ಕೊಣಾಜೆ : ಕೈರಂಗಳದ ಶಾರದಾ ಗಣಪತಿ ವಿದ್ಯಾ ಕೇಂದ್ರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ಸಾಹಿತಿ ಶ್ರೀನಿವಾಸ ಭಟ್ ಸೇರಾಜೆ ಅವರ ಸರ್ವಾಧ್ಯಕ್ಷತೆಯಲ್ಲಿ ‘ಸಾಹಿತ್ಯ ಸಮಾವೇಶ-2023’ವು ದಿನಾಂಕ 01-12-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಎಸ್. ನಾಯಕ್ ಮಾತನಾಡಿ “ಸಾಹಿತ್ಯ, ಸಂಗೀತ, ಕಲೆಗಳಲ್ಲಿ ಅಭಿರುಚಿ ಇಲ್ಲದ ವ್ಯಕ್ತಿ ಪಶುವಿಗೆ ಸಮಾನ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸಬೇಕು” ಎಂದು ಹೇಳಿದರು.
ಸರ್ವಾಧ್ಯಕ್ಷತೆ ವಹಿಸಿದ ಸಾಹಿತಿ, ಶಾರದಾ ಗಣಪತಿ ವಿದ್ಯಾಕೇಂದ್ರದ ಹಿಂದಿ ಶಿಕ್ಷಕ ಶ್ರೀನಿವಾಸ ಭಟ್ ಸೇರಾಜೆ ಮಾತನಾಡಿ, “ವಿಚಾರಗಳಿಂದ ಚರ್ಚೆ ಆಗಬೇಕೇ ಹೊರತು ಚರ್ಚೆಯೇ ವಿಚಾರ ಆಗಬಾರದು. ಅಧ್ಯಯನಶೀಲತೆ ಮುಖ್ಯ. ಜ್ಞಾನವನ್ನು ಪಡೆದು ಪಸರಿಸಬೇಕು. ಹಾಗಾಗಿ ಬಾಲ್ಯದಲ್ಲಿಯೇ ವಿದ್ಯಾರ್ಥಿಗಳನ್ನು ಸಾಹಿತ್ಯ ಕ್ಷೇತ್ರದ ಸೇವೆಗೆ ನಾವು ಸಿದ್ಧಪಡಿಸಬೇಕು” ಎಂದರು.
ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕರಾದ ಟಿ.ಜಿ. ರಾಜಾರಾಮ್ ಭಟ್ ಮಾತನಾಡಿ “ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ದಾಖಲಾರ್ಹವಾಗಿರುತ್ತವೆ. ಮುಂದಿನ ವರ್ಷದಿಂದ ಇಲ್ಲಿ 10 ಸಾವಿರ ಚದರಡಿಯ ವಿಶಾಲವಾದ ಭವ್ಯ ಸಭಾಂಗಣ ತಲೆ ಎತ್ತಲಿದ್ದು, ಯಾವುದೇ ಸಾಹಿತ್ಯ, ಸಂಗೀತ, ಕಲೆ ಸೇರಿದಂತೆ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಜ್ಞಾನಕ್ಕೆ ಪೂರಕವಾಗುವಂತೆ ಹಾಗೂ ಯೋಜಿತ ಕಾರ್ಯಕ್ರಮ ಅದ್ದೂರಿಯ ಜತೆಗೆ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗುವುದು” ಎಂದು ಹೇಳಿದರು.
ಕಾರ್ಯಕ್ರಮದ ಪ್ರಯುಕ್ತ ಅಭಿರುಚಿ ಗೋಷ್ಠಿ, ಸಾಹಿತ್ಯ ಸೌರಭ, ಪ್ರತಿಭಾ ಪುರಸ್ಕಾರ, ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿತ್ತು. ಅ.ಭಾ.ಸಾ.ಪ. ಜಿಲ್ಲಾಧ್ಯಕ್ಷ ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ ಆಶಯ ಭಾಷಣ ಮಾಡಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೋಡೆ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಟಿ.ಜಿ. ರಾಜಾರಾಮ್ ಭಟ್ ಶುಭ ಹಾರೈಸಿದರು. ಬಂಟ್ವಾಳ ಸಮಿತಿ ಅಧ್ಯಕ್ಷ ಡಾ. ಸುರೇಶ ನೆಗಳಗುಳಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಜಯಾನಂದ ವಂದಿಸಿದರು.