನೋಡುತ್ತಾ ತಂಗಾಳಿಗೆ ಮೈಯೊಡ್ಡಿ ಮಲುಗುತ್ತಾ ಸೂರ್ಯೋದಯಕ್ಕಿಂತ ಸೂರ್ಯಾಸ್ತವೇ ಪ್ರಿಯವಾಗುವ ಕಾಲ. ಕಣ್ಮನಗಳನ್ನು ತಣಿಸುವ ರಾಗರಂಜಿತ ದೃಶ್ಯಗಳು. ಆದರೆ ಕಲಾವಿದನಿಗೆ ಇವೆಲ್ಲವುಕ್ಕಿಂತಲೂ ಭಿನ್ನವಾಗಿ ಗೋಚರಿಸುವ ಪ್ರಕೃತಿ. ವಿಶೇಷ ಕೌಶಲ್ಯದ ಮೂಲಕ ಹೊಸ ಅನ್ವೇಷಣೆ ಮಾಡುವ ಮನೋಭಾವ ಕಲಾವಿದ ಬೆಳೆಸಿಕೊಳ್ಳಬೇಕು. ಭಾವ ಪ್ರಪಂಚಕ್ಕೆ ಎನಾದರೂ ನೀಡಬೇಕೆಂದರೆ ನಮ್ಮಲ್ಲಿರುವ ಎಲ್ಲಾ ಗ್ರಹಣ ಶಕ್ತಿಯನ್ನು ಕೇಂದ್ರೀಕರಿಸಿ ವಿಭಿನ್ನವಾಗಿ ಪ್ರಯತ್ನಿಸಬೇಕಾಗುತ್ತದೆ. ಕಲಾವಿದನಿಗೆ ಅಂತರ್ದೃಷ್ಠಿ , ಅಂತ:ಸ್ಪೂರ್ತಿ, ಅಂತ:ಪ್ರಾವೀಣ್ಯತೆ ಸದಾ ಜಾಗೃತವಾಗಿರಬೇಕಾಗುತ್ತದೆ. ನೋಡುಗರ ದೃಷ್ಟಿಕೋನವನ್ನು ಬದಲಾಯಿಸುವ ಶಕ್ತಿಯನ್ನು ಕಲಾವಿದ ಕಲಾವಿದ ಹೊಂದಿರುತ್ತಾನೆ. ಪ್ರಪಂಚವನ್ನು ವಿಸ್ತಾರವಾಗಿಸುವ ಬೇಸಿಗೆ ಕಾಲ ಮತ್ತು ಬೇಸಿಗೆಯ ಮೊದಲು ಅಡ್ಡಾಡಿದ ದಿನಗಳನ್ನೇ ವಸ್ತುವನ್ನಾಗಿಸಿ ಕೃಷ್ಣಮೂರ್ತಿ ಪಿ.ಎಸ್. ಅವರು ಏಕವ್ಯಕ್ತಿ ಕಲಾಪ್ರದರ್ಶನ ಏರ್ಪಡಿಸಿದ್ದಾರೆ.
“Past Summers” ವಿಷಯವನ್ನೇ ಶೀರ್ಷಿಕೆಯನ್ನಾಗಿಸಿ ಅದರ ಅಡಿಯಲ್ಲಿ ಪ್ರತಿಷ್ಠಾಪನಾ (Installation) ಕಲಾಕೃತಿಗಳನ್ನು ರಚಿಸಿದ್ದಾರೆ. ಮೂರೇ ಕಲಾಕೃತಿಗಳಿದ್ದರೂ ಮುನ್ನೂರು ವಿಷಯಗಳನ್ನು ತಿಳಿಸುವಂತಿದೆ. ಕೃಷ್ಣಮೂರ್ತಿ ಮೂಲತಃ ಕೊಡಗಿನ ಭಾಗದವರು. ಚೈತನ್ಯಪೂರ್ಣ ಪ್ರಕೃತಿಯ ಮಡಿಲಲ್ಲಿ ಬೆಳೆದು ಬಂದವರು. ಬೆಟ್ಟ, ಗುಡ್ಡದಲ್ಲಿ ಅಡ್ಡಾಡುತ್ತಾ ಅಲ್ಲಿಯ ಕಚ್ಛಾ ವಸ್ತುಗಳನ್ನೆ ಕಲಾಕೃತಿಗಳಿಗೆ ಉಪಯೋಗಿಸಿದ್ದಾರೆ. ಬೇಸಿಗೆಯ ಮೊದಲು ಚಳಿಗಾಲದಲ್ಲಿ ಉದುರಿದ ಎಲೆಗಳನ್ನು ಆಯ್ದು ಕಲಾಕೃತಿಗಳಿಗೆ ಉಪಯೋಗಿಸಿದ್ದಾರೆ.
