ತೀರ್ಥಹಳ್ಳಿ: ತೀರ್ಥಹಳ್ಳಿ 10ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 29-11-2023ರಂದು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಿತು.
ಸಮ್ಮೇಳನವನ್ನು ಉದ್ಘಾಟಿಸಿದ ಖ್ಯಾತ ಸಾಹಿತಿ ಹಾಗೂ ಚಿಂತಕ ಡಾ.ರಾಜೇಂದ್ರ ಚೆನ್ನಿ ಮಾತನಾಡಿ “ಕನ್ನಡದ ಕಂಪನ್ನು ಜಗತ್ತಿಗೆ ಸಾರಿದ ಜಗದ ಕವಿ ಕುವೆಂಪು ಇವರು ಸಾಹಿತ್ಯ ಲೋಕಕ್ಕೆ ಆದರ್ಶವಾಗಿದ್ದಾರೆ. ಪ್ರಾದೇಶಿಕ ಸಂಸ್ಕೃತಿ ಅತಿ ಮುಖ್ಯವಾಗಿದೆ. ಅಂತಹ ಸಂಸ್ಕೃತಿಯನ್ನು ಸಾರಿದ್ದು ತೀರ್ಥಹಳ್ಳಿ ಹಾಗೂ ಕುವೆಂಪು ಎನ್ನುವುದನ್ನು ಮರೆಯಬಾರದು. ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳನ್ನು ವಿಶ್ವದಗಲ ಸಾರಿದ್ದು ಕನ್ನಡ ಸಾಹಿತ್ಯ. ಆನೇಕ ಚಳುವಳಿಗಳು ಹುಟ್ಟಿಕೊಂಡದ್ದು ಕನ್ನಡದ ನೆಲದಲ್ಲಿ. ದೇಶಕ್ಕೆ ಹಾಗೂ ಜಗತ್ತಿಗೆ ಆನೇಕ ಮಾದರಿಗಳನ್ನು ನೋಡ ನೀಡಿದ ಕನ್ನಡ ಜಗತ್ತು ವಿಶಿಷ್ಟ ಹಾಗೂ ವಿಭಿನ್ನ. ಸಮಾಜವಾದಿ ಚಿಂತನೆಗಳನ್ನು ಬಿಂಬಿಸಿದ ನೆಲ ಇದಾಗಿದೆ. ಪ್ರಸ್ತುತವಾಗಿ ಕಂಡುಬರುತ್ತಿರುವುದು ಸಾಂಸ್ಕೃತಿಕ ಮರೆವು ಎನ್ನುವ ಬಿಕ್ಕಟ್ಟು ನಮ್ಮನ್ನೆಲ್ಲ ಕಾಡುತ್ತಿದೆ. ಆಧುನಿಕತೆಯ ನೆಪದಲ್ಲಿ ಪರಿಸರವನ್ನು ನಾಶ ಮಾಡಲಾಗುತ್ತಿದೆ. ಅಭಿವೃದ್ಧಿಯ ಶಾಪದಿಂದ ಜೀವ ಸಂಕುಲ ನಾಶದ ಹಂತಕ್ಕೆ ಬರುತ್ತಿದೆ. ನಮ್ಮ ಉಳಿವಿಗೆ ನಾವೇ ಮುಂದಾಗಬೇಕು” ಎಂದರು.
ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ತೀರ್ಥಹಳ್ಳಿ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಾತನಾಡಿ “ಸಾಹಿತ್ಯ ಸಂಗೀತ ಕಲೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ. ಸಾಹಿತ್ಯ ಮನುಷ್ಯನ ಕಲ್ಮಶಗಳನ್ನು ಹೊರಹಾಕುವ ಕೆಲಸ ಈಗ ಮಾಡಬೇಕಾಗಿದೆ. ಇತ್ತೀಚೆಗೆ ಮನುಷ್ಯತ್ವ ಮರೆತು ಬದುಕು ರೂಪುಗೊಳ್ಳುತ್ತಿರುವುದು ಬೇಸರದ ಸಂಗತಿ. ಕುವೆಂಪು ನೆಲ ಅಧ್ಯಯನ ಮತ್ತು ಕಸ್ತೂರಿ ರಂಗನ್ ವರದಿಯನ್ನು ಪುನರ್ ಪರಿಶೀಲಿಸುವ ಕೆಲಸ ಆಗಬೇಕು. ಪರಿಸರ ಬಿಟ್ಟು ನಮ್ಮ ಬದುಕು ಇಲ್ಲ. ಸಾಹಿತ್ಯ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು, ಸಾಹಿತ್ಯ ಸಮ್ಮೇಳನಗಳ ವಿಷಯಗಳು ಹೊಸ ಚಿಂತನೆಗಳನ್ನು ಮೂಡಿಸಬೇಕು” ಎಂದರು.
