ವಾಮಂಜೂರು : ಅಂಗವಿಕಲರ ಕಲ್ಯಾಣ ಸಂಸ್ಥೆ ಮಂಗಳೂರು ಮತ್ತು ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಆಶ್ರಯದಲ್ಲಿ ಕೀರ್ತಿಶೇಷ ರತ್ನಮ್ಮ ಹೆಗ್ಡೆಯವರ ಸ್ಮರಣಾರ್ಥ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಕಲೋತ್ಸವ 2023’ ಕಾರ್ಯಕ್ರಮ ವಾಮಂಜೂರಿನ ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆಯಲ್ಲಿ ದಿನಾಂಕ 29-11-2023ರಂದು ನಡೆಯಿತು.
ಉಜಿರೆ ಎಸ್.ಡಿ.ಎಂ. ಎಜುಕೇಶನ್ ಸೊಸೈಟಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಯುತ ಸೋಮಶೇಖರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ “ಶಿಕ್ಷಣ ಎಂದರೆ ವ್ಯಕ್ತಿಯ ನಡವಳಿಕೆ. ಅದನ್ನು ರೂಪಿಸುವಲ್ಲಿ ಎಸ್.ಡಿ.ಎಂ. ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ಕಲ್ಪಿಸಿದರೆ ಮಕ್ಕಳ ಸುಪ್ತ ಪ್ರತಿಭೆಗಳು ಅನಾವರಣಗೊಳ್ಳುತ್ತವೆ” ಎಂದರು.
ಮುಖ್ಯ ಅತಿಥಿಯಾಗಿ ಡಾ. ಕೆ.ದೇವರಾಜ್ ಖಜಾಂಚಿಗಳು ಅಂಗವಿಕಲರ ಕಲ್ಯಾಣ ಸಂಸ್ಥೆ (ರಿ) ಮಂಗಳೂರು ಉಪಸ್ಥಿತರಿದ್ದು “ಮಕ್ಕಳ ಪ್ರತಿಭೆಗಳಿಗೆ ಕಲೋತ್ಸವ ಒಂದು ಉತ್ತಮ ವೇದಿಕೆ ಉತ್ತಮ” ಎಂದರು. ಫ್ರೌಡಶಾಲಾ ಮುಖ್ಯೋಪಾಧ್ಯಾಯ ಶ್ರೀಯುತ ರಮೇಶ್ ಆಚಾರ್ಯ ಸ್ವಾಗತಿಸಿ, ಶಾಲಾ ಆಡಳಿತಾಧಿಕಾರಿ ಶ್ರೀ ನರೇಶ್ ಮಲ್ಲಿಗೆಮಾಡು ವಂದಿಸಿ, ಶಿಕ್ಷಕಿ ರಮ್ಯಾ ನಿರೂಪಿಸಿದರು. ಮಂಗಳೂರು ಕ್ಷೇತ್ರ ಶಿಕ್ಷಣ ಅಧಿಕಾರಿ ಶ್ರೀಯುತ ಎಚ್.ಆರ್.ಈಶ್ವರ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಅನಿತಾ ಅಶೋಕ್, ಶಿಕ್ಷಣಾ ಇಲಾಖೆಯ ವೇಣುಗೋಪಾಲ, ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ಉದಯ ಕುಡುಪು, ಐ.ಟಿ.ಐ. ವಿಭಾಗದ ತರಬೇತಿ ಅಧಿಕಾರಿಯಾದ ಶ್ರೀಮತಿ ಪ್ರಪುಲ್ಲ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಾಕ್ಷಿ ಉಪಸ್ಥಿತರಿದ್ದರು. ಸಾರಿಕಾ ಪಕ್ಕಳ, ವೈಷ್ಣವಿ ಪ್ರಭು, ಸುಬ್ಬರಾವ್ ತೀರ್ಪುಗಾರರಾಗಿದ್ದರು.
