ಬೈಂದೂರು : ಬೈಂದೂರು ತಾಲೂಕಿನ ಅರೆಹೊಳೆಯ ನಂದಗೋಕುಲ ರಂಗಶಾಲೆಯಲ್ಲಿ ಅರೆಹೊಳೆ ಪ್ರತಿಷ್ಠಾನ, ರಂಗ ಪಯಣ ಬೆಂಗಳೂರು, ಮಂದಾರ (ರಿ.) ಬೈಕಾಡಿ ಮತ್ತು ಜನಪ್ರತಿನಿಧಿ ಕುಂದಾಪುರ ಇವರು ಆಯೋಜಿಸಿದ ಕನಸು ಕಾರ್ತಿಕ್ ನೆನಪಿನಲ್ಲಿ ‘ಅರೆಹೊಳೆ ನಾಟಕೋತ್ಸವ’ವು ದಿನಾಂಕ 03-12-2023ರಿಂದ 05-12-2023ರವರೆಗೆ ನಡೆಯಿತು. ಈ ನಾಟಕೋತ್ಸವದಲ್ಲಿ ಖ್ಯಾತ ರೇಡಿಯೋ ನಿರೂಪಕಿ, ಲೇಖಕಿ ಆರ್.ಜೆ. ನಯನ “ಯಾವ ಊರಿನಲ್ಲಿ ಸಂಸ್ಕೃತಿ ಬೆಳೆಯುತ್ತದೋ ಆ ಊರು ಅಭಿವೃದ್ಧಿಯಾಗುತ್ತದೆ, ಸಂಸ್ಕೃತಿಯನ್ನು ನಾಶ ಮಾಡಿದ ಊರು ಅಥವಾ ಜನಾಂಗ ನಶಿಸುತ್ತದೆ” ಎಂದು ಹೇಳಿದರು.
ಕನಸು ಕಾರ್ತಿಕ್ ನೆನಪಿನಲ್ಲಿ ಆಯೋಜಿಸಿದ್ದ ಅರೆಹೊಳೆ ನಾಟಕೋತ್ಸವದ ಮೊದಲ ದಿನ, ಕಳೆದ ವರ್ಷ ನಿಧನರಾದ ಯುವ ರಂಗಕರ್ಮಿ, ರಂಗಕಲಾವಿದ ಕನಸು ಕಾರ್ತಿಕ್ ನೆನಪಿನ ‘ಯುವರಂಗ ಪುರಸ್ಕಾರ’ವನ್ನು ಕಲಾವಿದೆ ಲಿಖಿತಾ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತಾಡಿದ ಲಿಖಿತಾ ಶೆಟ್ಟಿ “ಕನಸು ಕಾರ್ತಿಕ್ ಮುಖ್ಯವಾಗಿ ಹಾಸ್ಯ ಕ್ಷೇತ್ರದಲ್ಲಿ ಆಸಕ್ತರಾಗಿದ್ದು ಬೇರೆಯವರನ್ನು ಪ್ರೇರೇಪಿಸಿ ಪ್ರೋತ್ಸಾಹಿಸುತ್ತಿದ್ದುದ್ದನ್ನು ನೆನೆಸಿಕೊಂಡರು. ಕನಸು ಕಾರ್ತಿಕ್ ಕಲ್ಪನೆಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ತಮ್ಮ ಸಂತೋಷವನ್ನು ಹಂಚಿಕೊಂಡರು. ಕಾರ್ತಿಕ್ ತಾನು ಬೆಳೆಯುವುದಕ್ಕಿಂತಲೂ ಹೆಚ್ಚಾಗಿ ಬೇರೆಯವರನ್ನು ಬೆಳೆಸುವುದರಲ್ಲಿ ಆಸಕ್ತನಾಗಿದ್ದುದ್ದನ್ನು ಸ್ಮರಿಸಿಕೊಂಡು, ಪ್ರಶಸ್ತಿಯನ್ನು ತಾನು ಕನಸು ಕಾರ್ತಿಕ್ ಅವರಿಗೆ ಅರ್ಪಿಸುತ್ತಿದ್ದೇನೆ” ಎಂದು ಹೇಳಿದರು.
