ಕಾರ್ಕಳ : ಕಾರ್ಕಳದ ಗಣಿತ ನಗರ ಜ್ಞಾನಸುಧಾ ಕಾಲೇಜು ಸಭಾಂಗಣದಲ್ಲಿ 19ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 03-12-2023ರಂದು ನಡೆಯಿತು. ಈ ಸಮ್ಮೇಳನದಲ್ಲಿ ಸಾಂಸ್ಕೃತಿಕ ಸಮ್ಮೇಳನವನ್ನು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸಿ ಮಾತನಾಡಿ “ಸಾಹಿತ್ಯ ಸಮ್ಮೇಳನಗಳು ಮಕ್ಕಳಿಗೆ ಪ್ರೇರಣೆ ನೀಡುವ ಕ್ಷೇತ್ರವಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರೇರಣೆ, ಜಾಗೃತಿ ಹಾಗೂ ಸಾಂಸ್ಕೃತಿಕ ವೈಭವವನ್ನು ಸಾರುವ ಕೆಲಸವಾಗಿದೆ, ಹೊಸ ಪೀಳಿಗೆಯ ಯುವ ಬರಹಗಾರರಿಗೆ ತಾಲೂಕು ಬರಹಗಾರರ ಸಮ್ಮೇಳನ ನಡೆಸುವ ಕಾರ್ಯವಾಗಲಿ ಮತ್ತು ಕಳೆದ ಬಾರಿ ನಡೆದ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನವನ್ನು ಸರಕಾರವು ಮುಂದುವರೆಸಲಿ” ಎಂದು ಹೇಳಿದರು.
ಸಮ್ಮೇಳನ ಅಧ್ಯಕ್ಷ ಸೂಡ ಸದಾನಂದ ಶೆಣೈ ಮಾತನಾಡಿ, “ಭಾಷೆ ಹಾಗೂ ಸಾಹಿತ್ಯಗಳು ನಮ್ಮೆಲ್ಲರನ್ನೂ ಒಂದುಗೂಡಿಸುವ ಸಾಧನಗಳು, ಮುಖ್ಯವಾಗಿ ಇಲ್ಲಿ ತುಳು, ಕೊಂಕಣಿ, ಬ್ಯಾರಿ ಇತ್ಯಾದಿ ಭಾಷೆಗಳನ್ನು ಆಡುವವರ ಆಶ್ರಯದಲ್ಲಿ ಕನ್ನಡ ಸಾಹಿತ್ಯಕ್ಕೆ ಬಹಳ ಪ್ರೋತ್ಸಾಹವಿದೆ. ತುಳುನಾಡಿನಲ್ಲಿ ವಿವಿಧ ಭಾಷಿಗರ ನಡುವಿನ ಸಂಪರ್ಕ ಭಾಷೆಯೇ ಕನ್ನಡ, ಮುಂದಿನ ದಿನಗಳಲ್ಲಿ ಕನ್ನಡದ ಸ್ಥಾನವನ್ನು ಇಂಗ್ಲಿಷ್ ಆಕ್ರಮಿಸಿಕೊಳ್ಳದ ಹಾಗೆ ನಾವು ಎಚ್ಚರದಲ್ಲಿರಬೇಕು. ಮಕ್ಕಳ ಸಾಹಿತ್ಯವನ್ನು ಪ್ರೋತ್ಸಾಹಿಸಿದರೆ ಕನ್ನಡವನ್ನು ಉಳಿಸಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ನಂಬಿಕೆ. ಕನ್ನಡವನ್ನು ಉಳಿಸಿ ಬೆಳೆಸಲು ಸಿದ್ಧರಾಗಬೇಕು” ಎಂದರು.
ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ, ಬಜಗೋಳಿ, “ಕನ್ನಡ ಶಾಲೆಗಳನ್ನು ಉಳಿಸುವ ಸಲುವಾಗಿ ಉತ್ತಮ ಶಾಲೆಗಳನ್ನು ಗುರುತಿಸಿ ಸಿರಿಗನ್ನಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು” ಎಂದರು. ಸಾಹಿತ್ಯ ಸಮ್ಮೇಳನವನ್ನು ರಂಗ ಸಂಸ್ಕೃತಿಯ ನಿತ್ಯಾನಂದ ಪೈ ಉದ್ಘಾಟಿಸಿ ಶುಭಹಾರೈಸಿದರು. ಎಸ್.ಕೆ.ಎಸ್. ಕಾರ್ಲ, ಇನ್ಮಾ ಪ್ರೊಜೆಕ್ಟ್ ಪ್ರೈ.ಲಿ.ನ ಸುಜಯ್ ಕುಮಾರ್ ಶೆಟ್ಟಿ, ಎಸ್.ವಿ.ಎಜ್ಯುಕೇಶನ್ ಟ್ರಸ್ಟಿನ ಕೆ.ಪಿ ಶೆಣೈ, ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಕಾರ್ಕಳ ರಂಗ ಸಂಸ್ಕೃತಿ ಅಧ್ಯಕ್ಷ ನಿತ್ಯಾನಂದ ಪೈ, ಉದ್ಯಮಿ ಸಂತೋಷ ವಾಗ್ಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ ಟಿ., ಕಾರ್ಕಳ ತಹಶೀಲ್ದಾರ್ ನರಸಪ್ಪ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಪೂರ್ಣಿಮಾ, ಶಿರ್ವ ಕಸಾಪ ಅಧ್ಯಕ್ಷ ಪುಂಡಲೀಕ ಮರಾಠ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಅವನೀ ಉಪಾಧ್ಯಾ ಬರೆದ ‘ಶ್ರೀ ರಾಮಾಯಣ ಸಿರಿ’ ಕೃತಿಯನ್ನು ಕುಕ್ಕುಂದೂರು ಗಣಿತ ನಗರದ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಬಿಡುಗಡೆಗೊಳಿಸಿದರು ಹಾಗೂ ಎಂ.ರಾಮಚಂದ್ರ ಅವರ ಹೆಸರಿನಲ್ಲಿ ಬಾಲಕವಿಗಳಿಗೆ ನೀಡುವ ಪ್ರಶಸ್ತಿಯನ್ನು ಅವನೀ ಉಪಾಧ್ಯಾ ಇವರಿಗೆ ನೀಡಲಾಯಿತು. ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಜ್ಯೋತಿ ಪದ್ಮನಾಭ ಬಂಡಿ ವಂದಿಸಿದರು.
ಕಾರ್ಕಳ ಗಣಿತ ನಗರದ ಜ್ಞಾನಸುಧಾ ಸಭಾಂಗಣದಲ್ಲಿ ನಡೆದ 19ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ದುರ್ಗಾದೇವಿ ಹಿರಿಯ ಪ್ರಾಥಮಿಕ ಶಾಲೆಯಿಂದ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿ, ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು. ನಾಡು, ನುಡಿಯ ಭಾವಚಿತ್ರ ಹಿಡಿದ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್ ಗಳು, ಸೌಟ್ಸ್ ಗೈಡ್ಸ್ ತಂಡ, ಕೀಲು ಕುದುರೆ, ವಿವಿಧ ವೇಷ ಭೂಷಣಗಳು, ಚೆಂಡೆವಾದನ, ವಿವಿಧ ಶಿಕ್ಷಣ ಸಂಸ್ಥೆಗಳ ಬ್ಯಾಂಡ್ ಸೆಟ್, ನೃತ್ಯದೊಂದಿಗೆ ಸಾಹಿತಿಗಳು, ಕನ್ನಡ ಶಾಲು ಧರಿಸಿ ಗಣ್ಯರು, ಸಾಹಿತ್ಯಾಭಿಮಾನಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಸಾಗಿದರು. ವಿದ್ಯಾ ಸಂಸ್ಥೆಗಳ ವಿವಿಧ ವೇಷಭೂಷಣಗಳು ಮೆರವಣಿಗೆಯಲ್ಲಿದ್ದವು. ರವೀಂದ್ರ ಶೆಟ್ಟಿ ಬಜಗೋಳಿ ಮೆರವಣಿಗೆಗೆ ಚಾಲನೆ ನೀಡಿ, ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟಿ
ಅನಿಲ್ ಕುಮಾರ್‌ಜೈನ್ ರಾಷ್ಟ್ರ ಧ್ವಜಾರೋಹಣ ಗೈದರು. ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡ ಪರಿಷತ್ತಿನ ಧ್ವಜಾರೋಹಣ ಮಾಡಿದರು.
