ಉರ್ವಸ್ಟೋರ್ : ಅವಿನಾಶ್ ಫೋಕ್ ಡಾನ್ಸ್ ಮಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ವಿವಿಧ ವಿನೋದಾವಳಿ ಸ್ಪರ್ಧೆ ಕರ್ಣಾಟಕದ ಜಾನಪದ ಕಲೆ, ಸಾಂಸ್ಕೃತಿಕ ಜೀವನಾಧಾರಿತ ‘ಕರುನಾಡ ವೈಭವ 2024’ ದಿನಾಂಕ 26-01-2024ರಂದು ನಡೆಯಿತು.
ಈ ಕಾರ್ಯಕಾಮವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಿ ಮಾತನಾಡಿ “ಕರುನಾಡ ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕ ಚಟುವಟಿಕೆಗಳು ದೇಶದಲ್ಲೇ ಅದ್ವಿತೀಯ ಸ್ವರೂಪದ್ದಾಗಿದೆ. ವಿವಿಧ ಜಿಲ್ಲೆಗಳಲ್ಲಿ ವಿವಿಧ ಪ್ರಕಾರದ ಕಲಾ ಚಟುವಟಿಕೆಗಳು ಪ್ರಚಲಿತದಲ್ಲಿವೆ. ಯಕ್ಷಗಾನ ಸಹಿತ ಕರಾವಳಿ ಭಾಗದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಿತ್ಯ ನಿರಂತರವಾಗಿ ಸಮಾಜದ ಹಾಸುಹೊಕ್ಕಾಗಿದೆ. ಇದನ್ನು ಮುಂದಿನ ಪೀಳಿಗೆಗೆ ಕಾಪಿಡುವ ಮಹತ್ವದ ಕಾರ್ಯ ನಡೆಯಬೇಕು” ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿದರು. ‘ಅವಿನಾಶ್ ಫೋಕ್ ಡಾನ್ಸ್’ ಮಂಗಳೂರು ಇದರ ಅಧ್ಯಕ್ಷ ಅವಿನಾಶ್ ಪ್ರಸ್ತಾವಿಸಿದರು. ಮುಖ್ಯ ಅತಿಥಿಗಾಳಾಗಿ ಹಿರಿಯ ರಂಗಭೂಮಿ ನಟ ಹಾಗೂ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲು, ಸುಧಾಕರ ಸುರತ್ಕಲ್, ಶಿವಶಂಕರ್ ಮಂಡ್ಯ, ಪ್ರವೀಣ್ ಕುಮಾರ್ ಕೊಡಿಯಾಲಬೈಲು, ಅಮಿತಕಲಾ, ದಯಾನಂದ ಕತ್ತಲ್ಸಾರ್, ಪಿ. ಶ್ರೀಧರ್ ಉಪಸ್ಥಿತರಿದ್ದರು.
ಸುಮಾರು 25ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಇದೇ ಸಂದರ್ಭದಲ್ಲಿ ಜಾನಪದ ಗೀತೆ, ಡೊಳ್ಳು ಕುಣಿತ, ಚೆಂಡೆ ಹಾಗೂ ನೃತ್ಯ ವೈವಿಧ್ಯಗಳ ಮನೋರಂಜನಾ ಕಾರ್ಯಕ್ರಮಗಳು ಪ್ರಸ್ತುತಗೊಂಡವು. ತೀರ್ಪುಗಾರರಾಗಿ ಸುಧಾಕರ ಸಾಲ್ಯಾನ್ ಸುರತ್ಕಲ್, ಅನಿಲ್ ರೇವೂರ, ಶಿವಶಂಕರ್ ಮಂಡ್ಯ ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಮಂದಿಯನ್ನು ಗೌರವಿಸಲಾಯಿತು. ಚೈತ್ರಾ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಉಡುಪಿಯ ಕಲಾಮಯಂ ತಂಡ, ದ್ವಿತೀಯ ಬಹುಮಾನವನ್ನು ಸುರತ್ಕಲ್ಲಿನ ಕಲಾಬ್ಧಿ ಪಡ್ರೆ ಮತ್ತು ತೃತೀಯ ಬಹುಮಾನವನ್ನು ಕುಲಾಲ ಮಹಿಳಾ ಪ್ರೇರಣಾ ಸಂಘ ಹಾಗೂ ಮೂಡಬಿದ್ರಿ ಮೋಹನ್ ಹೊಸ್ಮಾರು ತಂಡಗಳು ಪಡೆದುಕೊಂಡವು.