ಕನಸು ಕಾರ್ತಿಕ್ ಅವರ ತಾಯಿ ಭಾರತಿ ಪೂಜಾರಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿಯಾಗಿ ಉಡುಪಿಯ ಕ್ರೆಡಿಟ್. ಕೋ. ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿರುವ ಸಚಿನ್ ಪೂಜಾರಿ ಅವರು ಭಾಗವಹಿಸಿ ಮಾತನಾಡುತ್ತಾ ಕಾರ್ತಿಕ್ ಮತ್ತು ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು. ವೇದಿಕೆಯಲ್ಲಿ ಮಂದಾರ (ರಿ.) ಬೈಕಾಡಿ ಇದರ, ರೋಹಿತ್ ಬೈಕಾಡಿ ಅವರು ಉಪಸ್ಥಿತರಿದ್ದರು. ಕಳೆದ 25 ವರ್ಷಗಳಿಂದ ನಿರಂತರ ಪ್ರಕಟವಾಗುತ್ತಿರುವ ಜನಪ್ರತಿನಿಧಿ ವಾರಪತ್ರಿಕೆಯ 25ನೇ ವರ್ಷದ ಸಂಭ್ರಮದ ಭಾಗವಾಗಿಯೂ ಆಯೋಜಿಸಲಾಗಿದ್ದ ಈ ನಾಟಕೋತ್ಸವದಲ್ಲಿ ಜನಪ್ರತಿನಿಧಿ ಪತ್ರಿಕೆಯ ಸಂಪಾದಕ ಸುಬ್ರಮಣ್ಯ ಪಡುಕೋಣೆ ಭಾಗವಹಿಸಿ ಮಾತನಾಡುತ್ತಾ, “ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಒಂದು ರಂಗಮಂದಿರದ ಕನಸನ್ನು ಸಾಕಾರಗೊಳಿಸಿದ ಅರೆಹೊಳೆ ಸದಾಶಿವ ರಾವ್ ಇವರ ಸಾಧನೆ ಅಭಿನಂದನೀಯ” ಎಂದರು.
ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಮಂಜುಳಾ ಜಿ. ತೆಕ್ಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನಸು ಕಾರ್ತಿಕ್ ಅವರ ತಾಯಿ ಭಾರತಿ ಪೂಜಾರಿ ಅವರನ್ನು ವಿಶೇಷವಾಗಿ ಗೌರವಿಸಿ ಅಭಿನಂದಿಸಲಾಯಿತು. ನಂದಗೋಕುಲ ನಿರ್ದೇಶಕಿ ಶ್ವೇತಾ ಅರೆಹೊಳೆ, ಕಲಾವಿದೆ ಪೃಥ್ವಿರಾವ್ ಹಾಗೂ ಅರೆಹೊಳೆ ಪ್ರತಿಷ್ಠಾನದ ಸರ್ವ ಸದಸ್ಯರು ಉಪಸ್ಥಿತರಿದ್ದರು. ನಂತರ ವೇದಿಕೆಯಲ್ಲಿ ರಂಗಪಯಣ ತಂಡ ಬೆಂಗಳೂರು ಇವರು ಅಭಿನಯಿಸಿದ ‘ಫೂಲನ್ ದೇವಿ ನಾಟಕದ 25ನೇ ಪ್ರಯೋಗ ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ತಂಡದ ಕಲಾವಿದರನ್ನು ಅಭಿನಂದಿಸಿ ಗೌರವಿಸಲಾಯಿತು.
ನಾಟಕೋತ್ಸವದ ಮೂರು ದಿನಗಳ ಆರಂಭದಲ್ಲಿ ಕಾರ್ತಿಕ್ ನುಡಿನಮನ ಕಾರ್ಯಕ್ರಮ ನಡೆಯಿತು. ಮೊದಲ ದಿನ ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಕಾರ್ತಿಕ್ ನಂದಗೋಕುಲಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. “ಸದಾಕಾಲವು ರಂಗಭೂಮಿಯೆಡೆಗೆ ತುಡಿಯುತ್ತಿದ್ದ ಕಾರ್ತಿಕ್ ಅರೆಹೊಳೆಯ ನಂದಗೋಕುಲ ರಂಗಶಿಕ್ಷಣ ಕೇಂದ್ರದಲ್ಲಿ ಕಾಯಂ ಸೇವೆ ಸಲ್ಲಿಸುವ ಉದ್ದೇಶ ಹೊಂದಿದ್ದರು, ಆ ಆಸೆ ಪೂರ್ತಿ ಆಗದಿದ್ದ ಬಗ್ಗೆ ತಮಗೂ ವಿಷಾದವಿದೆ” ಎಂದರು.
