ಬೆಂಗಳೂರು : ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 08-12-2023ರಂದು ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡುತ್ತಾ, “ಬಡತನದ ಬೇಗುದಿಯಲ್ಲಿ ಬೆಂದು ಬಂಗಾರವಾಗಿ, ಸಮಾಜದಲ್ಲಿಯ ಮೌಢ್ಯವನ್ನು ದೂರಮಾಡುವುದರ ಜೊತೆಗೆ ಜೀವನದ ವಾಸ್ತವಿಕತೆಯನ್ನು ಮಾರ್ಮಿಕವಾಗಿ ತಿಳಿಸಿಕೊಟ್ಟವರು ಡಾ. ಸಿದ್ದಲಿಂಗಯ್ಯನವರು. ಕವಿ, ಸಾಹಿತಿಗಳನ್ನು ಜಾತಿ ಧರ್ಮಕ್ಕೆ ಸೀಮಿತಗೊಳಿಸಬಾರದು. ಬದಲಿಗೆ ಸಾಹಿತ್ಯದಿಂದಲೇ ಅವರು ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರನ್ನು ಗೌರವಿಸುವ ಮೂಲಕ ಸಾಹಿತ್ಯಕ್ಕೆ ಸಾಹಿತ್ಯವೇ ಸಾಟಿ ಎನ್ನುವ ತತ್ವವನ್ನು ಹೊಂದಿದೆ. ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಡಾ. ಸಿದ್ದಲಿಂಗಯ್ಯ ಅವರನ್ನು ದಲಿತ ಕವಿ ಎಂದೇ ಗುರುತಿಸಿದ್ದರು. ಅದರ ಜೊತೆಯಲ್ಲಿ ಬಹುಮುಖ ಪ್ರತಿಭೆಯ ಸಿದ್ದಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಸಾಹಿತ್ಯವನ್ನು ರಚಿಸಿದ್ದು ಮಾತ್ರವಲ್ಲದೆ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ ಹಾಗೂ ಬರವಣಿಗೆ ಅವರ ಅತ್ಯಂತ ಆಸಕ್ತಿಯ ಕೆಲಸವಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಅವರು, ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸಾರಸ್ವತ ಲೋಕಕ್ಕೆ ಅಪಾರ ಕೀರ್ತಿತಂದು ಕೊಟ್ಟವರಲ್ಲಿ ಇವರೂ ಒಬ್ಬರು” ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಮಾತನಾಡಿ “ಸಾಹಿತಿಗಳ ಹೆಸರಿನ ಸಾಹಿತ್ಯ ದತ್ತಿ ಪ್ರಶಸ್ತಿಗಳು ಎನ್ನುವುದು ಸಾಹಿತಿಗಳಿಗೆ ಗೌರವ ತರುವಂತಹದ್ದು. ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯದ ಮೂಲಕ ದಲಿತ ದಮನಿತರ ಧ್ವನಿಯಾದವರು. ಸಾಹಿತ್ಯ, ಸಂಗೀತ, ಹೋರಾಟ ಎಲ್ಲದರಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡ ಪ್ರಯೋಗಶಾಲಿ ಕವಿಯಾಗಿದ್ದರು. ಸರಳತೆ ಅವರ ಶಕ್ತಿಯಾಗಿತ್ತು. ಈ ಕಾರಣದಿಂದಲೇ ಅವರು ಜನಪ್ರಿಯರಾಗಿದ್ದರು. ಜಾತಿ ಎನ್ನುವುದು ನಮ್ಮಲ್ಲಿ ಸಾಂಸ್ಕೃತಿಕ ಅಸ್ಮಿತೆಯಾಗಿದೆ. ಇದು ಅಳಿಯುವರೆಗೂ ಸಾಹಿತ್ಯದಲ್ಲಿ ಕೂಡ ಪ್ರತ್ಯೇಕತೆ ಅನಿವಾರ್ಯವಾಗುತ್ತದೆ. ಜಾತಿ ಪದ್ಧತಿ ಎನ್ನುವುದು ಬರಿ ಭೂತವಲ್ಲ ಬದಲಿಗೆ ವಿಷದ ಬಟ್ಟಲು” ಎಂದು ಹೇಳಿದರು.
ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಪಡೆದವರು – 2019ನೆಯ ಸಾಲಿನ ಪ್ರಶಸ್ತಿ ಕಲಬುರಗಿಯ ಡಾ. ಎಚ್.ಟಿ. ಪೋತೆಯವರಿಗೆ, 2020ರ ಪ್ರಶಸ್ತಿ ವಿಜಯಪುರದ ಶ್ರೀಮತಿ ಇಂದುಮತಿ ಲಮಾಣಿ, 2021ರ ಪ್ರಶಸ್ತಿ ಕೋಲಾರ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ, 2022ರ ಪ್ರಶಸ್ತಿ ಗದಗ ಡಾ. ಅರ್ಜುನ ಗೊಳಸಂಗಿ ಹಾಗೂ 2023ರ ಪ್ರಶಸ್ತಿ ಹಾಸನ ಶ್ರೀ ನಾಗರಾಜ್ ಹೆತ್ತೂರು ಇವರಿಗೆಲ್ಲ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ. ಸಿದ್ದಲಿಂಗಯ್ಯ ಅವರ ಪುತ್ರಿ ಡಾ. ಮಾನಸಾ ಅವರು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಸಿದ್ದಲಿಂಗಯ್ಯನವರ ಹೆಸರಿನಲ್ಲಿ ಇಟ್ಟಿರುವ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ನಾವು ಸೇರಿದಂತೆ ಎಲ್ಲರೂ ಮರೆತೇ ಬಿಟ್ಟಿದ್ದೆವು. ಆದರೆ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಮೂಲೆಗುಂಪಾಗಿದ್ದ ಈ ಪ್ರಶಸ್ತಿಗೆ ಮರು ಜೀವ ನೀಡಿದ್ದು, ಅವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿ. ಕಂಡಿದ್ದು ಕಂಡಹಾಗೆ ಹೇಳಬೇಕು ಎನ್ನುವ ಮಾತನ್ನು ನಮ್ಮ ತಂದೆಯವರು ಹೇಳಿಕೊಟ್ಟಿದ್ದಾರೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದ ಶ್ರೀಮತಿ ರಮಾಕುಮಾರಿ ಸಿದ್ದಲಿಂಗಯ್ಯ ಮಾತನಾಡಿ “ಎಲ್ಲರನ್ನು ಪ್ರೀತಿಯಿಂದ ಕಾಣುವ ಸಿದ್ದಲಿಂಗಯ್ಯನವರು ಅಂಬೇಡ್ಕರ್, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು. `ಗ್ರಾಮ ದೇವತೆಗಳು’ ಅವರ ಪಿಎಚ್.ಡಿ. ಮಹಾಪ್ರಬಂಧ, ‘ಊರು-ಕೇರಿ’ ಎಂಬ ತಮ್ಮ ಆತ್ಮಕತೆಯಲ್ಲಿ ಇನ್ನೂ ಕೆಲವು ಮಹತ್ವದ ಅಂಶಗಳನ್ನು ದಾಖಲಿಸಿದ್ದಾರೆ, ಅವುಗಳನ್ನು ಮುಂದಿನ ದಿನಗಳಲ್ಲಿ ಜನರ ಮಡಿಲಿಗೆ ಹಾಕಬೇಕು ಎನ್ನುವ ಪ್ರಯತ್ನ ನಡೆಯುತ್ತಿದೆ” ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಎಚ್.