ಮಂಗಳೂರು : ಹಿರಿಯ ನಾಟಕಕಾರರೂ ರಂಗ ನಿರ್ದೇಶಕರೂ ಆಗಿರುವ ಸದಾನಂದ ಸುವರ್ಣರಿಗೆ 2023-2024ನೇ ಸಾಲಿನ ಪ್ರತಿಷ್ಠಿತ ‘ಬಿ.ವಿ. ಕಾರಂತ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಇದೀಗ ಅವರಿಗೆ 92 ವರ್ಷ ವಯಸ್ಸು. ಕನ್ನಡ ತುಳು ರಂಗಭೂಮಿಗೆ ನೂರಾರು ಅತ್ಯುತ್ತಮ ನಾಟಕಗಳನ್ನು ನಿರ್ದೇಶಿಸಿದ ರಂಗ ತಪಸ್ವಿ ಸದಾನಂದ ಸುವರ್ಣ ಸುದೀರ್ಘ ಕಾಲದ ಮುಂಬೈ ರಂಗ ಕಾಯಕದ ಬಳಿಕ ಮಂಗಳೂರಿಗೆ ಬಂದು ಇಲ್ಲಿ ಸೃಜನಶೀಲ ರಂಗ ನಿರ್ದೇಶಕರಾಗಿ ಮುನ್ನಡೆದವರು. ಮಂಗಳೂರಿನ ಹವ್ಯಾಸಿ ನಟ ನಟಿಯರಿಗೆ ‘ಉರುಳು’, ‘ಕೋರ್ಟ್ ಮಾರ್ಷಲ್’, ‘ಮಳೆ ನಿಲ್ಲುವವರೆಗೆ’ ಮುಂತಾದ ನಾಟಕಗಳನ್ನು ನಿರ್ದೇಶಿಸಿ ಸದಭಿರುಚಿಯ ರಂಗ ಕಾಯಕ ಹೇಗಿರಬೇಕು ಎಂದು ನಿರೂಪಿಸಿದವರು.
‘ಘಟಶ್ರಾದ್ದ’, ‘ಕುಬಿ ಮತ್ತು ಇಯಾಲ’, ‘ಗುಡ್ಡೆದ ಭೂತ’ ಹಾಗೂ ಡಾ. ಶಿವರಾಮ ಕಾರಂತರನ್ನು ಕುರಿತ ದೂರದರ್ಶನಕ್ಕಾಗಿ ನಿರ್ಮಿಸಿದ 13 ಕಂತುಗಳ ಧಾರವಾಹಿಗಳು ಸುವರ್ಣರ ಸೃಜನಶೀಲತೆಗೆ ಸಾಕ್ಷಿ. ಮಂಗಳೂರಿನ ಹವ್ಯಾಸಿ ರಂಗಭೂಮಿಗೆ ಸುವರ್ಣರ ಕೊಡುಗೆ ಅನನ್ಯವಾದುದು. ಪ್ರತಿಷ್ಠಿತ ‘ಬಿ.ವಿ. ಕಾರಂತ ಪ್ರಶಸ್ತಿ’ಯನ್ನು ಸುವರ್ಣರಿಗೆ ಕೊಡಮಾಡಿರುವುದು ನಿಜಕ್ಕೂ ಅರ್ಹತೆಗೆ ಸಂದ ಗೌರವವೇ ಸರಿ.