ಮಂಗಳೂರು : ಎಕ್ಕಾರು ಬಂಟರ ಭವನದಲ್ಲಿ ನಡೆದ ವಾರ್ಷಿಕ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಅವರನ್ನು ಎಕ್ಕಾರು ಬಂಟರ ಸಂಘದ ಆಶ್ರಯದಲ್ಲಿ ದಿನಾಂಕ 26-11-2023ರಂದು ಸನ್ಮಾನಿಸಲಾಯಿತು.
ಎಕ್ಕಾರು ಸುಜಾತಾ ಶೆಟ್ಟಿ ಹಾಗೂ ಕನ್ಯಾನ ಸದಾಶಿವ ಶೆಟ್ಟಿ ಪ್ರಾಯೋಜಕತ್ವದಲ್ಲಿ ನೂತನವಾಗಿ ನಿರ್ಮಿಸಲಾದ ಬಯಲು ರಂಗ ಮಂದಿರವನ್ನು ಕನ್ಯಾನ ಸದಾಶಿವ ಶೆಟ್ಟಿ ಮತ್ತು ಸುಜಾತಾ ಶೆಟ್ಟಿ ದಂಪತಿ ಉದ್ಘಾಟಿಸಿದರು. ತಲಾ 2 ಬಾರಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಕಳೆದ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾ ಪಕ, ಸಾಹಿತಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಹಾಗೂ ಹಿರಿಯ ಕೃಷಿ ಸಾಧಕ ಮುರಾ ಸದಾಶಿವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕರಾಟೆ ಕ್ರೀಡೆಯಲ್ಲಿ ರಾಷ್ಟ್ರ ರಾಜ್ಯ ಮಟ್ಟದಲ್ಲಿ 7 ಬಾರಿ ಚಾಂಪಿಯನ್‌ಷಿಪ್ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಎಕ್ಕಾರಿನ ಪ್ರತಿಭೆ ಸಮೃದ್ಧಿ ಶೆಟ್ಟಿ ಸಹಿತ 9 ಮಂದಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ಎಕ್ಕಾರು ಗ್ರಾಮ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಬಂಟ ಸಮಾಜದ 64 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕಟೀಲು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಮುಕ್ತೇಸರ ಸನತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮುಕ್ತೇಸರ ನಿತಿನ್ ಹೆಗ್ಡೆ ಕಾವರಮನೆ (ತಿಮ್ಮಕಾವ), ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಮುಂಬಯಿ ಉದ್ಯಮಿ ಕೃಷ್ಣ ಡಿ.ಶೆಟ್ಟಿ ಹಾಗೂ ನೀತಾ ವಿಕ್ರಮ್ ಹೆಗ್ಡೆ ಉಪಸ್ಥಿತರಿದ್ದರು.
ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಭಾರತ ದರ್ಶನ’ ನೃತ್ಯರೂಪಕ ಹಾಗೂ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರುಗಿತು.