ಬಂಟ್ವಾಳ : ನೃತ್ಯ ಗುರು ವಿದುಷಿ ವಿದ್ಯಾ ಮನೋಜ್ ಇವರ ನಿರ್ದೇಶನದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಕಲ್ಲಡ್ಕ ಭರತನಾಟ್ಯ ಸಂಸ್ಥೆಯ ಕಲ್ಲಡ್ಕ ಮತ್ತು ಬಿ.ಸಿ.ರೋಡ್ ಶಾಖೆಗಳ ವಿದ್ಯಾರ್ಥಿಗಳಿಂದ ‘ಕಲಾ ಪರ್ವ 2023’ವು ದಿನಾಂಕ 30-11-2023ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.
ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆ್ಯಂಡ್ ಕಲ್ಚರ್, ಪುತ್ತೂರು ಇದರ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನೃತ್ಯ ಕಲಿಯುವಿಕೆಗೆ ಮಕ್ಕಳಲ್ಲಿ ಶ್ರದ್ಧೆ ಹಾಗೂ ಹೆತ್ತವರ ನಿರಂತರ ಪ್ರೋತ್ಸಾಹ ಎಷ್ಟು ಮುಖ್ಯ ಎಂಬುದನ್ನು ತಿಳಿಸಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಹರೀಶ್ ಮಾಂಬಾಡಿ ಇವರು ಪಾಲ್ಗೊಂಡು ಯಾವುದೇ ಕಲೆಯನ್ನಾದರೂ ಕಲಿಯಬೇಕಾದರೇ ಆಸಕ್ತಿ ಎಷ್ಟರ ಮಟ್ಟಿಗೆ ಪ್ರಮುಖವಾಗುತ್ತದೆ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯವೆಂದು ಹೇಳಿದರು. ಕಲಾ ಶಾಲೆಯ ಗುರುಗಳಾದ ವಿದ್ಯಾ ಮನೋಜ್ ಇವರು ಸ್ವಾಗತಿಸಿದರು. ನೃತ್ಯ ಶಾಲೆಯ ಸುಮಾರು 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮವನ್ನು ನೀಡಿದರು. ಅತ್ಯುತ್ತಮ ಕಲಾಸಂಜೆಗೆ ಸಹೃದಯ ಪ್ರೇಕ್ಷಕವರ್ಗವು ಸಾಕ್ಷಿಯಾಯಿತು.
ಭರತನಾಟ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಶ್ರೀಮತಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ಶ್ರೀದೇವಿ ಕಲ್ಲಡ್ಕ ಹಾಗೂ ಕೃತಿ ಆರ್., ಮೃದಂಗ ವಾದನದಲ್ಲಿ ಶ್ರೀ ಬಾಲಚಂದ್ರ ಭಾಗವತ್, ಪಿಟೀಲು ವಾದನದಲ್ಲಿ ಶ್ರೀ ಶ್ರೀಧರ ಆಚಾರ್ಯ ಇವರು ಸಹಕರಿಸಿದರು. ಆಶಾ ರೈ ಕಾರ್ಯಕ್ರಮ ನಿರೂಪಿಸಿದರು.