ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘ ನಗರದ ಎನ್.ಆರ್.ಕಾಲನಿಯಲ್ಲಿರುವ ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ ಹಿರಿಯ ಲೇಖಕಿ ‘ಎಚ್.ಎಸ್. ಪಾರ್ವತಿ ದತ್ತಿ ನಿಧಿ’ 2022 ಮತ್ತು 2023ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 30-11-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಮಾತನಾಡುತ್ತಾ “ಲೇಖಕಿಯರ ಸಾಹಿತ್ಯ ನಿರ್ಲಕ್ಷಿಸಿ ನಾವು ಕನ್ನಡ ಸಾಹಿತ್ಯವನ್ನು ಅವಲೋಕಿಸಿದರೆ ಅದನ್ನು ಶ್ರೇಷ್ಠತೆಯ ಸೊಕ್ಕು ಎಂದೇ ಭಾವಿಸಬೇಕಾಗುತ್ತದೆ. ಎಲ್ಲರನ್ನೂ, ಎಲ್ಲವನ್ನೂ ಒಳಗೊಂಡು ಮುನ್ನಡೆದಾಗ ಅದು ಶ್ರೇಷ್ಠತೆಯ ಶೋಧವಾಗುತ್ತದೆ. ಸಾಹಿತ್ಯ ವಲಯದಲ್ಲಿ ಶ್ರೇಷ್ಠತೆಯ ಸೊಕ್ಕು ಇದೆ, ಅದು ಶ್ರೇಷ್ಠತೆಯ ಶೋಧ ಆಗಬೇಕು. ಆಗ ಮಾತ್ರ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ನ್ಯಾಯ ಒದಗಿಸಲು ಸಾಧ್ಯ. ಜನಪ್ರಿಯ ಸಾಹಿತಿ ಎಚ್.ಎಸ್.ಪಾರ್ವತಿ, ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ, ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ ಈ ಮೂವರೂ ಸಾಹಿತ್ಯವಲಯದ ಬೇರೆ ಬೇರೆ ಪ್ರಕಾರಗಳಲ್ಲಿ ಗುರುತಿಸಿಕೊಂಡವರು. ವಿಭಿನ್ನ ರೀತಿಯ ಈ ಮೂರು ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಚರ್ಚಿಸುತ್ತಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಆದರ್ಶಪ್ರಾಯ” ಎಂದು ಹೇಳಿದರು.
ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್.ಪುಷ್ಪಾ ಮಾತನಾಡಿ, ಇತ್ತೀಚೆಗೆ ನಡೆಯುತ್ತಿರುವ ಕೆಲ ವಿದ್ಯಾಮಾನಗಳು ಸಂಘದ ಜವಾಬ್ದಾರಿ ಬಗ್ಗೆ ಚಿಂತಿಸುವಂತೆ ಮಾಡಿವೆ. ಹಿರಿಯ ಲೇಖಕಿ ನುಗ್ಗೇಹಳ್ಳಿ ಪಂಕಜ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿತ್ತು. ಇಂತಹ ಸಂದರ್ಭದಲ್ಲಿ ಲೇಖಕಿಯರ ಸಂಘ ಏನು ಮಾಡುತ್ತಿದೆ ಎಂಬ ಪ್ರಶ್ನೆ ಎದ್ದಿತ್ತು. ಮಹಿಳಾ ಲೇಖಕಿಯರ ಮೇಲೆ ಉದ್ದೇಶಪೂರಿತವಾದ ಅಕ್ಷರ ದಾಳಿಯನ್ನು ಸಂಘ ಖಂಡಿಸುತ್ತದೆ ಎಂದರು.
ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮಾತನಾಡಿ, ಸಂಶೋಧನೆಯಲ್ಲಿ ಬಹುಮುಖ್ಯವಾಗಿ ಬರುವುದು ಕ್ಷೇತ್ರ ಕಾರ್ಯಾಚರಣೆ. ಈಗಿನ ಹಾಗೆ ಆಗ ಸಾಮಾಜಿಕ ಜಾಲತಾಣಗಳು ಪ್ರಬಲವಾಗಿಲ್ಲದ ಆ ಕಾಲದಲ್ಲಿ ನಾವು ಓಡಾಡಿ ವಿಷಯ ಸಂಗ್ರಹಿಸಿ ಬರೆಯಬೇಕಾಗಿತ್ತು ಎಂದರು. ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ ಮಾತನಾಡಿ “ಆರಂಭ ಘಟ್ಟದಲ್ಲಿ ಬಂದಂತಹ ಎಲ್ಲ ಲೇಖಕಿಯರ ಕೃತಿಗಳು ಪ್ರಶ್ನಿಸುವ ಹಾಗೆಯೇ ಇದ್ದವು. ಅವುಗಳನ್ನು ಜನಪ್ರಿಯ ಸಾಹಿತ್ಯ ಎಂದು ಬದಿಗೆ ಸರಿಸಲು ಸಾಧ್ಯವಿಲ್ಲ. ಮುಖ್ಯವಾಗಿ ಹೆಣ್ಣಿನ ಭಾಷೆಯನ್ನೇ ನಾವಿನ್ನೂ ಅರಿಯಬೇಕಾದ ಅಗತ್ಯವಿದೆ. ಪ್ರಾರಂಭದಲ್ಲಿ ಪುರುಷ ನಿರ್ದೇಶಿತ ಚೌಕಟ್ಟಿನಲ್ಲಿ ಮಹಿಳೆಯರು ಬರೆಯುತ್ತಾ ಹೋದರು. ಇಂದು ಸ್ವತಂತ್ರವಾಗಿ ಬರೆದರೂ ಅವರನ್ನು ಓದುವ, ಅರಿಯುವ ಅಗತ್ಯವಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 2022ನೇ ಸಾಲಿನ ‘ಎಚ್.ಎಸ್. ಪಾರ್ವತಿ ದತ್ತಿ ಪ್ರಶಸ್ತಿ’ಯನ್ನು ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮತ್ತು 2022ನೇ ಸಾಲಿನ ಪ್ರಶಸ್ತಿಯನ್ನು ಡಾ. ಎಂ.ಎಸ್. ಆಶಾದೇವಿ ಅವರಿಗೆ ನೀಡಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಉಪನ್ಯಾಸಕಿ ಡಾ. ಎಂ.ಎಸ್. ವಿದ್ಯಾ, ಲೇಖಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ, ಖಜಾಂಚಿ ಮಂಜುಳಾ ಶಿವಾನಂದ, ಕಾರ್ಯಕಾರಿ ಸಮಿತಿಯ ಸದಸ್ಯೆ ಸರ್ವಮಂಗಳಾ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಎಚ್.ಎಸ್. ಪಾರ್ವತಿ
ದಿ. ಎಚ್.ಎಸ್. ಪಾರ್ವತಿ ಅವರು ಕನ್ನಡದ ಪ್ರಸಿದ್ಧ ಲೇಖಕಿ, ಅನುವಾದಕಿ, ವಿವಿಧ ಭಾಷೆಗಳ ನೂರಾರು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಆಕಾಶವಾಣಿಯ ರಾಷ್ಟ್ರೀಯ ನಾಟಕಗಳ ಪ್ರಸಾರದಲ್ಲಿ ಚಿರಪರಿಚಿತರಾದವರು. 1934ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿಯೇ ಬರವಣಿಗೆ ಆರಂಭಿಸಿ ಆಕಾಶವಾಣಿ ಕಲಾವಿದರಾಗಿ, ಕಾರ್ಯಕ್ರಮ ನಿರ್ವಾಹಕಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದವರು. ಕಥೆ, ಕಾದಂಬರಿ, ಪ್ರಬಂಧ, ಜೀವನ ಚರಿತ್ರೆ, ನಾಟಕ, ಅನುವಾದ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವ ಸಮ್ಮಾನಗಳು ಸಂದಿವೆ.
