ಬಂಟ್ವಾಳ : ಮಕ್ಕಳ ಕಲಾ ಲೋಕ ಕ.ಸಾ.ಪ. ಬಂಟ್ವಾಳ ತಾಲೂಕು 17ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯದಲ್ಲಿ ಮಿತ್ತಿಮಾರು ಭುಜಂಗ ಶೆಟ್ಟಿ ಸಭಾಂಗಣದ ಪಲಿಮಾರು ಜನಾರ್ದನ ಪೈ ವೇದಿಕೆಯಲ್ಲಿ ದಿನಾಂಕ 06-12-2023ರಂದು ಸಂಪನ್ನಗೊಂಡಿತು.
ಗ್ರಾ.ಪಂ. ಅಧ್ಯಕ್ಷೆ ಭಾರತಿ ಎಸ್. ರಾವ್ ಮೆರವಣಿಗೆ ಉದ್ಘಾಟಿಸಿದರು. ಎಸ್.ಡಿ.ಎಸ್.ಸಿ. ಅಧ್ಯಕ್ಷ ಹರಿಶ್ಚಂದ್ರ ಎಮ್. ಕನ್ನಡ ಧ್ಜಜಾರೋಹಣವನ್ನು ಮತ್ತು ಕ.ಸಾ.ಪ.ದ ಪಾಣೆಮಂಗಳುರು ಹೋಬಳಿ ಅಧ್ಯಕ್ಷ ಮಹಮ್ಮದ್ ಪಿ. ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಮಾಡಿದರು. ತನ್ವಿ ಮತ್ತು ಬಳಗ ನಾಡಗೀತೆ ಹಾಡಿದ್ದು, ದೈಹಿಕ ಶಿಕ್ಷಕ ಭಾಸ್ಕರ ನಾಯ್ಕ, ಪೀರಾಜ್ ವಾಬಳೆ ಮೆರವಣಿಗೆ ವ್ಯವಸ್ಥೆಗೊಳಿಸಿದ್ದರು. ಚೆಂಡೆ ಸಹಿತ ಕೊಂಬು ವಾದನದೊಂದಿಗೆ ಮಕ್ಕಳು ಪಾಲ್ಗೊಂಡ ಮೆರವಣಿಗೆಯು ನಯನ ಮನೋಹರವಾಗಿತ್ತು.
ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಬಾಯಾರು ಪ್ರಸ್ತಾವನೆ ಗೈದು ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮತ್ತು ಓದುವ ಹವ್ಯಾಸವನ್ನು ಬೆಳೆಸುವ ದೃಷ್ಠಿಯಿಂದ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಸ್ವಾಗತ ಸಮಿತಿಯವರ ಸಹಕಾರದಿಂದ ಉತ್ತಮ ರೀತಿಯಲ್ಲಿ ಸಮ್ಮೇಳನವನ್ನು ವ್ಯವಸ್ಥೆಗೊಳಿಸಲಾಗಿದೆ ಎಂದರು. ಮಾಣಿ ಪ್ರಾಥಮಿಕ ಶಾಲೆಯ ಪ್ರಥಮ ಕೆ. ಸ್ವಾಗತಿಸಿ, ಕಡೇಶಿವಾಲಯದ ಚಿನ್ಮಯಿ ಸ್ಫೂರ್ತಿ ಗೀತೆ ಹಾಡಿದರು.
