ಬೆಂಗಳೂರು : ಬೆಂಗಳೂರಿನ ಗಾಂಧಿ ಭವನದಲ್ಲಿ ಲೇಖಕಿ ಡಾ.ಕೆ. ಷರೀಫಾ ಅವರಿಗೆ ಮುಸ್ಲಿಮ್ ಲೇಖಕರ ಸಂಘದಿಂದ ಕೊಡಮಾಡುವ 2022ನೇ ಸಾಲಿನ ಮರ್ಹೂಮ್ ಯು.ಟಿ. ಫರೀದ್ ಸ್ಮರಣಾರ್ಥ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮತ್ತು ಕನ್ನಡ, ಉರ್ದು ಕವಿಗೋಷ್ಠಿ ಸಮಾರಂಭವು ದಿನಾಂಕ 29-11-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ “ವಾರಾಂತ್ಯಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮಾಲ್, ಬೀಚ್ ಹಾಗೂ ವಸ್ತು ಪ್ರದರ್ಶನಗಳ ಮಳಿಗೆಗಳಿಗೆ ಭೇಟಿ ನೀಡುವಂತೆ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಲು ಪ್ರೋತ್ಸಾಹ ನೀಡುವ ಮೂಲಕ ಬಾಲ್ಯದಲ್ಲಿಯೇ ಮಕ್ಕಳಿಗೆ ಸಾಹಿತ್ಯಾಸಕ್ತಿ ಬೆಳೆಸಬೇಕು. ಇಂಟರ್ನೆಟ್ನ ಈ ಯುಗದಲ್ಲಿ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ, ವಾಸ್ತವವಾಗಿ ಸಾಹಿತ್ಯ ಕ್ಷೇತ್ರವು ಜೀವನದಲ್ಲಿ ಬೆಳೆಯಲು ವ್ಯಾಪಕ ಅವಕಾಶ ಒದಗಿಸುತ್ತದೆ. ಸಾಹಿತ್ಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಹಾಗಾಗಿ, ಮನೆಯಲ್ಲಿಯೇ ಮಕ್ಕಳಿಗೆ ಬಾಲ್ಯದಿಂದಲೇ ಪೋಷಕರು ಈ ಕಾರ್ಯಕ್ಕೆ ಉತ್ತೇಜನ ನೀಡಬೇಕು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಮುಸ್ಲಿಮರ ಸಂಖ್ಯೆ ಬಹಳ ವಿರಳವಾಗಿತ್ತು. ಅದರಲ್ಲೂ ಮಹಿಳೆಯರು ಬಹಳ ಅಪರೂಪವಾಗಿದ್ದರು. ಕಾಲ ಬದಲಾದಂತೆ ಎಲ್ಲ ಕ್ಷೇತ್ರ ಬದಲಾಗಿದೆ. ಈಗ ಸಾಕಷ್ಟು ಮುಸ್ಲಿಮ್ ಸಮುದಾಯದ ಮಂದಿ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಆ ಮೂಲಕ ಸಮುದಾಯದ ಒಳಗಿನ ತಲ್ಲಣಗಳನ್ನು ಹೊರ ಜಗತ್ತಿಗೆ ತಿಳಿಸುತ್ತಿದ್ದಾರೆ” ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚಿಂತಕ, ಬರಹಗಾರ ಡಾ. ನಟರಾಜ್ ಹುಳಿಯಾರ್ ಮಾತನಾಡಿ, “ಇಂದು ಕೋಮುದ್ವೇಷವೇ ಇಂದು ಬಹಳ ವಿಜೃಂಭಿಸುತ್ತಿದೆ. ಆದರೆ ವಾಸ್ತವವಾಗಿ ಸಾಹಿತ್ಯ ಕ್ಷೇತ್ರದ ಹೆಚ್ಚಿನ ಬರಹಗಾರರು ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ಪರವಾಗಿ ನಿಲುವು ಇರುವವವರೇ ಹೆಚ್ಚು ಇದ್ದಾರೆ. ಆ ಗ್ಯಾರಂಟಿ ಆಶ್ವಾಸನೆ ನಾನು ಓರ್ವ ಸಾಹಿತಿಯಾಗಿ ಕೊಡಬಲ್ಲೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಉರ್ದು-ಕನ್ನಡ ಕವಿಗೋಷ್ಠಿಯಲ್ಲಿ ಕವಿಗಳಾಗಿ ಭಾಗವಹಿಸಿದ್ದ ಶಿವಕುಮಾರ ಮಾವಲಿ, ಮುಹಮ್ಮದ್ ಆಝಮ್ ಶಾಹಿದ್, ಮುನೀರ್ ಅಹ್ಮದ್ ಜಾಮಿ, ಫರ್ಹನಾಝ್ ಮಸ್ಕಿ ಹಾಗೂ ನದೀಮ್ ಫಾರೂಖಿ ತಮ್ಮ ಕವನಗಳನ್ನು ವಾಚಿಸಿದರು. ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ಎ.ಕೆ. ಕುಕ್ಕಿಲ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ನಿರೂಪಿಸಿದರು. ಸಲೀಂ ಬೋಳಂಗಡಿ ಸ್ತುತಿಗೀತೆ ಹಾಡಿದರೆ, ಸಯೀದ್ ಇಸ್ಮಾಯಿಲ್ ವಂದಿಸಿದರು.