ಎರಡನೆಯ ದಿನ ರಂಗಪಯಣ ಬೆಂಗಳೂರು ಇದರ ನಯನ ಜೆ. ಸೂಡ ಮಾತನಾಡಿ “ರಂಗಪಯಣ ನಿರ್ಮಿಸುತ್ತಿದ್ದ ಪ್ರತಿ ನಾಟಕಗಳ ಸಾಹಿತ್ಯಕ್ಕೂ ಕಾರ್ತಿಕ್ ಇವರ ಕೊಡುಗೆ ಮುಖ್ಯವಾದದ್ದು, ಪ್ರಮುಖವಾಗಿ ಸೊಮಾಲಿಯಾ ಕಡಲಗಳ್ಳರು ಹಾಗೂ ಚಂದ್ರಗಿರಿಯ ತೀರದಲ್ಲಿ ನಾಟಕಗಳಲ್ಲಿ ಕರಾವಳಿ ಭಾಗದ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಕಾರ್ತಿಕ್ ಕೊಡುಗೆ ಅದ್ಭುತ” ಎಂದು ಹೇಳಿದರು.
ಮೂರನೇ ದಿನ ಆರಂಭದಲ್ಲಿ ರಂಗ ಪಯಣ ಕಲಾವಿದರು ರಂಗಗೀತೆಯ ಮೂಲಕ ಕಾರ್ತಿಕ್ ನುಡಿನಮನ ಸಲ್ಲಿಸಿದರು. ನಂತರ, ನಂದಗೋಕುಲ ನಿರ್ದೇಶಕಿ ಶ್ವೇತಾ ಅರೆಹೊಳೆ ಮಾತಾಡಿ, “ನಂದಗೋಕುಲದ ಪ್ರತಿಕಲಾವಿದರನ್ನು ತನ್ನ ಸಹೋದರ ಸಹೋದರಿಯರ ರೀತಿ ಕಾಣುತ್ತಿದ್ದ ಕಾರ್ತಿಕ್, ಕರಾವಳಿಯಾದ್ಯಂತ ನಂದಗೋಕುಲ ಕಾರ್ಯಕ್ರಮ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅವರನ್ನು ಕಳೆದುಕೊಂಡು ನಂದಗೋಕುಲ ಶಾಶ್ವತವಾಗಿ ಸಹೋದರನನ್ನು ಕಳೆದುಕೊಂಡ ನೋವಿನಲ್ಲಿದೆ” ಎಂದರು.
ಕಾರ್ತಿಕ್ ಬ್ರಹ್ಮಾವರ ಕಲಾವಿದನಾಗಿದ್ದ ಬೆಂಗಳೂರಿನ ರಂಗಪಯಣ ತಂಡ ಈ ಕೆಳಗಿನ ಮೂರು ನಾಟಕಗಳನ್ನು ಪ್ರದರ್ಶಿಸಿದೆ. ಮೊದಲ ದಿನ ಡಕಾಯಿತರ ರಾಣಿ ಪೂಲನ್ ದೇವಿ ಜೀವನ ಆಧಾರಿತ ‘ಪೂಲನ್ ದೇವಿ’ ನಾಟಕ ಪ್ರದರ್ಶನಗೊಂಡಿದ್ದು, ಇದರ ರಚನೆ ಮತ್ತು ನಿರ್ದೇಶನ ರಾಜಗುರು ಹೊಸಕೋಟೆ ಅವರು ಮಾಡಿದ್ದು ಪೂಲನ್ ದೇವಿಯಾಗಿ ನಯನ ಜೆ.