ದ.ಕ.ಜಿ.ಪ.ಹಿ.ಪ್ರಾ. ಶಾಲೆ ಓಜಾಲ ಇಲ್ಲಿಯ ವಿದ್ಯಾರ್ಥಿನಿ ಕು. ಶ್ರುತಿಕಾ ಬಾಕಿಮಾರು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಮಕ್ಕಳ ಕಲಾಲೋಕ ಉತ್ತಮ ವೇದಿಕೆಯಾಗಿದೆ ಎಂದರು. ಕಡೇಶಿವಾಯ ಶಾಲೆಯ ಸಾನ್ವಿ ಸುವರ್ಣ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿ “ಗುರುಗಳ ಮಾರ್ಗದರ್ಶನದಿಂದ ಹೆತ್ತವರ ಆಶೀರ್ವಾದದಿಂದ ಸಮ್ಮೇಳನಾಧ್ಯಕ್ಷೆಯಾಗುವ ಅವಕಾಶ ಸಿಕ್ಕಿತು. ಸಾಹಿತ್ಯದ ಪರಿಚಯವನ್ನು ಮಾಡುವ ಮೂಲಕ ಅಭಿರುಚಿಯನ್ನು ಹುಟ್ಟಿಸಿದೆ. ಬರೆಯುವ ಆಸಕ್ತಿಯನ್ನು ಮೂಡಿಸುವುದಕ್ಕೆ ಸಮ್ಮೇಳನವು ಸಹಕಾರಿಯಾಗಿದೆ” ಎಂದು ಅಭಿಪ್ರಾಯ ತಿಳಿಸಿದರು.
ಕವಿ ವಿಶ್ವನಾಥ ಕುಲಾಲ್ ಮಿತ್ತೂರು ಇವರು ಶರಣ್ಯ ಪಾಂಡೇಲು ಓಜಾಲ ಇವರ ಹಾಯ್ಕು, ಶ್ರುತಿಕಾ ಪಾಂಡೇಲು ಇವರ ಜಗದ ನಿಯಮ, ನಿರಂಜನ ನಾಯಕ್ ವಿಟ್ಲ ಸಂಪಾದಿಸಿದ ಮಕ್ಕಳ ಕವನ ಸಂಕಲನ ಕೃತಿಗಳನ್ನು ಬಿಡುಗಡೆ ಮಾಡಿದರು. ಮಾಣಿ ಬಾಲವಿಕಾಸದ ಸ್ವಸ್ತಿ ನಿರ್ವಹಿಸಿದ್ದು, ಅಳಿಕೆಯ ಧನ್ವಿತಾ ಕಾರಂತ್ ವಂದಿಸಿದರು. ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು 11 ಕಿರು ನಾಟಕಗಳನ್ನು ವೇದಿಕೆಯಲ್ಲಿ ಪ್ರದರ್ಶನ ಮಾಡಿದರು. ನೀತಿ ಬೋಧಕ ಕತೆಗಳನ್ನು ಆಯ್ದು ನಾಟಕ ರೂಪದಲ್ಲಿ ಅಭಿನಯಿಸಿ ಹೆತ್ತವರ ಮೆಚ್ಚುಗೆಗೆ ಪಾತ್ರರಾದರು. ಶಿಕ್ಷಕ ಜಯರಾಮ ಡಿ. ವಿದ್ಯಾರ್ಥಿಗಳಾದ ಹರ್ಷನ್ ಕುಲಾಲ್ ಶೇರಾ, ಪ್ರಖ್ಯಾತ್ ರಾವ್ ಕಡೇಶಿವಾಲಯ, ಧೃತಿ ಏಮಾಜೆ ನಿರ್ವಹಿಸಿದರು.