ಕಲೋತ್ಸವದಲ್ಲಿ ವಿಶೇಷ ಮಕ್ಕಳಿಗೆ 5-15 ಮತ್ತು 15-30 ವರ್ಷದವರಿಗಾಗಿ 2 ವಿಭಾಗಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪಂದನ ವಿಶೇಷ ಶಾಲೆ (ಉಡುಪಿ), ನಾರಾಯಣ ವಿಶೇಷ ಮಕ್ಕಳ ಶಾಲೆ (ತಲ್ಲೂರು, ಕುಂದಾಪುರ), ಜೀವನ್ ವೆಲ್ಫೇರ್ ಟ್ರಸ್ಟ್ ಅರುಣೋದಯ ವಿಶೇಷ ಶಾಲೆ (ಕಾರ್ಕಳ), ರೋಮನ್ ಕ್ಯಾಥೋಲಿಕ್ ಲೋಬೊ ಬ್ಲೈಂಡ್ ಸ್ಕೂಲ್ (ಮಂಗಳೂರು), ಲಯನ್ಸ್ ವಿಶೇಷ ಶಾಲೆ (ಸುರತ್ಕಲ್), ಆಸರೆ ವಿಶೇಷ ಮಕ್ಕಳ ಶಾಲೆ (ಮಣಿಪಾಲ), ಆಶಾ ನಿಲಯ ವಿಶೇಷ ಮಕ್ಕಳ ಸಂಸ್ಥೆ (ಉಡುಪಿ), ಸೈಂಟ್ ಆಗ್ನೇಸ್ ವಿಶೇಷ ಮಕ್ಕಳ ಶಾಲೆ (ಮಂಗಳೂರು), ವಿಜೇತ ವಸತಿಯುತ ವಿಶೇಷ ಶಾಲೆ (ಕಾರ್ಕಳ), ಸೈಂಟ್ ಮೇರೀಸ್ ಸ್ಪೆಷಲ್ ಸ್ಕೂಲ್ (ಕಿನ್ನಿಗೋಳಿ), ಸ್ಫೂರ್ತಿ ಸ್ಪೆಷಲ್ ಸ್ಕೂಲ್ (ಮೂಡಬಿದ್ರೆ), ಚೇತನ ವಿಶೇಷ ಶಾಲೆ (ಆನೆಕೆರೆ, ಕಾರ್ಕಳ), ಕಾರುಣ್ಯ ವಿಶೇಷ ಶಾಲೆ (ಪಡುಕರೆ, ಮಲ್ಪೆ) ಸಹಿತ ಒಟ್ಟು 14 ಶಾಲೆಗಳು ಭಾಗವಹಿಸಿದವು.
ದಿವ್ಯಾಂಗ ಮಕ್ಕಳಿಗೆ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘ ಲಿ. (ರಿ) (ಕೆ.ಎಂ.ಎಪ್.) ವತಿಯಿಂದ ಪಾನೀಯ ವ್ಯವಸ್ಥೆ ಮಾಡಲಾಗಿತ್ತು.
ಭಾಗವಹಿಸಿದ ಎಲ್ಲ ಮಕ್ಕಳಿಗೂ ಸ್ಮರಣಿಕೆ ನೀಡಲಾಯಿತು. ಸಾಂಸ್ಕೃತಿಕ ಸ್ಪರ್ಧೆ ವಿಭಾಗ 1ರಲ್ಲಿ ಸ್ಪೂರ್ತಿ ವಿಶೇಷ ಶಾಲೆ ಪ್ರಥಮ, ವಿಜೇತ ವಿಶೇಷ ಶಾಲೆ ದ್ವಿತೀಯ ಮತ್ತು ಸೇಂಟ್ ಮೇರಿಸ್ ವಿಶೇಷ ಶಾಲೆ ಕಿನ್ನಗೋಳಿ ತೃತೀಯ ಬಹುಮಾನ ಪಡೆದರು. ವಿಭಾಗ 2ರಲ್ಲಿ ಅಶಾನಿಲಯ ವಿಶೇಷ ಶಾಲೆ ಉಡುಪಿ ಪ್ರಥಮ, ಸಾನಿಧ್ಯ ವಸತಿಯುತ ವಿಶೇಷ ಶಾಲೆ ಮಂಗಳೂರು ದ್ವಿತೀಯ ಮತ್ತು ಲಯನ್ಸ್ ವಿಶೇಷ ಶಾಲೆ ಸುರತ್ಕಲ್ ತೃತೀಯ ಬಹುಮಾನ ಪಡೆದರು.