ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕೇಂದ್ರದಲ್ಲಿ ತರಬೇತಿ ಪಡೆದ ಮಕ್ಕಳ ರಂಗ ಪ್ರವೇಶ ಕಾರ್ಯಕ್ರಮ ‘ರಂಗಾರ್ಪಣ’ ಹಾಗೂ ಮೇಳಕ್ಕೆ ಪಾದಾರ್ಪಣೆ ಮಾಡುತ್ತಿರುವ ಕಲಾವಿದರಿಗೆ ಅಭಿನಂದನಾ ಕಾರ್ಯಕ್ರಮ ದಿನಾಂಕ 10-12-2023ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಕೇಂದ್ರದಿಂದ ಮೇಳಕ್ಕೆ ಪಾದಾರ್ಪಣೆ ಮಾಡುತ್ತಿರುವ ನೀಲಾವರ ಮೇಳದ ಪ್ರದಾನ ಭಾಗವತ ನವೀನ್ ಕೋಟ, ಅಮೃತೇಶ್ವರಿ ಮೇಳದ ಚಂಡೆವಾದಕ ರಾಹುಲ್ ಕುಂದರ್ ಕೋಡಿ, ಸೌಕೂರು ಮೇಳದ ಚಂಡೆವಾದಕ ವಿಘ್ನೇಶ್ ಆಚಾರ್ ಹಾಗೂ ಮೇಗರವಳ್ಳಿ ಮೇಳದ ಸಂಗೀತಗಾರ ಸತೀಶ್ ಉಳ್ಳೂರು ಇವರನ್ನು ಅಮೃತೇಶ್ವರಿ ಮೇಳದ ಯಜಮಾನರಾದ ಆನಂದ ಸಿ. ಕುಂದರ್ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು “ಕರಾವಳಿಯಲ್ಲಿ ಸಮಾಜದ ಸಂಸ್ಕೃತಿ ಉಳಿಯುವಲ್ಲಿ ಬಹುದೊಡ್ಡ ಪಾಲು ಕೊಟ್ಟದ್ದು ಯಕ್ಷಗಾನ. ಮಕ್ಕಳಲ್ಲಿ ಸಂಸ್ಕೃತಿಯ ಬೆಳಕು ಚೆಲ್ಲಿ ಸುಂದರ ಸಮಾಜವನ್ನು ರೂಪಿಸುವ ಕಾರ್ಯ ಕರಾವಳಿ ಭಾಗದಲ್ಲಿ ಮುಂಚೂಣಿಯಲ್ಲಿದೆ. ನಿರಂತರ ಬೇರೆ ಬೇರೆ ಕಲಾ ವಿಭಾಗದಲ್ಲಿ ತೊಡಗಿಸಿಕೊಂಡ ಸಂಸ್ಥೆಯ ಸಾಧನೆ ಶ್ಲಾಘನೀಯ. ಪ್ರತೀ ವರ್ಷ ಮೇಳಕ್ಕೆ ಕಲಾವಿದರನ್ನು ಒಳ್ಳೆಯ ಸಾಂಪ್ರದಾಯಿಕ ಲೇಪ ಕೊಟ್ಟು ಕೊಡುಗೆಯಾಗಿ ನೀಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಾಂಸ್ಕೃತಿಕ ಲೇಪನ ಅತ್ಯಗತ್ಯ.” ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿದ ನೀಲಾವರ ಮೇಳದ ನವೀನ್ ಕೋಟ ಮಾತನಾಡಿ “ಸಂಸ್ಥೆಯು ಬೆಳೆಯುವಲ್ಲಿ ಮುಖ್ಯ ಕಾರಣ ಗುರುಗಳು. ಸಮರ್ಥ ಗುರುವಿದ್ದರೆ ಕಲಿಯುವ ಆಸಕ್ತಿ ಇದ್ದವರಿಗೆ ಯಕ್ಷಗಾನ ಸುಲಭ ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ತೆಕ್ಕಟ್ಟೆ ಕೇಂದ್ರಕ್ಕೆ ಯಕ್ಷಗಾನ ಕಲಿಕೆಗಾಗಿ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಸಂಸ್ಥೆಯ ಶಿಷ್ಯನಾಗಿ ನಾನು ಬೆಳೆದಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತದೆ.” ಎಂದರು.
ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಚಿತ್ರಕಲಾ ಗುರು ಗಿರೀಶ್ ವಕ್ವಾಡಿ, ಬ್ರೇಕ್ ಡಾನ್ಸ್ ಗುರು ಸುಧೀರ್ ತಲ್ಲೂರು, ಕೇಂದ್ರದ ಎಲ್ಲಾ ಯಕ್ಷಗಾನ ಶಿಷ್ಯರು ಉಪಸ್ಥಿತರಿದ್ದರು. ಗುರುಗಳಾದ ಲಂಬೋದರ ಹೆಗಡೆಯವರು ಪ್ರಾಸ್ತಾವಿಕ ಮಾತನ್ನಾಡಿ, ಪ್ರದೀಪ್ ಸಾಮಗ ಕೇಂದ್ರದ ಬಗೆಗಿನ ಅಭಿಪ್ರಾಯವನ್ನು ಮಂಡಿಸಿ, ಸುಮನಾ ನೇರಂಬಳ್ಳಿ ಕಾರ್ಯಕ್ರಮ ನಿರ್ವಹಿಸಿ ಮೇಘನಾ ಧನ್ಯವಾದಗೈದರು. ಬಳಿಕ ಕೇಂದ್ರದ ಎಲ್ಲಾ ವಿಭಾಗದ ಶಿಷ್ಯರಿಂದ ‘ರಂಗಾರ್ಪಣ’ ಪ್ರಸ್ತುತಿಗೊಂಡಿತು.