ಕೋಟ : ಕೋಟ ವಿವೇಕ ವಿದ್ಯಾಸಂಸ್ಥೆಯ ಅಮೃತಮಹೋತ್ಸವ ಹಾಗೂ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ 02-12-2023 ರಿಂದ 04-12-2023ರಂದು ನಡೆಯಿತು.
ದಿನಾಂಕ 02-12-2023 ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಎಂ. ಮೋಹನ್ ಆಳ್ವ ಮಾತನಾಡಿ “ಖಾಸಗಿ ಚಿಂತನೆ ಮೂಲಕ ಶಿಕ್ಷಣ ಅಭಿವೃದ್ಧಿ ಕಾಣಬೇಕು. ಕನ್ನಡ ಮಾಧ್ಯಮದ ಶಿಕ್ಷಣ ಮಟ್ಟ ಕುಸಿತಕ್ಕೆ ಸರಕಾರವೇ ನೇರ ಕಾರಣವಾಗಿದೆ. ಶಿಕ್ಷಣದ ವ್ಯವಸ್ಥೆಯಲ್ಲಿ ಕಾಲಕ್ಕನುಗುಣವಾಗಿ ಬದಲಾವಣೆ ಅಗತ್ಯ.” ಎಂದು ಕೇಳಿದರು. ಈ ಸಂದರ್ಭ ಅಮೃತ ಮಹೋತ್ಸವದ ಸ್ಮರಣ ಸಂಚಿಕೆಯನ್ನು ವಿಶ್ರಾಂತ ಪ್ರೊಫೆಸರ್ ಡಾ. ರಾಧಾಕೃಷ್ಣ ರಾವ್ ಬಿಡುಗಡೆ ಗೊಳಿಸಿದರು. ಮುಂಬಯಿ ಒ.ಎನ್.ಜಿ.ಸಿ.ಯ ನಿವೃತ್ತ ಚೀಫ್ ಜನರಲ್ ಮ್ಯಾನೇಜರ್ ಬನ್ನಾಡಿ ನಾರಾಯಣ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಚಿತ್ರ ನಟಿ ವಿನಯ ಪ್ರಸಾದ್ ಭಾಗವಹಿಸಿದರು.
ದಿನಾಂಕ 03-12-2023 ರಂದು ಕೋಟ ವಿದ್ಯಾ ಸಂಘ (ರಿ.) ಇದರ ಅಧ್ಯಕ್ಷರಾದ ಸಿ. ಎ. ಆಗಿರುವ ಪಿ ಪ್ರಭಾಕರ ಮಯ್ಯ ಇವರ ಅಧ್ಯಕ್ಷತೆಯೆಲ್ಲಿ ನಡೆದ ಕಾರ್ಯಕ್ರಮವನ್ನು ಬೆಂಗಳೂರಿನ ಜಿ. ಐ ಆಟೋ ಪ್ರೈವೇಟ್ ಲಿಮಿಟೆಡ್ ಮತ್ತು ವಿಮೆನ್ ಮಲ್ಟಿಪ್ಲಗ್ ಪ್ರೈವೇಟ್ ಲಿಮಿಟೆಡ್ ಇದರ ಅಧ್ಯಕ್ಷರಾದ ಶ್ರೀ ಚೇಂಪಿ ಮಾಧವ ಪೈ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಮಾತನಾಡಿ “ಕೋಟ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾ ಕಲಿಕೆಯ ಜತೆಗೆ ರಂಗಭೂಮಿ ಶಿಕ್ಷಣಕ್ಕಾಗಿ ಸಮಯ ಮೀಸಲಿರಿಸಿದರೆ ಮುಂದೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.” ಎಂದು ಹೇಳಿದರು.
ದಿನಾಂಕ 04-12-2023 ರಂದು ನಡೆದ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದ ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ.ಜಿ ಶಂಕರ್ ಮಾತನಾಡಿ “ವಿದ್ಯಾರ್ಥಿಗಳು ಬಹು ಎತ್ತರಕ್ಕೆ ಬೆಳೆಯಲು ಶಿಸ್ತು ಅತ್ಯಗತ್ಯ. ವಿವೇಕ ವಿದ್ಯಾಸಂಸ್ಥೆ ಗ್ರಾಮೀಣ ಭಾಗದ ಸಂಸ್ಕಾರ ಭರಿತ ಶಿಕ್ಷಣದ ದೇಗುಲವಾಗಿ ಮಾರ್ಪಾಡುಗೊಂಡಿದೆ. ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಶೈಕ್ಷಣಿಕ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದಿದೆ.” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ “ಗಾಂಜಾ, ಡ್ರಗ್ಸ್ ಮುಂತಾದ ಮಾದಕ ವ್ಯಸನಗಳು ಇಂದು ಸಮಾಜದಲ್ಲಿ ಅತ್ಯಂತ ದೊಡ್ಡ ಪಿಡುಗಾಗಿ ಬೆಳೆಯುತ್ತಿದೆ ಹಾಗೂ ಯುವ ಜನಾಂಗ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದರ ದಾಸರಾಗುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಹೆತ್ತವರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ಜತೆಗೆ ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಾನವೀಯತೆಗಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ ಯಾವುದೇ ವಿದ್ಯಾಸಂಸ್ಥೆ ಅಥವಾ ಮನೆಗಳಿರಬಹುದು ಮೊದಲು ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದರು.
ಅಮೃತಮಹೋತ್ಸವ ಕಾರ್ಯಕ್ರಮದ ಮೂರೂದಿನ ವಸ್ತು ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.