ಮಂಗಲ್ಪಾಡಿ : ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಕಲಾಕುಂಚ ಕೇರಳ ಗಡಿನಾಡ ಘಟಕದ ಸಂಯುಕ್ತ ಆಶ್ರಯದಲ್ಲಿ ದಿನಾಂಕ 28-01-2024ರಂದು ‘ಮಹಾಕವಿ ನಮನ’ ಸಮಾರಂಭವು ಮಂಗಲ್ಪಾಡಿಯ ಏಕಾಹ ಭಜನಾ ಮಂದಿರದಲ್ಲಿ ನಡೆಯಿತು.
“ಕುಮಾರವ್ಯಾಸನೆಂದರೆ ಜನಸಾಮಾನ್ಯರಿಗೂ ಮಹಾಕಾವ್ಯವನ್ನು ಸುಲಭವಾಗಿ ಮನದಟ್ಟು ಮಾಡಿಕೊಟ್ಟ ಮಹಾಕವಿ” ಎಂದು ಕರ್ನಾಟಕ ಕಾಲೇಜು ಇಲಾಖೆಯ ನಿವೃತ್ತ ನಿರ್ದೇಶಕ ಶ್ರೀ ಗಿರಿಧರ ಮಾಣಿಹಿತ್ತಿಲು ಅವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಾ ನುಡಿದರು.
ಹಿರಿಯ ಸಾಹಿತಿ ಶಿಕ್ಷಣತಜ್ಞ ವಿ.ಬಿ.ಕುಳಮರ್ವ ಅವರು ಕವಿಪುಂಗವನಿಗೆ ನುಡಿಕುಸುಮಗಳನ್ನರ್ಪಿಸಿ ನಮಿಸಿ ಮಾತನಾಡುತ್ತಾ “ಜನಸಾಮಾನ್ಯರಿಗೆ ಪ್ರವೇಶಿಸಲು ಅಸಾಧ್ಯವಾದ ಸಂಸ್ಕೃತ ಭಾಷೆಯ ವ್ಯಾಸ ಮಹಾಕವಿಯ ಮಹಾಭಾರತವೆಂಬ ಗಹನ ಗಹ್ವರವಾದ ಗೊಂಡಾರಣ್ಯ ಸಮಾನವಾದ ಮಹಾಕಾವ್ಯವನ್ನು ನಗುವ ನಂದನವನವನ್ನಾಗಿಸಿ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಟ್ಟ ಕುಮಾರವ್ಯಾಸ ನಿಜವಾಗಿಯೂ ಮಹಾಕವಿ ರತ್ನ. ಆತ ಅಪ್ಪಟ ಭಕ್ತಕವಿ. ಕೃಷ್ಣಪರಮಾತ್ಮನ ಮೇಲಿನ ಭಕ್ತಿಯ ಪರಾಕಾಷ್ಠೆಯನ್ನು ಒಳಗೊಂಡಿರುವ ಆತನ ಮಹಾಕಾವ್ಯವೇ ಕರ್ಣಾಟ ಭಾರತ ಕಥಾಮಂಜರಿ ಅಥವಾ ಗದುಗು ಭಾರತ. ಕನ್ನಡ ಸಾಹಿತ್ಯದಲ್ಲಿ ಭಾಮಿನಿ ಷಟ್ಪದಿಯಲ್ಲಿ ಮೂಡಿಬಂದ ಈ ಮೇರು ಕೃತಿಯೇ ನಡುಗನ್ನಡ ಸಾಹಿತ್ಯದ ಜೀವಾಳ. ಕಾವ್ಯಲೋಕದ ಚಿರಂಜೀವಿಯಾದ ಗದುಗಿನ ನಾರಣಪ್ಪನ ದಿವ್ಯಕಥಾಮೃತವನ್ನು ಹಾಡಿ ಆಸ್ವಾದಿಸುವುದೇ ನಾವು ಆ ಮಹಾಕವಿಗೆ ಸಲ್ಲಿಸುವ ಮಹಾನಮನ” ಎಂದು ಅಭಿಪ್ರಾಯಪಟ್ಟರು.
ಕಲಾಕುಂಚ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಾ ಗಮಕ ಕಲೆಯ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕುಮಾರವ್ಯಾಸ ಮಹಾಕವಿಯ ಕೃತಿಯಿಂದಾಯ್ದ ‘ಕೀಚಕೋಪಾಖ್ಯಾನ’ದ ಭಾಗವನ್ನು ಗಮಕಿ ಶ್ರೀಮತಿ ದಿವ್ಯಾ ಕಾರಂತ ಮಂಗಲ್ಪಾಡಿ ಅವರು ಬಹಳ ಸುಶ್ರಾವ್ಯವಾಗಿ ವಾಚನ ಮಾಡಿದರು. ಹಿರಿಯ ಗಮಕಿ ಕಲಾಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರು ಮನೋಜ್ಞವಾಗಿ ವ್ಯಾಖ್ಯಾನ ಗೈದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಕಲಾವಿದರಿಗೆ ಶಾಲು ಹೊದೆಸಿ ಶುಭ ಹಾರೈಸಿದರು. ಚಿರಂಜೀವಿಗಳಾದ ವೇದಾಂತ್ ಮತ್ತು ದೇವಾಂಶು ಪ್ರಾರ್ಥನೆ ಗೈದರು. ಶ್ರೀಮತಿ ಜಯಲಕ್ಷ್ಮಿ ಆರ್. ಹೊಳ್ಳ ಕಾರ್ಯಕ್ರಮ ನಿರೂಪಿಸಿ, ಭಜನಾ ಮಂದಿರದ ಅಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.