ವಿಜಯಪುರ : ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಕೆ.ಸಿ.ಪಿ. ಸೈನ್ಸ್ ಹಾಗೂ ಎಸ್.ಬಿ. ಆರ್ಟ್ಸ್ ಕಾಲೇಜಿನಲ್ಲಿ ವಿಜಯಪುರದ ಜಿಲ್ಲಾ ಕರ್ನಾಟಕ ಗಮಕ ಪರಿಷತ್ ಹಾಗೂ ಬಿ.ಎಲ್.ಡಿ.ಇ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕುಮಾರವ್ಯಾಸ ಜಯಂತಿ ಹಾಗೂ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 29-01-2024ರಂದು ಆಚರಿಸಲಾಯಿತು.
ಸಂಸ್ಥೆಯ ಪ್ರಾಚಾರ್ಯರಾದ ಡಾ. ಆರ್.ಎಂ. ಮಿರ್ಧೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ಕರ್ನಾಟಕ ಗಮಕ ಪರಿಷತ್ತಿನ ಗೌರವಾಧ್ಯಕ್ಷರಾದ ಶ್ರೀ ಬಿ.ಎಂ. ಪಾಟೀಲ, ಸಾಹಿತಿ ಶ್ರೀ ಜಂಬುನಾಥ ಕಂಚ್ಯಾಣಿ, ಶ್ರೀ ಎಸ್.ಎಂ. ಜೇವರಗಿ, ಡಾ. ಪಿ.ಎಸ್. ಪಾಟೀಲ್ (ಐಕ್ಯೂಎಸಿ ನಿರ್ದೇಶಕರು), ಕಲ್ಯಾಣರಾವ್ ದೇಶಪಾಂಡೆ, ಶ್ರೀಮತಿ ಭೂದೇವಿ ಕುಲಕರ್ಣಿ ಹಾಗೂ ಶ್ರೀಮತಿ ಪುಷ್ಪಾ ಕುಲಕರ್ಣಿ ಅತಿಥಿಗಳಾಗಿ ಭಾಗವಹಿಸಿದರು.
ಗಮಕ ಕಾರ್ಯಕ್ರಮವು ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಮತಿ ಉಷಾದೇವಿ ಹಿರೇಮಠ ಇವರ ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಗಮಕಿಗಳಾದ ಶ್ರೀಮತಿ ಭೂದೇವಿ ಕುಲಕರ್ಣಿ ಹಾಗೂ ಶ್ರೀಮತಿ ಪುಷ್ಪಾ ಕುಲಕರ್ಣಿ ಇವರುಗಳು ಕರ್ನಾಟಕ ಭಾರತ ಕಥಾ ಮಂಜರಿಯ ‘ಶ್ರೀವನಿತೆಯರಸನೆ ವಿಮಲರಾಜೀವ ಪೀಠನ ಪಿತನೆ’ ಎನ್ನುವ ಪೀಠಿಕಾ ಪದ್ಯದೊಂದಿಗೆ ಗಮಕ ವಾಚನವನ್ನು ಸುಶ್ರಾವ್ಯವಾಗಿ ಹಾಗೂ ಭಕ್ತಿಪೂರ್ವಕವಾಗಿ ಆರಂಭಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಯುವಂತೆ ಕವಿ ಕುಮಾರವ್ಯಾಸರ ಪರಿಚಯವನ್ನು ಕಲ್ಯಾಣ ರಾವ್ ದೇಶಪಾಂಡೆಯವರು ನಡೆಸಿಕೊಟ್ಟರು. ನಂತರ ಕುಮಾರವ್ಯಾಸ ಭಾರತದ ವಿರಾಟ ಪರ್ವದ `ಉತ್ತರಾಭಿಮನ್ಯು ಪರಿಣಯ’ ಪ್ರಸಂಗದ ಗಮಕ ಭಾಗವು ಕೇಳುಗರನ್ನು ಮಹಾಭಾರತದ ಯುಗಕ್ಕೆ ಕರೆದುಕೊಂಡು ಹೋಯಿತು. ಗಮಕ ಕ್ಷೇತ್ರಕ್ಕೆ ಹೊಸದಾಗಿ ಪರಿಚಿತಗೊಂಡ ಹೊಸ ಗಮಕಿಗಳ ವಾಚನವು ಕೇಳುಗರನ್ನು ಆಕರ್ಷಿಸಿತು. ಒಂದು ಘಂಟೆ ಕಾಲ ನಡೆದ ಗಮಕ ಪ್ರಸಂಗವು ವಿದ್ಯಾರ್ಥಿಗಳಿಗೆ ಒಂದು ಹೊಸ ಅನುಭವವನ್ನು ನೀಡಿತು.
ಕಾರ್ಯಕ್ರಮದ ಬಳಿಕ ಗಮಕ ಪ್ರಸಂಗದ ವಿಷಯಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ ಕಾರ್ಯಕ್ರಮದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಫಲಪ್ರದಗೊಳಿಸಿದರು. ಗಮಕ ಕಲೆಯನ್ನು ಕುರಿತು ಮಾತನಾಡಿದ ಶ್ರೀ ಜಂಬುನಾಥ ಕಂಚ್ಯಾಣಿ “ವಿಜಯಪುರ ಜಿಲ್ಲೆಯಲ್ಲಿ ಗಮಕವು ಪ್ರಸಾರದಲ್ಲಿರುವುದು ತುಂಬಾ ಸಂತೋಷದ ವಿಷಯ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಹಾಗೂ ಹಳಗನ್ನಡ, ನಡುಗನ್ನಡ, ಕಾವ್ಯಗಳ ವಾಚನ, ವ್ಯಾಖ್ಯಾನದಿಂದ ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಸಂಸ್ಕೃತಿ ಲಭಿಸುವುದು.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಕಲಾ ಸಂಘದ ಅಧ್ಯಕ್ಷರಾದ ಶ್ರೀ ಬಾಬುರಾವ್ ಕುಲಕರ್ಣಿ, ಶ್ರೀ ಶ್ರೀನಿವಾಸ ದೊಡ್ಡಮನಿ, ಬಿ.ಎಲ್.ಡಿ.ಇ. ಸ್ನಾತಕೋತ್ತರ ಕೇಂದ್ರದ ಹಿಂದಿನ ಮುಖ್ಯಸ್ಥರಾದ ಡಾ. ಆರ್.ಕೆ. ಕುಲಕರ್ಣಿ, ಶ್ರೀ ಶಿವಾಜಿ ಮೋರೆ, ಶ್ರೀಮತಿ ಪ್ರಮಿಳಾ ದೇಶಪಾಂಡೆ ಹಾಗೂ ಕಾಲೇಜಿನ ಉಪನ್ಯಾಸಕ ವರ್ಗದವರು ಅತ್ಯಂತ ಆಸಕ್ತಿಯಿಂದ ಭಾಗವಹಿಸಿದರು. ಸಮಾರಂಭದಲ್ಲಿ ಗಮಕಿಗಳಿಗೆ ಹಾಗೂ ವೇದಿಕೆಯ ಮೇಲಿನ ಅತಿಥಿಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕನ್ನಡ ಉಪನ್ಯಾಸಕರಾದ ಶ್ರೀ ಎಸ್.ಎಚ್.ಹೂಗಾರ ಇವರು ವಂದನಾರ್ಪಣೆಯನ್ನು ಸಲ್ಲಿಸಿದರು.