ಮಡಕೆಗೆ ಮಣ್ಣೇ ಮೂಲ ಎಂಬಂತೆ ಈ ಕಲಾವಿದನಿಗೆ ಪ್ರಕೃತಿಯ ಮಡಿಲಿನ ವಸ್ತುಗಳೇ ಆಧಾರ. ಮರಳು, ಮರದ ತೊಗಟೆ, ಮುಳ್ಳು, ಒಣಗಿದ ಎಲೆಗಳು, ಸಿಪ್ಪೆ, ಬೀಜಗಳನ್ನು ಸಂಗ್ರಹಿಸಿ, ಶೇಖರಿಸಿ ಅದರಿಂದಲೇ ಕಲಾಕೃತಿ ರಚಿಸಿದ್ದಾರೆ. ಆಕಾರ, ಸ್ವರೂಪ ಒಂದೇ ಇದ್ದು ಬಣ್ಣವನ್ನಷ್ಟೆ ಬದಲಾಯಿಸಿ ಉದುರಿರುವ ಎಲೆಯನ್ನು ಪೋಣಿಸಿ ಕಲಾಕೃತಿಯನ್ನಾಗಿಸಿದ್ದಾರೆ. ಇನ್ನೊಂದು ಸೃಷ್ಟಿಗೆ ಕಾದಿರುವ ಬೀಜದಂತೆ, ದೊಡ್ಡ ಗೂಡಿನಂತೆ ಗೋಚರಿಸುವ ಕಲಾಕೃತಿಗಳು.
ಬೇಸಿಗೆಯಲ್ಲಿ ಮುಂದಿನ ಮಳೆಗಾಲಕ್ಕೋಸ್ಕರ ಆಹಾರ ಸಂಗ್ರಹಣೆಗೆ, ಸಮಯದ ಪರಿವಿಲ್ಲದೆ ಹಗಲಿರುಳು ದುಡಿಯುವ ಇರುವೆಗಳ ಸಾಲುಗಳು ನಿಮ್ಮನ್ನು ಹಿಡಿದು ನಿಲ್ಲಿಸುತ್ತವೆ. ಉದ್ದನೆಯ ಮುಳ್ಳು, ಬೀಜಗಳ ತೊಗಟೆಗಳೆ ಇದಕ್ಕೆ ಉಪಯೋಗಿಸಿರುವ ವಸ್ತುಗಳು. ಇರುವ ಚಿಕ್ಕ ಜಾಗದಲ್ಲೇ ಅಚ್ಚುಕಟ್ಟಾಗಿ ಪ್ರದರ್ಶನಗೈದಿದ್ದಾರೆ. ಈಗಾಗಲೇ ಐದು ನೂರು ಇರುವೆಗಳ ರಚನೆ ಇದೆ. ಮುಂದಿನ ಪ್ರದರ್ಶನಕ್ಕೆ ಹತ್ತು ಸಾವಿರ ಇರುವೆಗಳ ಕಲಾಕೃತಿಗಳನ್ನು ಮಾಡುವ ಪ್ರಯತ್ನದಲ್ಲಿದ್ದಾರೆ. ಪ್ರಕೃತಿಯ ಅನಂತ ಚೈತನ್ಯದಿಂದ ಹೊರಬರುವ ಸೃಜನಾತ್ಮಕ ಶಕ್ತಿಯಿಂದಾಗಿ ಕಲಾವಿದನು ಒಬ್ಬ ಸೃಷ್ಟಿಕರ್ತ ಎಂಬುದನ್ನು ‘past Summers’ ಸಾಬೀತು ಪಡಿಸುತ್ತದೆ. ಇಂದು ಆಂಟೋನಿಯವರ ಮೇಲ್ವಿಚಾರಣೆಯಲ್ಲಿ ಈ ಪ್ರದರ್ಶನ ಆಯೋಜನೆಗೊಂಡಿದೆ. ಕಲಾ ಪ್ರಜ್ಞೆಯ ಕಲಾಪ್ರಬುದ್ಧತೆ ಕಾಣುತ್ತದೆ. ‘ಕಾಣಿಕೆ’ ಸ್ಟುಡಿಯೋದಲ್ಲಿ ಈ ಪ್ರದರ್ಶನ ಈ ತಿಂಗಳ 31ರ ತನಕ ನಡೆಯಲಿದೆ.
ಚಿತ್ರಲೇಖನ
ಗಣಪತಿ ಎಸ್. ಹೆಗಡೆ
ಕಲಾವಿದರು/ಕಲಾವಿಮರ್ಶಕರು