ಸುರತ್ಕಲ್ : ಶ್ರೀ ವಿನಾಯಕ ಯಕ್ಷಗಾನ ಮಂಡಲಿ ತಡಂಬೈಲ್ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಹಯೋಗದೊಂದಿಗೆ ವಿದ್ವಾನ್ ಸುರತ್ಕಲ್ ಸುಬ್ಬರಾವ್ ಯಕ್ಷವೇದಿಕೆಯ ಉದ್ಘಾಟನೆ, ಸಂಸ್ಮರಣೆ ಮತ್ತು ಸಭಾ ಕಾರ್ಯಕ್ರಮವು ದಿನಾಂಕ 28-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ವೇದಮೂರ್ತಿ ಸೀತಾರಾಮ ಆಚಾರ್ಯ ಪಚ್ಚನಾಡಿ ಇವರು ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ, ಯಕ್ಷಗಾನ ಕಲಾವಿದ ಡಾ. ಎಂ. ಪ್ರಭಾಕರ ಜೋಷಿಯವರು ಮಾತನಾಡಿ “ಯಕ್ಷಗಾನ ಕಲಾವಿದ, ಸಂಘಟಕ, ಮಹಿಳಾ ಯಕ್ಷಗಾನ ತಾಳಮದ್ದಳೆಗಳ ಸಂಯೋಜಕ ವಾಸುದೇವ ರಾವ್ ಅವರು ಯಕ್ಷಗಾನ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿರುವುದು ಅವರ ಕ್ರಿಯಾಶೀಲ ಗುಣ, ಆಸಕ್ತಿ, ಇತರರಿಗೆ ಮಾದರಿ” ಎಂದು ನುಡಿದರು. ಪ್ರಸಂಗಕರ್ತ, ಸಾಹಿತಿ ಶ್ರೀಧರ ಡಿ.ಎಸ್. ಅವರು “ವೇದಿಕೆಯು ನಿರಂತರವಾಗಿ ಹೊಸ ಹೊಸ ಯಕ್ಷಗಾನ ಕಲಾವಿದರ ಆವಿಷ್ಕಾರದ ಕೇಂದ್ರವಾಗಲಿ” ಎಂದರು.
ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣ ಮೂರ್ತಿ, ಶ್ರೀಮತಿ ಸುಲೋಚನಾ ವಿ. ರಾವ್ ಉಪಸ್ಥಿತರಿದ್ದರು. ಬಳಿಕ ಕವಿ ಪಾರ್ತಿ ಸುಬ್ಬ ವಿರಚಿತ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ಜರಗಿತು. ಕಲಾವಿದರಾದ ಪಿ. ವೆಂಕಟರಮಣ ಐತಾಳ, ಮಾ. ಸುಮುಖ ಕಲ್ಲೂರಾಯ, ಪಿ. ಗಣೇಶ ಐತಾಳ ಹಿಮ್ಮೇಳದಲ್ಲಿ ಮತ್ತು ಡಾ. ಎಂ. ಪ್ರಭಾಕರ ಜೋಷಿ, ಸರ್ಪಂಗಳ ಈಶ್ವರ ಭಟ್, ಶ್ರೀಧರ ಡಿ.ಎಸ್., ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯರಾದ ಸುಮಿತ್ರಾ ಶಶಿಕಾಂತ ಕಲ್ಲೂರಾಯ ಮತ್ತು ಉಮಾ ದಿವಾಕರ್ ಮುಮ್ಮೇಳದಲ್ಲಿ ಪಾತ್ರವಹಿಸಿದರು.