ಸೂಡರವರು ಪ್ರಧಾನಪಾತ್ರದಲ್ಲಿ ಅಭಿನಯಿಸಿದರು. ಇದು ಈ ನಾಟಕದ 25ನೇ ಪ್ರದರ್ಶನವಾಗಿದ್ದು ವಿಶೇಷ. ಎರಡನೆಯ ದಿನ, ಮಂಜುನಾಥ ಬೆಳಕೆರೆ ರಚನೆಯ ಶಿಶುನಾಳ ಶರೀಫರ ಜೀವನಾಧಾರಿತ ನಾಟಕ ‘ಶರೀಫ’ ಪ್ರದರ್ಶನಗೊಂಡಿದ್ದು, ರಾಜಗುರು ಶರೀಫರಾಗಿ ಅಭಿನಯಿಸಿ ಮನಸೂರೆಗೊಂಡರು. ಮೂರನೇ ದಿನ ಕಥೆಗಾರ ಶ್ರೀನಿವಾಸ ವೈದ್ಯ ಅವರ ಕಥೆಯನ್ನಾಧರಿಸಿದ ಬಹಳ ಜನಪ್ರಿಯ ಹಾಸ್ಯ ಪ್ರಧಾನ ನಾಟಕ ‘ಬಿದ್ದೂರಿನ ಬಿಗ್ ಬೆನ್’ ಈ ನಾಟಕೋತ್ಸವದ ಕೊನೆಯ ನಾಟಕವಾಗಿ ಪ್ರದರ್ಶನಗೊಂಡು ನೆರೆದಿದ್ದ ಪ್ರೇಕ್ಷಕರನ್ನು ನಗೆಯ ಕಡಲಲ್ಲಿ ತೇಲಿಸಿತು.
ಮೊದಲ ಎರಡು ದಿನದ ನಾಟಕವು ನಂದಗೋಕುಲ ರಂಗಶಾಲೆಯ ಪ್ರಧಾನ ವೇದಿಕೆಯಾದ ಡಾ. ಹಂದಟ್ಟು ಹರೀಶ್ ಹಂದೆ ರಂಗಮಂದಿರದಲ್ಲಿ ನಡೆದರೆ, ಮೂರನೇ ದಿನದ ನಾಟಕವು ಶಾಂತ ರತ್ನಾಕರ್ ವನವೇದಿಕೆಯಲ್ಲಿ ಪ್ರದರ್ಶನಗೊಂಡಿತು.
ಅರೆಹೊಳೆಯಂತಹ ಗ್ರಾಮೀಣ ಪ್ರದೇಶದಲ್ಲಿ ಇಂತಹ ನಾಟಕೋತ್ಸವವನ್ನು ಆಯೋಜಿಸುವುದು ಸವಾಲಾಗಿತ್ತು. ಈ ಭಾಗದ ಜನತೆಗೆ ಆಧುನಿಕ ನಾಟಕಗಳನ್ನು ನೀಡಬೇಕು ಎನ್ನುವ ಅರೆಹೊಳೆ ಪ್ರತಿಷ್ಠಾನದ ಕನಸು ನನಸಾಗಿದ್ದ ಸಮಯವಾಗಿತ್ತದು. ಮೂರು ದಿನಗಳ ಕಾಲ ಅರೆಹೊಳೆ ಪ್ರತಿಷ್ಠಾನದ ವೇದಿಕೆಯ ಮುಂಭಾಗದಲ್ಲಿ ಪ್ರೇಕ್ಷಕರಿಗೆ ಆಸನಗಳು ಕಡಿಮೆಯಾಗಿ ಜನ ನಿಂತು ನಾಟಕೋತ್ಸವವನ್ನು ನೋಡಿದ್ದು ಬಹಳ ವಿಶೇಷವಾಗಿತ್ತು. ನಾಟಕೋತ್ಸವ ಮುಗಿದ ನಂತರ ನಾಟಕವನ್ನು ವೀಕ್ಷಿಸಿದ ಎಲ್ಲ ಜನರಿಂದಲೂ ಅತ್ಯಂತ ಉತ್ತಮ ಪ್ರತಿಕ್ರಿಯೆ ಕೇಳಬಂದಿದ್ದು, ಮುಂದೆಯೂ ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದಕ್ಕೆ ಅದು ಸ್ಪೂರ್ತಿ ನೀಡಿದೆ.