ಬಳಿಕ ನಡೆದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಎನ್.ರವಿಕುಮಾರ್ “ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಕಾವ್ಯವು ಸಶಕ್ತವಾಗಿರುವ ಪ್ರಬಲ ಮಾಧ್ಯಮ. ಪ್ರೀತಿ ಮತ್ತು ಕ್ರಾಂತಿ ಕ್ಷಣಿಕ ಅಭಿವ್ಯಕ್ತಿಯಾಗಿದೆ. ಭೌತಿಕ, ಪ್ರಾಪಂಚಿಕ ವಾಸ್ತವ ಅರಿತ ಬಳಿಕ ಎರಡೂ ಬದಲಾವಣೆಯಾಗುತ್ತದೆ. ಧನಾತ್ಮಕ ಸಾಮಾಜಿಕ ಪರಿವರ್ತನೆ ಬಯಸುವ ಸಾಹಿತ್ಯವು ಹಿಂಸೆ ಹಾಗೂ ವಿಭಜನೆಯನ್ನು ಪ್ರತಿಪಾದಿಸುವುದಿಲ್ಲ. ವಚನ ಸಾಹಿತ್ಯ ಜನರ ಶಕ್ತಿಯಾಗಿದೆ. ಪರಿಪೂರ್ಣ ಜೀವನ ಪ್ರೀತಿ, ನ್ಯಾಯ, ಸಮಷ್ಟಿಯ ರೂಪಕವಾದ ಕವಿತೆ ಸಖೀ ಗೀತೆಯಲ್ಲ, ಅಂತಃಪುರದ ಆಳು ಅಲ್ಲ. ಕಾವ್ಯ ಚಳವಳಿ ಮೂಲಕ ಹೊಸ ಸಮಾಜ ಕಟ್ಟಬೇಕು. ವೈಯಕ್ತಿಕ ಅಭಿಪ್ರಾಯಗಳು ಎಲ್ಲರಿಗೂ ಇಷ್ಟವಾಗಬೇಕೆಂದಿಲ್ಲ. ಸತ್ತವರ ಬಗ್ಗೆಯೂ ಜನಸಾಮಾನ್ಯರ ಸಿಟ್ಟು ತನ್ನದೇ ರೂಪ ಹೊಂದಿರುತ್ತದೆ. ನಿರುಪದ್ರವಿ ಕವಿಗಳ ಹತ್ಯೆಗೂ ಖುಷಿ ಪಡುವ ವ್ಯಕ್ತಿತ್ವ ನಿರ್ಮಾಣವಾಗಿದೆ. ಬಹುಜನ ಸಂಸ್ಕೃತಿ ಬಗ್ಗೆ ಮಾತನಾಡಿದರೆ ದೇಶದ್ರೋಹದ ಪಟ್ಟ ಪ್ರಾಪ್ತವಾಗುತ್ತದೆ. ದೇಶ ಪ್ರೇಮವನ್ನೇ ಮುಖ್ಯಧಾರೆಯನ್ನಾಗಿ ಇಟ್ಟುಕೊಂಡು ಬಹುಜನ ಸಂಸ್ಕೃತಿಯನ್ನು ಹತ್ತಿಕ್ಕುವ ಬಹುದೊಡ್ಡ ಷಡ್ಯಂತ್ರ ನಡೆಯುತ್ತಿದೆ.” ಎಂದು ಆತಂಕ ವ್ಯಕ್ತಪಡಿಸಿದರು. ವೇದಿಕೆಯಲ್ಲಿ 20ಕ್ಕೂ ಹೆಚ್ಚು ಕವಿಗಳು ಕವಿತೆ ವಾಚಿಸಿದರು.
ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಪ್ರಾಚಾರ್ಯ ಎಚ್.ಎಸ್.ನಾಗಭೂಷಣ ಮಾತನಾಡಿ “ಹಿಂದಿ ಹೇರಿಕೆ ಕೆಟ್ಟ ಸಂಪ್ರದಾಯವಾಗಿದ್ದು, ಹೊರ ರಾಜ್ಯದವರಿಗೆ ಭಾಷೆ ಕಲಿಸುವಲ್ಲಿ ನಾವು ವಿಫಲರಾಗಿದ್ದೇವೆ. ಕನ್ನಡಕ್ಕೆ ಕುತ್ತು ಎನ್ನುವ ಬದಲು ಸಾಹಿತ್ಯ ಭಾಷಾಂತರಕ್ಕೆ ಸಾಂಸ್ಥಿಕ ರೂಪ ಕೊಡಬೇಕಿದೆ. ಸಿನಿಮಾ, ಧಾರವಾಹಿಗಳಲ್ಲಿ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿಲ್ಲ. ಮಾಧ್ಯಮಗಳು ಸತ್ವ ಕಳೆದುಕೊಂಡರೆ ಸಮಾಜ ದಾರಿದ್ರ್ಯದತ್ತ ಸಾಗುತ್ತದೆ. ನೂತನ ಶಿಕ್ಷಣ ನೀತಿಯಿಂದ ಭಾಷೆ ಕೊಲೆಯಾಗುತ್ತಿದೆ. ಭ್ರಷ್ಟಾಚಾರ ತೀವ್ರವಾಗಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದ್ದು, ಯುವಜನ ಕೆರಳುವ ಕಾಲ ಸನ್ನಿಹಿತವಾಗಿದೆ.” ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ “ಸಾಹಿತ್ಯದಲ್ಲಿ ರಾಜಕೀಯ ಬೆರೆಸುವುದು ತಪ್ಪು. ಸ್ವತಂತ್ರ ಆಲೋಚನೆಗಳನ್ನು ಹತ್ತಿಕ್ಕುವ ಪ್ರಯತ್ನ ಸಲ್ಲದು. ಸಾಹಿತ್ಯಕ್ಕೆ ಸಾಮಾಜಿಕ ಪರಿವರ್ತನೆಯ ವರ್ಚಸ್ಸು, ಶಕ್ತಿ ಇದೆ.” ಎಂದು ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೂಳೂರು ಶ್ರೀ ಸತ್ಯನಾರಾಯಣರಾವ್, ನೈಜಲ ಪಟಮಕ್ಕಿ ಶ್ರೀ ರತ್ನಾಕರ್, ಶ್ರೀ ಕೆ.ಜಿ.ಶ್ರೀಧರ್, ಶ್ರೀ ರವೀಂದ್ರ ತುಂಬರಮನೆ, ಶ್ರೀ ಸುಚರಿತ ಚಂದ್ರ, ಶ್ರೀ ವಿಶ್ವನಾಥ ಕುಂಟುವಳ್ಳಿ, ಶ್ರೀ ಡಾ.ವಿನೋದ್ ಕುಮಾರ್, ಶ್ರೀ ರಾಮಚಂದ್ರ, ಅಶೋಕ್ ಕೆ.ಇ, ಶ್ರೀ ಆರ್ಯನ್ ಅನಿಲ್ ಹಾಗೂ ಶ್ರೀ ಸಾನ್ವಿಕ್ ಅವರನ್ನು ಸನ್ಮಾನಿಸಲಾಯಿತು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀ ಟಿ.ಕೆ.ರಮೇಶ್ ಶೆಟ್ಟಿ, ಮ್ಯಾಮ್ಕೋಸ್ ಉಪಾಧ್ಯಕ್ಷ ಶ್ರೀ ಹುಲ್ಕುಳಿ ಮಹೇಶ್, ಪ್ರಮುಖರಾದ ಶ್ರೀ ಪಾಂಡುರಂಗಪ್ಪ, ಶ್ರೀ ಯು.ಡಿ.ವೆಂಕಟೇಶ್, ಶ್ರೀ ವೆಂಕಟೇಶ ಹೆಗ್ಡೆ, ಶ್ರೀಪತಿ ಹಳಗುಂದ ಉಪಸ್ಥಿತರಿದ್ದರು.