ಇದೇ ಸಂದರ್ಭದಲ್ಲಿ ಹರ್ಷಿಣಿ ಕೆ. (ಶಿಕ್ಷಣ), ಬಾಬು ಕೆ. ಇನ್ನಾ (ಸಾಹಿತ್ಯ), ರವೀಂದ್ರ ಕುಮಾರ್ (ಕಂಬಳ), ವಲೇರಿಯನ್ ಲೋಬೋ ಸಾಣೂರು (ಕೃಷಿ), ಬಾಲಕೃಷ್ಣ ಭೀಮಗುಳಿ (ಮಾಧ್ಯಮ), ಮೋಹನ (ಸಂಗೀತ), ಶ್ರೀರಮಣ ಆಚಾರ್ (ಯಕ್ಷಗಾನ), ಜನಾರ್ದನ ಆಚಾರ್ಯ (ಶಿಲ್ಪಕಲೆ), ವಸಂತ ಮೂಲ್ಯ ಬೆಳ್ಳಣ್ (ನಾಟಿ ವೈದ್ಯ), ಮೊಹಮ್ಮದ್ ಗೌಸ್ (ಸಮಾಜಸೇವೆ), ಛತ್ರಪತಿ ಫೌಂಡೇಶನ್ ಕಾರ್ಕಳ (ಸಂಘ ಸಂಸ್ಥೆ), ‘ಹೊಸಬೆಳಕು’ ಕಣಜಾರು (ಸಂಘ ಸಂಸ್ಥೆ) ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಮ್ಮೇಳನದಲ್ಲಿ ನಡೆದ ಗೋಷ್ಠಿಯಲ್ಲಿ ‘ಬದುಕಿನ ಸಾಧನೆಗೆ ಸಾಹಿತ್ಯದ ಪ್ರೇರಣೆ’ ನ್ಯಾಯವಾದಿ ಕು. ಸಹನಾ ಕುಂದರ್ ಹಾಗೂ ಗಂಗಾಧರ ಪಣಿಯೂರು ಸಮನ್ವಯಕಾರರು ವಿದ್ಯಾರ್ಥಿಗಳಾದ ನಿಧಿ ಹೊಸ್ಮನೆ, ತೇಜಸ್ವಿನಿ, ಸಂದರ್ಶಿನಿ, ಕಾರ್ತಿಕಾ, ಸೌಮ್ಯ ಕುಂದರ್, ಅದಿತಿ, ಸಿದ್ಧರಾಜ್ ಡಿ. ಶೆಟ್ಟಿ, ದೀಕ್ಷಿತ್ ಆರ್. ನಾಯಕ್, ಪ್ರಾರ್ಥನಾ ಪೈ ಇವರುಗಳು ವಿದ್ಯಾರ್ಥಿಗೋಷ್ಠಿಯಲ್ಲಿ ಭಾಗವಹಿಸಿದರು. ನಾಡಿನ ಹಿರಿಯ ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಇವರು ‘ವಚನಗಳಲ್ಲಿ ಜೀವನ ಮೌಲ್ಯಗಳು’ ಎಂಬ ವಿಷಯದಲ್ಲಿ ದಿಕ್ಸೂಚಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಅವರು ಬರೆದ 511ನೇ ಕೃತಿ ‘ಶರಣ ಶ್ರೇಷ್ಠರು ಭಾಗ-2’ ಲೋಕಾರ್ಪಣೆಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಎಸ್.ಕೆ.ಎಫ್. ಮೂಡಬಿದ್ರೆ ಗೋಧಾಮ ಮುನಿಯಾಲು ಸಂಸ್ಥಾಪಕ ಡಾ. ರಾಮಕೃಷ್ಣ ಆಚಾರ್, ನಿವೃತ್ತ ಕನ್ನಡ ಉಪನ್ಯಾಸಕ ಎಸ್. ರಾಮ ಭಟ್, ಸಮ್ಮೇಳನಾಧ್ಯಕ್ಷ ಸದಾನಂದ ಶೆಣೈ ಸೂಡ, ವಿಧಾನ ಪರಿಷತ್ತಿನ ಎಸ್.ಎಲ್.ಭೋಜೇಗೌಡ, ಮುನಿಯಾಲು ಉದಯಕುಮಾರ್ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್.ರಾಜು, ಕಾರ್ಕಳ ಡಾ. ಪಿ. ಬಾಲಕೃಷ್ಣ ಆಳ್ವ, ಲಯನ್ಸ್ ಪೂರ್ವ ಜಿಲ್ಲಾ ಗವರ್ನರ್ ಎನ್.ಎಮ್. ಹೆಗ್ಡೆ, ಶ್ರೀ ಅರುಣ್ ಕುಮಾರ್ ನಿಟ್ಟೆ, ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ರವೀಂದ್ರ ಹೆಗ್ಡೆ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಎಂ.ಎನ್., ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರೂಪಾ ಟಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.