ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ನಗರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಮತ್ತು ಸಂಗೀತ ವಿದುಷಿ ಶೀಲಾ ದಿವಾಕರ್ ನುಡಿನಮನ, ನೃತ್ಯಾಂಜಲಿ ಮತ್ತು ನೃತ್ಯ ರೂಪಕ ಪ್ರಸ್ತುತಿ ಕಾರ್ಯಕ್ರಮವು ದಿನಾಂಕ 28-01-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ನುಡಿನಮನ ಅರ್ಪಿಸಿದ ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಷಿ “ಸಾಹಿತ್ಯ ಕ್ಷೇತ್ರದಲ್ಲಿ ಅಮೃತ ಸೋಮೇಶ್ವರರು ಮಾಡಿದ ಸಂಶೋಧನೆಗಳು ಅಪೂರ್ವವಾದುದು. ಯಕ್ಷಗಾನ ಕ್ಷೇತ್ರದಲ್ಲಿ ಅವರು ತಮ್ಮ ಹೊಸ ದೃಷ್ಟಿಕೋನದಿಂದ ಸಂಶೋಧಾನತ್ಮಕ ಕೃತಿಗಳನ್ನು ಬರೆದಿದ್ದಾರೆ. ಅವರು ಸಾಗಿದ ಹಾದಿ ಕಿರಿಯರಿಗೆ ಮಾದರಿ. ವಿದ್ವಾಂಸರು, ಮಾರ್ಗದರ್ಶಕರು ಆಗಿದ್ದ ಅಮೃತ ಸೋಮೇಶ್ವರ ಅವರು ಪೌರಾಣಿಕ ಕಥೆಗಳಿಗೆ ಹೊಸ ಅರ್ಥವನ್ನು ಹುಡುಕುತ್ತ, ಯಕ್ಷಗಾನದ ಪ್ರಸಂಗಗಳಿಗೆ ಹೊಸ ಆಯಾಮವನ್ನು ನೀಡಿದವರು. ಅವರಿದ್ದ ಎಂಭತ್ತರ ಮತ್ತು ತೊಂಭತ್ತರ ದಶಕದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಸಂಶೋಧನಾತ್ಮಕ ಕೆಲಸಗಳು ನಡೆದವು. ವಿದುಷಿ ಶೀಲಾ ದಿವಾಕರ್ ಅವರು ನಮ್ಮೊಡನೆ ಇನ್ನಷ್ಟು ದಿನ ಇರಬೇಕಿತ್ತು ಎಂಬುದು ಎಲ್ಲರ ಆಶಯ. ಅವರು ತಮ್ಮ ಮಧುರ ಕಂಠದಿಂದ ನೃತ್ಯ ಕ್ಷೇತ್ರಕ್ಕೆ ಸತ್ವ ತುಂಬಿದವರು. ಇವರಿಬ್ಬರ ಆತ್ಮಕ್ಕೂ ಸದ್ಗತಿಯು ದೊರೆಯಲಿ” ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು “ಇಬ್ಬರು ಸಾಧಕರ ಜೀವನವು ಅನುಕರಣೀಯ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಅಮೃತ ಸೋಮೇಶ್ವರರು ರಚಿಸಿದ ‘ಸತ್ಯನಾಪುರೊದ ಸಿರಿ’ ತುಳು ಸಮೂಹ ನೃತ್ಯ ರೂಪಕ ಮತ್ತು ವಿದುಷಿ ಶೀಲಾ ದಿವಾಕರ್ ಹಾಡಿರುವ ಹಾಡುಗಳಿಗೆ ಭರತನಾಟ್ಯವನ್ನು ಸನಾತನ ನಾಟ್ಯಾಲಯದ ಕಲಾವಿದರು ಪ್ರಸ್ತುತಪಡಿಸಿದರು. ನಾಟ್ಯಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ನಿರ್ದೇಶನದಲ್ಲಿ ನೃತ್ಯ ರೂಪಕವು ಮೂಡಿಬಂತು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ, ವಿದುಷಿ ಶ್ರೀಲತಾ ನಾಗರಾಜ್ ನಿರೂಪಿಸಿದರು.