ಕುಶಾಲನಗರ : ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ ಮೈಸೂರು, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ, ಭಾರತ ಸರಕಾರ ಮಾನಸಗಂಗೋತ್ರಿ, ಮೈಸೂರು ಹಾಗೂ ಕೊಡಗು ವಿಶ್ವವಿದ್ಯಾಲಯ, ಕೊಡಗು ಜ್ಞಾನಕಾವೇರಿ ಕ್ಯಾಂಪಸ್, ಚಿಕ್ಕ ಅಳವಾರ, ಕುಶಾಲನಗರ, ಕೊಡಗು ಜಿಲ್ಲೆ ಇವರ ಸಹಯೋಗದಲ್ಲಿ ‘ಭಾರತೀಯ ಭಾಷಾ ಉತ್ಸವ’ದ ಪ್ರಯುಕ್ತ ‘ಭಾರತೀಯ ಭಾಷೆಗಳು-ಸಾಹಿತ್ಯ: ವೈವಿಧ್ಯತೆ ಹಾಗೂ ಐಕ್ಯತೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 08-12-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಉದ್ಘಾಟಿಸಿ ಮಾತನಾಡಿ “ತನ್ನದೇ ಆದ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿರುವ ಅತ್ಯಂತ ಶ್ರೀಮಂತ ಭಾಷೆ ಕನ್ನಡ. ಇಂತಹ ಭಾಷೆಯ ಉಳಿವು, ಬೆಳವಣಿಗೆ ಮತ್ತು ಪ್ರಸರಣ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಮಾತೃಭಾಷೆಯಾಗಿರುವ ಕನ್ನಡ ಭಾಷೆಯ ಅಸ್ಮಿತೆ ಮತ್ತು ಶ್ರೀಮಂತಿಕೆಯನ್ನು ಕಾಪಾಡುವ ಹೊಣೆಗಾರಿಕೆ ಕನ್ನಡಿಗರದ್ದಾಗಿದೆ. ಕನ್ನಡ ಭಾಷೆಯ ವಿಚಾರಕ್ಕೆ ಬಂದಾಗ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳಬಾರದು. ಬಹಳ ಹೆಮ್ಮೆಯಿಂದ ಕನ್ನಡಿಗರು ಎಂದು ಹೇಳಿಕೊಳ್ಳುವ ನಾವುಗಳು ಕೇವಲ ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗದೆ, ಪ್ರತಿನಿತ್ಯ ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಮ್ಮ ಕನ್ನಡ ಭಾಷೆಯ ಜೊತೆ ಜೊತೆಗೆ ದೇಶದ ಮತ್ತು ಜಗತ್ತಿನ ಇತರೆ ಭಾಷೆಗಳನ್ನು ಕೂಡ ಕಲಿತುಕೊಂಡು ಕನ್ನಡ ಭಾಷೆಯ ಸಿರಿವಂತಿಕೆಯನ್ನು ಹೆಚ್ಚಿಸುವುದಕ್ಕೆ ಮುಂದಾಗಬೇಕು” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹಾಸನದ ಎ.ವಿ.ಕೆ. ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಿ.ಚ. ಯತೀಶ್ವರ್ ಅವರು ಮಾತನಾಡಿ, “ಭಾಷೆ ಇಲ್ಲದೆ ಹೋಗಿದ್ದರೆ ತನ್ನ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಸಾಧ್ಯವಿಲ್ಲ. ಅಂಧಕಾರದ ಜಗತ್ತಿನಲ್ಲಿ ಜ್ಯೋತಿಯ ಸ್ವರೂಪವಾಗಿರುವುದು ಭಾಷೆ. ಜ್ಞಾನ ಭಂಡಾರದ ವಿಕಾಸಕ್ಕೆ ಭಾಷೆ ಪೂರಕವಾಗಿರುವಂತಹದ್ದು. ಭರತ ಖಂಡದಲ್ಲಿ ಅತೀ ಹೆಚ್ಚು ಭಾಷೆಗಳು ಬಳಕೆಯಲ್ಲಿವೆ. ಭಾರತದ ಸಂವಿಧಾನದಲ್ಲಿ ದೇಶದ 22 ಭಾಷೆಗಳನ್ನು ಅಧಿಕೃತ ರಾಷ್ಟ್ರ ಭಾಷೆಗಳನ್ನಾಗಿ ಬಳಕೆ ಮಾಡಲಾಗುತ್ತಿದೆ. ಒಂದೊಂದು ಪ್ರದೇಶಕ್ಕೂ ಒಂದೊಂದು ಭಾಷೆ ಮತ್ತು ಉಪಭಾಷೆಗಳು ಬಳಕೆಯಲ್ಲಿವೆ. ಸಂಸ್ಕೃತ ಭಾಷೆಯು ಭಾರತದ ಎಲ್ಲಾ ಭಾಷೆಯ ಮೇಲೆ ಪ್ರಭಾವ ಬೀರಿತು. ಬುದ್ಧ, ಜೈನ ಧರ್ಮಗಳು ತನ್ನ ಧರ್ಮ ಸಂದೇಶಗಳನ್ನು ತಲುಪಿಸಲು ಬಳಸಿದ ಭಾಷೆ ಅಂದಿನ ಜನ ಸಾಮಾನ್ಯರ ಭಾಷೆ. ಹಾಗೆಯೇ ಒಂದೊಂದು ದ್ರಾವಿಡ ಭಾಷೆಗಳಲ್ಲೂ ತನ್ನದೇ ಆದ ವೈಶಿಷ್ಟತೆಯನ್ನು ಕಾಣಬಹುದು. ಇನ್ನು ಕನ್ನಡದಲ್ಲಂತೂ ವಿಶ್ವ ಮನ್ನಣೆ ಪಡೆದಂತಹ ಸಾಹಿತ್ಯ ಕೃಷಿಯನ್ನು ಗಮನಿಸಬಹುದು” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಸೀನಪ್ಪ ಅವರು, “ಹಲವು ಭಾಷೆ ಮತ್ತು ಉಪಭಾಷೆಗಳನ್ನು ಬಳಸುವ ಜನಸಮೂಹವನ್ನು ನಮ್ಮ ದೇಶವು ಹೊಂದಿದೆ. ಒಂದು ಭಾಷೆ ಮನುಷ್ಯನ ಸಂಬಂಧ ಬೆಸೆಯವಂತಹ ಕೆಲಸ ಮಾಡುತ್ತದೆ. ಭಾರತೀಯ ಭಾಷೆ ಮತ್ತು ಸಾಹಿತ್ಯವು ಬಹು ವಿಶಿಷ್ಟತೆಯಿಂದ ಕೂಡಿದ್ದು ಐಕ್ಯತೆಯನ್ನು ಸಾರುತ್ತಾ ಬಂದಿವೆ. ಅದರಲ್ಲೂ ಕನ್ನಡ ಭಾಷೆಯು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವ ಅತ್ಯಂತ ಶ್ರೇಷ್ಠ ಭಾಷೆಯಾಗಿದ್ದು ಸಾಹಿತ್ಯ ಲೋಕಕ್ಕೆ ಹಲವಾರು ಮೇರು ಕವಿಗಳನ್ನು ಮತ್ತು ಲೇಖಕರನ್ನು ಪರಿಚಯಿಸಿಕೊಟ್ಟಿದೆ. ಸಹಬಾಳ್ವೆ, ಶಾಂತಿಯುತ ನೆಮ್ಮದಿಯ ಜೀವನವನ್ನು ನಡೆಸುವುದಕ್ಕೆ ನಮ್ಮ ಕನ್ನಡ ನಾಡು ಶ್ರೇಷ್ಠ ತಾಣವಾಗಿದೆ. ನಮ್ಮ ನಾಡಿನ ಜನರು ಇತರೆ ರಾಜ್ಯದ ಜನರ ಜೊತೆಗೆ ಯಾವುದೇ ಸಂಘರ್ಷಗಳಿಗೆ ಅವಕಾಶ ಕೊಡದೆ ಬಹಳ ಅನ್ಯೋನ್ಯತೆಯಿಂದ ಜೀವಿಸುತ್ತಿದ್ದಾರೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಅಸೋಸಿಯೆಟ್ ಫೆಲೋ ಡಾ. ರಕ್ಷಿತ್, ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಅಮೃತ್‌ರಾಜ್ ನಿರೂಪಿಸಿ, ಉಪನ್ಯಾಸಕ ಡಾ. ಜ಼ಮೀರ್ ಅಹಮದ್ ಸ್ವಾಗತಿಸಿ, ಡಾ. ಬಿ.ಆರ್.ರಮೇಶ್ ವಂದಿಸಿದರು