ಅಮೇರಿಕಾ : ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಗ್ರೇಡ್ ಕಲಾವಿದ, ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕ ಧರ್ಮಸ್ಥಳದ ಶ್ರೀ ಬಿ. ಪ್ರಕಾಶ ದೇವಾಡಿಗರಿಗೆ ಅಮೇರಿಕಾದ ಪುತ್ತಿಗೆ ಮಠದಲ್ಲಿ ‘ಕೃಷ್ಣಾನುಗ್ರಹ ಪತ್ರ’ ಮನ್ನಣೆ ದೊರೆತಿದೆ. ಅಮೇರಿಕಾದ ಫಿನಿಕ್ಸ್ ಇಲ್ಲಿಯ ಪುತ್ತಿಗೆ ಮಠದ ಪೀಠಾಧಿಪತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅವರ ಮೂರನೇ ಬಾರಿಯ ಅಮೆರಿಕಾ ಕಲಾ ಪ್ರವಾಸದ ವೇಳೆ ನೀಡಿದ ಕಲಾ ಸೇವೆಯನ್ನು ಗೌರವಿಸಿ ದಿನಾಂಕ 05-11-2023ರಂದು ಈ ಪುರಸ್ಕಾರ ಪತ್ರ ನೀಡಿ ಅಭಿನಂದಿಸಿದರು.
ಅಮೇರಿಕಾದ ಅರಿಝೋನಾ ಎಂಬಲ್ಲಿರುವ ಸುಜ್ಞಾನ ರಿಲಿಜಿಯಸ್ ಆ್ಯಂಡ್ ಚಾರಿಟೇಬಲ್ ಫೌಂಡೇಶನ್ ವೆಂಕಟಕೃಷ್ಣ ದೇವಸ್ಥಾನದಲ್ಲಿ ದಿನಾಂಕ 28-10-2023ರಿಂದ 04-11-2023ರವರೆಗೆ ನಡೆದ ‘ಶ್ರೀ ಯಜುರ್ವೇದ ಸಂಹಿತ ಯಾಗ’ ಮತ್ತು ‘ಸಹಸ್ರ ಅಥರ್ವಶೀರ್ಷ ಮಹಾಗಣಪತಿ ಯಾಗ’ ಕಾರ್ಯಕ್ರಮದಲ್ಲಿ ಶ್ರೀ ಪ್ರಕಾಶ ದೇವಾಡಿಗರು ಭಾರತೀಯ ಸಾಂಪ್ರದಾಯಿಕ ಸ್ಯಾಕ್ಸೋಫೋನ್ ವಾದನವನ್ನು ಮನೋಜ್ಞವಾಗಿ ನಡೆಸಿಕೊಟ್ಟಿದ್ದರು. ಅವರು ಈ ಬಾರಿ ಭಾರತದಿಂದ ಆಹ್ವಾನಿತರಾಗಿ ಅಮೇರಿಕಕ್ಕೆ ಮೂರನೇ ಬಾರಿಗೆ ಪ್ರಯಾಣ ಕೈಗೊಂಡಿದ್ದರು. ಸ್ವಾಮೀಜಿಗಳು ಪುರಸ್ಕಾರ ಪ್ರದಾನ ಮಾಡುವ ವೇಳೆ ಮಠದ ಪ್ರಧಾನ ಅರ್ಚಕ ಕಿರಣ್ ರಾವ್ ಉಜಿರೆ ಹಾಗೂ ಸ್ವಾಮೀಜಿಗಳ ಧಾರ್ಮಿಕ ಕೈಂಕರ್ಯದ ಪರಿವಾರ ಬಂಧುಗಳು ಉಪಸ್ಥಿತರಿದ್ದರು.