ಚಿತ್ತಚಿತ್ತಾರ ಕಾರ್ಯಕ್ರಮದಲ್ಲಿ 14 ಶಾಲೆಗಳ ವಿದ್ಯಾರ್ಥಿಗಳು ಬಂಟ್ವಾಳ ತಾಲೂಕಿನ ಹಿರಿಯ ಕವಿಗಳಾಗಿರುವ ಜಯಾನಂದ ಪೆರಾಜೆ, ಸೀತಾಲಕ್ಷ್ಮೀ ವರ್ಮ ವಿಟ್ಲ, ಸವಿತಾ ಅಡ್ವಾಯಿ, ರಾಧಾಕೃಷ್ಣ ವರ್ಮ, ಜಯರಾಮ ಪಡ್ರೆ, ವಿಶ್ವನಾಥ ಮಿತ್ತೂರು, ವಿಂಧ್ಯಾ ಎಸ್. ರೈ ಮತ್ತಿತರರ ಕವನಗಳನ್ನು ಹಾಡಿ ನೃತ್ಯ ಪ್ರದರ್ಶನ ಮಾಡುವುದರೊಂದಿಗೆ ಚಿತ್ರ ಬಿಡಿಸುವ ಮೂಲಕ ಚಿತ್ತಚಿತ್ತಾರ ಕಾರ್ಯಕ್ರಮ ವೈವಿಧ್ಯಪೂರ್ಣವಾಗಿ ಮೂಡಿಬಂತು. 500ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಸ್ವರಚಿತ ಕಥೆ, ಕವನ, ಚುಟುಕು ಬರೆಯುವ, ವಾಚನ ಮಾಡುವ ಅವಕಾಶ ಪಡೆದುಕೊಂಡರು. ಆಶು ಮಾತುಕತೆ ಮತ್ತು ಸಾಹಿತ್ಯ ಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭಾ ಪ್ರದರ್ಶನ ಮಾಡಿದರು.
ಶ್ರೀ ಶಾರದಾ ಪ್ರೌಢ ಶಾಲೆ ಪಾಣೆಮಂಗಳೂರು ಶಾಲೆಯ ವಿದ್ಯಾರ್ಥಿಗಳ ವಾರ್ಷಿಕ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿ ‘ಸಾಹಿತ್ಯ ತಾರೆ ಪ್ರಶಸ್ತಿ’ ಪ್ರದಾನ ಮಾಡಿ ಪುರಸ್ಕರಿಸಲಾಯಿತು. ವಿವಿಧ ಕಲೆಗಳಲ್ಲಿ ಪ್ರೋತ್ಸಾಹ ನೀಡುತ್ತಿರುವ ಕಲಾವಿದ ರಾಜೇಶ ವಿಟ್ಲ ಇವರಿಗೆ ‘ಬಾಲಬಂಧು ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪುಸ್ತಕ ಸ್ಮರಣಿಕೆ, ಸ್ಪೂರ್ತಿ ಪತ್ರಗಳ ವಿರತಣೆ ಮಾಡಿ ಅಭಿನಂದಿಸಲಾಯಿತು. ಸಮ್ಮೇಳನಕ್ಕೆ ಸಹಕಾರ ನೀಡಿದ ಮಹನೀಯರನ್ನು ಗುರುತಿಸಿ ಕೃತಜ್ಞತೆ ಸಲ್ಲಿಸಲಾಯಿತು.
ಪ್ರೇಮಾ ಕಡೇಶಿವಾಲಯ, ವಸಂತಿ ಎಲ್. ಕಡೇಶಿವಾಲಯ, ಇಸ್ಮಾಯಿಲ್ ಅಳಿಕೆಮಜಲು, ಸಂಜೀವ ಎನ್. ಮಿತ್ತೂರು, ಗೋಪಾಲಕೃಷ್ಣ ನೇರಳಕಟ್ಟೆ ನಾರ್ಶ ಮೈದಾನ, ತುಳಸಿ ಎಸ್. ಬಿಳಿಯೂರು, ಯಜ್ಞೇಶ್ವರಿ ಎನ್. ಮಾಣಿ, ಮುಹಮ್ಮದ್ ಸಾಬಿತ್ ಸುರಿಬೈಲು, ಸಾವಿತ್ರಿ ಸತ್ತಿಕಲ್ಲು, ಶ್ರೀಪತಿ ನಾಯಕ್ ನಾಟೆಕಲ್ಲು, ಎಂ.ಕೆ. ನಾಯ್ಡ್ ಮರಕ್ಕಿಣಿ ಪೆರುವಾಯಿ ಸಹಕರಿಸಿದ ಅಧ್ಯಾಪಕರುಗಳು.