ಡಾ. ಇಂದಿರಾ ಹೆಗ್ಗಡೆ
ಸಮಾಜಮುಖಿ ಚಿಂತಕಿ ಡಾ. ಇಂದಿರಾ ಹೆಗ್ಗಡ್ಡೆ ಖ್ಯಾತ ಸಾಹಿತಿ-ಸಂಶೋಧಕಿ. ಇವರು ತುಳು, ಕನ್ನಡ ಭಾಷೆಗಳಲ್ಲಿ ಕಾವ್ಯ, ಕಾದಂಬರಿ, ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು 1949ರಂದು ಮಂಗಳೂರಿನ ಕಿನ್ನಿಗೋಳಿಯ ಎಳತ್ತೂರು ಗುತ್ತಿನ ಮನೆಯಲ್ಲಿ. ಡಾ. ಇಂದಿರಾ ಹೆಗ್ಗಡೆಯವರು ಸಣ್ಣ ಕಥೆಗಳನ್ನು ಬರೆಯುವ ಮೂಲಕ ಸಾಹಿತ್ಯಲೋಕವನ್ನು ಪ್ರವೇಶಿಸಿದರು. ಇವರ ಸಂಶೋಧನಾ ಕೃತಿ ‘ತುಳುವರ ಮೂಲತಾನ ಆದಿ ಆಲಡೆ: ಪರಂಪರೆ ಮತ್ತು ಪರಿವರ್ತನೆ’ ಒಟ್ಟು ತುಳುನಾಡಿನ ನೆಲಮೂಲದ ಜನರ ಮತ್ತು ಅವರ ಉಪಾಸನಾ ಆಚರಣೆಗಳನ್ನು ಒಳಗೊಂಡ ಸಂಶೋಧನಾ ಮಹಾಪ್ರಬಂಧವಾಗಿದೆ. ಪುರುಷರೇ ನಿಮಗೆ ನೂರು ನಮನಗಳು, ಮೋಹಿನಿಯ ಸೇಡು, ಬದುಕು ಎಂಬ ಮೂರು ಕಥಾ ಸಂಕಲನಗಳನ್ನು, ಬದಿ, ಒಡಲುರಿ, ಅಮಾಯಕಿ ಮುಂತಾದ ಕಾದಂಬರಿಗಳನ್ನು, ಒಂದು ಕವನ ಸಂಕಲನವನ್ನು ಹೊರತಂದಿದ್ದಾರೆ. ‘ಗುತ್ತಿನಿಂದ ಸೈನಿಕ ಜಗತ್ತಿಗೆ’ ಎಂಬ ಅನುಭವ ಕಥನವನ್ನು ತಮ್ಮ ಪತಿ ಎಸ್.ಆರ್. ಹೆಗ್ಡೆಯವರೊಂದಿಗೆ ಸೇರಿ ರಚಿಸಿದ್ದಾರೆ. ‘ಬಂಟರು : ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ’ ಇವರಿಗೆ ಬಹಳ ಹೆಸರು ತಂದ ಕೃತಿ. ಸಂಶೋಧನೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಇವರಿಗೆ ಹಲವು ಪ್ರಶಸ್ತಿ, ಸನ್ಮಾನಗಳು ದೊರಕಿವೆ.
ಡಾ. ಎಂ.ಎಸ್. ಆಶಾದೇವಿ
ಡಾ. ಎಂ.ಎಸ್. ಆಶಾದೇವಿ ಅವರು ಕನ್ನಡದ ಹೆಸರಾಂತ ವಿಮರ್ಶಕರು, ಅನುವಾದಕಿ, ಉತ್ತಮ ವಾಗ್ಮಿ. ವಚನ ಸಾಹಿತ್ಯ, ವಿಮರ್ಶೆ ಮತ್ತು ಮೀಮಾಂಸೆ, ಸ್ತ್ರೀವಾದ, ಸ್ತ್ರೀ ಸಂಕಥನಗಳ, ಸಾಹಿತ್ಯ ಚರಿತ್ರೆಯ ಕುರಿತು ಆಳವಾಗಿ ಮತ್ತು ಅಧಿಕೃತವಾಗಿ ಮಾತನಾಡಬಲ್ಲ ವಿಮರ್ಶಕರು. ಇವರು 1966 ದಾವಣಗೆರೆ ಜಿಲ್ಲೆಯ ನೇರಳಿಗೆಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಡಿ.ಆರ್.ನಾಗರಾಜ್ ಮಾರ್ಗದರ್ಶನದಲ್ಲಿ ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ ಕುರಿತು ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಾರಿಕೇಳಾ, ಸ್ತ್ರೀಮತವನುತ್ತರಿಸಲಾಗದೇ (ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳು), ಉರಿಚಮ್ಮಾಳಿಗೆ (ಡಿ.ಆರ್. ನಾಗರಾಜ ಅವರ ದಿ ಪ್ಲೇಮಿಂಗ್ ಫೀಟ್’ ಕೃತಿಯ ಅನುವಾದ), ವಚನ ಪ್ರವೇಶ (ಸಂಪಾದನೆ), ಭಾರತದ ಬಂಗಾರ ಪಿ.ಟಿ. ಉಷಾ, ನಡುವೆ ಸುಳಿವಾತ್ಮ, ಬೆಳಕಿಗಿಂತ ಬೆಳ್ಳಗೆ, ವೀಣಾ ಶಾಂತೇಶ್ವರ ವಾಚಿಕೆ – ಇವರ ಪ್ರಮುಖ ಕೃತಿಗಳು. ಪ್ರಸ್ತುತ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕೆ. ಇಂದಿರಾ ಪ್ರಶಸ್ತಿ, ಇನ್‌ಫೋಸಿಸ್ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸಾಹಿತ್ಯಶ್ರೀ ಗೌರವ ಪ್ರಶಸ್ತಿ, ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಟ್ಯಾಗೋರ್ ನ್ಯಾಷನಲ್ ಫೆಲೋಷಿಪ್ ಮುಂತಾದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.