ಕಾಸರಗೋಡು : ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 27ನೇ ವಾರ್ಷಿಕೋತ್ಸವವು ದಿನಾಂಕ 21-01-2024ರಂದು ಕಾಸರಗೋಡಿನ ಬೀರಂತಬೈಲಿನಲ್ಲಿರುವ ಲಲಿತ ಕಲಾಸದನದಲ್ಲಿ ಜರಗಿತು. ಈ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು “ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವಲ್ಲಿ ಇಲ್ಲಿನ ವಿವಿಧ ಕಲಾಪ್ರಾಕಾರಗಳು ಕಾರಣವಾಗಿವೆ. ಈ ನಿಟ್ಟಿನಲ್ಲಿ ಸಂಗೀತ ಕಲಾಸೇವೆಯ ಮೂಲಕ ದೇಶಕ್ಕೆ ಅನನ್ಯ ಕೊಡುಗೆಯನ್ನು ನೀಡಿದ ಈ ಸಂಸ್ಥೆಯು ಇನ್ನಷ್ಟು ಬೆಳಗಲಿ” ಎಂದು ನುಡಿದರು.
ಹಿರಿಯ ಸಂಗೀತ ಗುರುಗಳಾದ ಕಲ್ಮಾಡಿ ಸದಾಶಿವ ಆಚಾರ್ಯ ಮಾತನಾಡುತ್ತಾ “ತಾನು ಕಲಿತ ವಿದ್ಯೆಯನ್ನು ತನ್ನ ಶಿಷ್ಯರಿಗೆ ನೀಡುವ ಮೂಲಕ ಗುರು ಋಣವನ್ನು ಉಷಾ ಈಶ್ವರ ಭಟ್ ಅವರು ತೀರಿಸುತ್ತಿದ್ದಾರೆ. ಶಿಷ್ಯಂದಿರಿಗೆ ವಿದ್ಯೆಯನ್ನು ನೀಡುವಲ್ಲಿಯೂ ಆನಂದವಿದೆ. ಗುರುಗಳನ್ನು ಮೀರಿಸುವ ಶಿಷ್ಯಂದಿರು ರೂಪುಗೊಂಡಾಗ ಲಭಿಸುವ ಸಂತೋಷ ಬೇರೆಲ್ಲೂ ಸಿಗದು. ಅಂತಹ ಶಿಷ್ಯಂದಿರನ್ನು ಇವರು ಹೊಂದಿದ್ದಾರೆ” ಎಂದರು. ಹಿರಿಯ ನ್ಯಾಯವಾದಿ ಎಂ. ನಾರಾಯಣ ಭಟ್ ಮಾತನಾಡಿ “27 ವರ್ಷಗಳಿಂದ ಕಾಸರಗೋಡಿನಲ್ಲಿ ಕಲಾಸೇವೆಯನ್ನು ನೀಡುತ್ತಾ ಅದ್ಭುತವಾದ ಸಾಧನೆಯನ್ನು ಮಾಡಿದ ಸಂಗೀತ ಶಾಲೆ ಇದಾಗಿದೆ” ಎಂದು ಹೇಳಿದರು.
ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ಗುರುಗಳಾದ ವಿದುಷಿ ಉಷಾ ಈಶ್ವರ ಭಟ್, ವಿದ್ವಾನ್ ಪ್ರಭಾಕರ ಕುಂಜಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಚಾಲಕ ವಿದ್ವಾನ್ ಈಶ್ವರ ಭಟ್ ಬಿ.ಜಿ. ಸ್ವಾಗತಿಸಿ, ಪ್ರಾಸ್ತಾವಿಸಿದರು. ಶಿವರಂಜಿನಿ ಪ್ರಾರ್ಥನೆ ಹಾಡಿದರು. ಡಾ. ಶಾಲ್ಮಲಿ ವಂದಿಸಿದರು. ನಂತರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ ವಿದ್ಯಾರ್ಥಿಗಳು ‘ಸಂಗೀತೋಪಾಸನಾ’ ಸಂಗೀತ ಕಾರ್ಯಕ್ರಮ ನೀಡಿದರು. ಇದೇ ಸಂದರ್ಭದಲ್ಲಿ ವಿದ್ವಾನ್ ಶ್ರೀ ಪಾಲಕ್ಕಾಡ್ ರಾಮ್ ಪ್ರಸಾದ್ ಇವರ ಹಾಡುಗಾರಿಕೆಗೆ ವಿದ್ವಾನ್ ಶ್ರೀ ಅಲಂಕೋಡೆ ವಿ.ಎಸ್. ಗೋಕುಲ್ ವಯೋಲಿನ್, ವಿದ್ವಾನ್ ಶ್ರೀ ಪಾಲಕ್ಕಾಡ್ ಹರಿನಾರಾಯಣನ್ ಮೃದಂಗ ಹಾಗೂ ವಿದ್ವಾನ್ ಶ್ರೀ ಪಯ್ಯನ್ನೂರ್ ಗೋವಿಂದ ಪ್ರಸಾದ್ ಮೋರ್ಸಿಂಗ್ ಸಾಥ್ ನೀಡಿದರು.