ಪ್ರಥಮ ಕೆ. ಮಾಣಿ, ಆರಾಧ್ಯ ರೈ ಕೆ. ಕಡೇಶಿವಾಲಯ, ಶಿರ್ಷಿಕಾ ಆರ್. ಬರಿಮಾರು, ಅನನ್ಯ ವಿ. ವಿಟ್ಲ, ವೈಭವ್ ಎನ್. ಕೆದಿಲ, ಯತಿನ್ ಸತ್ತಿಕಲ್ಲು, ಲಿಖಿತಾ ಅನಂತಾಡಿ, ಅಮೃತಾ ಕುಲಾಲ್ ಪೆರಾಜೆ, ವೈಷ್ಣವಿ ಎನ್. ಬಿಳಿಯೂರು, ಕೌಶೀಲ ನಾರ್ಶ ಮೈದಾನ, ಅಕ್ಷರ ಶ್ಯಾಮ ವಿಟ್ಲ, ಶಶಾಂಕ್ ಬಂಟ್ರಿಂಜ, ಗ್ಲೆನಿಶಾ ಶರ್ಲಾ ವಾಸ್ ನರಿಕೊಂಬು, ಮಾನಸ ಕಡೇಶಿವಾಲಯ, ಧನ್ವಿತಾ ವೀರಕಂಭ, ಸ್ಪೂರ್ತಿ ಕಲ್ಲಡ್ಕ, ಕಾರ್ತಿಕೇಯ ಆರ್. ಮಯ್ಯ ಮಂಗಳೂರು, ನಿರೀಕ್ಷಾ ಕೆ. ಚಂದಳಿಕೆ ಮೊದಲಾದ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಬಿಳಿಯೂರು ಗುತ್ತು ಕಿಟ್ಟಣ್ಣ ಶೆಟ್ಟಿ, ಕಾರ್ಯಾಧ್ಯಕ್ಷ ಹರಿಶ್ಚಂದ್ರ ಎಮ್., ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಮ್.ಜಿ., ಉಪಾಧ್ಯಕ್ಷ ಗಿರಿಯಪ್ಪ ಗೌಡ ಶಾಂತಿಲ, ಕೋಶಾಧಿಕಾರಿ ಮಾಧವ ರೈ ಅಮೈ, ಕಡೇಶಿವಾಲಯ ಶಾಲಾ ಮುಖ್ಯೋಪಾಧ್ಯಾಯ ಬಾಬು ಪೂಜಾರಿ ಕೆ. ಹಾಗೂ ಶಿಕ್ಷಕ ವೃಂದದವರು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಮ್ಮೇಳನವನ್ನು ಸುಂದರಗೊಳಿಸಿದರು.
ಕಡೇಶಿವಾಲಯದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಡಿಮೆ ಇಲ್ಲದಂತೆ ಅದ್ದೂರಿಯಿಂದ ಜರಗಿತು. ವೈಭವ ಪೂರ್ಣವಾದ ಮೆರವಣಿಗೆ, ಮಕ್ಕಳ ಶಿಸ್ತು, ಅಧ್ಯಾಪಕರ ಕ್ರಿಯಾಶೀಲತೆ, ಸ್ವಾಗತ ಸಮಿತಿಯ ಸಹಕಾರ, ಊರವರ ಪಾಲ್ಗೊಳ್ಳುವಿಕೆ, ಹೆತ್ತವರ ಪ್ರೋತ್ಸಾಹ, ದಾನಿಗಳ ಕೈ ಜೋಡಿಸುವಿಕೆಯಿಂದ ಸಮ್ಮೇಳನ ಸಂಪನ್ನಗೊಂಡಿತು. 1500ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಭೋಜನ ಸವಿದರು. ಮಕ್ಕಳ ಲೋಕದ ಅಧ್ಯಕ್ಷ ರಮೇಶ ಬಾಯಾರು, ಭಾಸ್ಕರ ಅಡ್ವಾಳ ಮಾರ್ಗದರ್ಶನದಲ್ಲಿ ಪದಾಧಿಕಾರಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಮಾವೇಶವು ಯಶಸ್ವಿಯಾಗಿದೆ.