ಟಿ. ಪೋತೆ “ಸಿದ್ದಲಿಂಗಯ್ಯನವರ ಹೆಸರಿನ ಈ ಪ್ರಶಸ್ತಿ ಪಡೆದುಕೊಳ್ಳುತ್ತಿರುವುದು ನನ್ನ ಜೀವನದ ಹೆಮ್ಮೆಯ ಸಂಗತಿ ಅವರು ಕೇವಲ ದಲಿತ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿರದೆ ಸಮಾಜದ ಕುರಿತು ಕಳಕಳಿ ತೋರುವ ಮಾತೃಸ್ವರೂಪಿಯಾಗಿದ್ದರು. ಅವರು ಈಗ ನಮ್ಮ ಮಧ್ಯ ಇಲ್ಲ ಎನ್ನುವ ಭ್ರಾಂತಿ ಯಾರಿಗೂ ಇಲ್ಲ. ಅವರು ಸದಾ ನಮ್ಮ ಮಧ್ಯದಲ್ಲೇ ಇದ್ದಾರೆ ಎನ್ನುವ ಭಾವನೆ ಎಲ್ಲರಿಗೂ ಇದೆ. ಭಾರತದಲ್ಲಿ ಎಲ್ಲಾ ವರ್ಗಗಳ ನಡುವೆ ಮೇಲು ಕೀಳು ಎನ್ನುವ ಭಾವನೆ ಹೋಗಬೇಕು ಎನ್ನುವ ಅವರ ಮಾತು ಸತ್ಯವಾಗಿದೆ. ಅದಕ್ಕೆ ದೇಶದ ಮೇಲ್ವರ್ಗದವರು ಜಾತಿಯನ್ನು ಪದ್ಧತಿಯಿಂದ ಹೊರಗೆ ಬರುವ ಪ್ರಯತ್ನ ಮಾಡಲೇಬೇಕು” ಎಂದರು.
ಪ್ರಶಸ್ತಿ ಪುರಸ್ಕೃತ ಇಂದುಮತಿ ಲಮಾಣಿ ಅವರು ಮಾತನಾಡಿ “ಡಾ. ಸಿದ್ದಲಿಂಗಯ್ಯನವರು ಬದುಕು ಬವಣೆಗಳೆಲ್ಲವನ್ನೂ ಕರ್ತವ್ಯದ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಸರಳ ಬದುಕನ್ನು ಬದುಕುವ ಮೂಲಕ ಸಾಹಿತಿಯೊಬ್ಬ ಜನಸಾಮಾನ್ಯರ ಜೊತೆಗೆ ಇರಬೇಕಾದ ಆಪ್ತತೆಯನ್ನು ಮೆರೆದಿದ್ದಾರೆ. ನನ್ನಂತಹ ತಾಂಡಾದ ಹುಡುಗಿಯೊಬ್ಬಳು ಸಾಹಿತ್ಯ ಕೃಷಿಗೆ ತೊಗಿಸಿಕೊಳ್ಳುವುದಕ್ಕೆ ಕಾರಣರಾದವರೇ ಸಿದ್ದಲಿಂಗಯ್ಯ ಮೇಷ್ಟ್ರು” ಎಂದು ಹೇಳಿದರು. ಪ್ರಶಸ್ತಿ ಸ್ವಿಕರಿಸಿದ ಶ್ರೀ ನಾಗರಾಜ್ ಹೆತ್ತೂರು ಇವರು ಡಾ. ಸಿದ್ದಲಿಂಗಯ್ಯನವರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕನ್ನಡ ಚಲನಚಿತ್ರದ ಹಿರಿಯ ನಟಿ ಲೀಲಾವತಿಯವರ ಅಗಲಿಕೆಯ ಸುದ್ದಿ ತಿಳಿದ ತಕ್ಷಣ ಸಭೆಯಲ್ಲಿ ಒಂದು ನಿಮಿಷದ ಮೌನ ಆಚರಿಸುವ ಮೂಲಕ ಹಿರಿಯ ಕಲಾವಿದೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲೀಲಾವತಿಯವರು ಕನ್ನಡ ಚಿತ್ರರಂಗದ ಮೂಲಕ ಕನ್ನಡ ಭಾಷೆ ಸಂಸ್ಕೃತಿಗೆ ನೀಡಿದ ಕೊಡುಗೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸ್ಮರಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿ, ವಂದಿಸಿದರು. ಪರಿಷತ್ತಿನ ಪ್ರಕಟಣಾ ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್.ಎಸ್.ಶ್ರೀಧರ ಮೂರ್ತಿ ಅವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಡಾ. ಪದ್ಮಿನಿ ನಾಗರಾಜು ಅವರು ವಂದಿಸಿ, ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು.