ಉಡುಪಿ : ರಂಗಭೂಮಿ ಉಡುಪಿ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 28-01-2024ರಂದು ‘ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ ಪ್ರದಾನ’ ಸಮಾರಂಭ ನಡೆಯಿತು. ಇದೇ ಸಂದರ್ಭದಲ್ಲಿ ಪ್ರಸಿದ್ಧ ಲೇಖಕ ಮೌನೇಶ್ ಬಡಿಗೇರ ಅವರ ‘ಟಪಾಲು ಮನೆ’ ನಾಟಕ ಕೃತಿಯ ಬಿಡುಗಡೆ ಹಾಗೂ ವಿಚಾರ ಸಂಕಿರಣ ನಡೆಯಿತು.
ಯಕ್ಷಗಾನ ಕೇಂದ್ರ ಉಡುಪಿ ಇದರ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅವರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, “ಈ ನಾಟಕದ ರಂಗ ಪ್ರಯೋಗವನ್ನು ಮಾಡಲು ರಂಗಭೂಮಿ ಚಿಂತನೆ ನಡೆಸಬೇಕು” ಎಂದರು. ಇಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ರಂಗಭೂಮಿ ಉಡುಪಿ ಸಂಸ್ಥೆಯನ್ನು ಶ್ಲಾಘಿಸಿದ ಅವರು, ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅವರ ತಂಡ ರಂಗಭೂಮಿಯ ನೈಜ ಆಶಯವನ್ನು ಸಾಕಾರಗೊಳಿಸುತ್ತಿದೆ ಎಂದು ಕೊಂಡಾಡಿದರು. ಅಗಲಿದ ವಿದ್ವಾಂಸ ಅಂಬಾತನಯ ಮುದ್ರಾಡಿ ಅವರು ರಂಗಭೂಮಿಗೆ ನೀಡಿದ ಕೊಡುಗೆಯನ್ನು ಅವರು ಪ್ರಸ್ತಾಪಿಸಿದರು.
ಚಿಂತಕ ಭುವನಪ್ರಸಾದ ಹೆಗ್ಡೆ ಅವರು ಕೃತಿಯನ್ನು ಪರಿಚಯಿಸಿದರು. ಮಾಹೆ ಮಣಿಪಾಲ ಯೂನಿವರ್ಸಲ್ ಪ್ರೆಸ್ಸಿನ ಅರವಿಂದ್ ಅವರು ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಕೃತಿಕಾರ ಮೌನೇಶ್ ಬಡಿಗೇರ, ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಉಪಾಧ್ಯಕ್ಷರುಗಳಾದ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್.ಆರ್. ಬಲ್ಲಾಳ್ ಉಪಸ್ಥಿತರಿದ್ದರು. ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಸ್ವಾಗತಿಸಿ, ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿ, ವಿವೇಕಾನಂದ ಎಸ್. ವಂದಿಸಿದರು.
ಈ ಕಾರ್ಯಕ್ರಮದ ಪೂರ್ವದಲ್ಲಿ ಅಂಬಾತನಯ ಮುದ್ರಾಡಿ ಸಂಸ್ಮರಣಾ ಪುಸ್ತಕ ಪ್ರಶಸ್ತಿ ವಿಜೇತ ಕೃತಿ ಮೌನೇಶ್ ಬಡಿಗೇರ ಅವರ ‘ಅಭಿನಯ ಕಲಿಸಲು ಸಾಧ್ಯವೇ ?’ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ರಂಗ ನಿರ್ದೇಶಕರುಗಳಾದ ಕೃಷ್ಣಮೂರ್ತಿ ಕವತ್ತಾರ್ ಹಾಗೂ ಬಾಸುಮ ಕೊಡಗು ಪಾಲ್ಗೊಂಡರು. ಪ್ರಶಸ್ತಿ ಸಮಿತಿಯ ಸಹ ಸಂಚಾಲಕರಾದ ಪ್ರಭಾಕರ್ ಜಿ.ಪಿ. ಕಾರ್ಯಕ್ರಮ ನಿರ್ವಹಿಸಿದರು. ಡಾ. ನಿಕೇತನಾ ವಂದಿಸಿದರು.