ಧಾರವಾಡ : ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ದಿ. ರಾ.ಹ. ದೇಶಪಾಂಡೆ ಸಭಾಭವನದಲ್ಲಿ ನಡೆದ ‘ಗೈರ ಸಮಜೂತಿ’ ಮತ್ತು ‘ಹಾವಳಿ’ ಕಾದಂಬರಿಗಳ ಕುರಿತ ವಿಶೇಷ ಉಪನ್ಯಾಸ ಮತ್ತು ‘ಹೃದಯದ ಹಾದಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 30-01-2024ರಂದು ನಡೆಯಿತು.
‘ಹೃದಯದ ಹಾದಿ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಆನಂದ ಜಂಝರವಾಡರು “ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದಾಗಿರುವ ‘ಗೈರ ಸಮಜೂತಿ’ಯು ಎಲ್ಲ ಕಾಲಕ್ಕೂ ಸಲ್ಲುವ ಕೃತಿಯಾಗಿದೆ. ಕನ್ನಡದ ಮಹತ್ವದ ಲೇಖಕರಾದ ರಾಘವೇಂದ್ರ ಪಾಟೀಲರು ಬರೆದ ಆ ಕಾದಂಬರಿಯ ಬಗ್ಗೆ ಯುವ ವಿಮರ್ಶಕ ವಿಕಾಸ ಹೊಸಮನಿ ಸಂಪಾದಿಸಿದ ‘ಹೃದಯದ ಹಾದಿ’ ಎಂಬ ಸಂಪಾದಿತ ಕೃತಿಯ ಮಹತ್ವ ಈಗ ಅರಿವಾಗದಿದ್ದರೂ ಸುಮಾರು ಐವತ್ತು ವರ್ಷಗಳ ಬಳಿಕ ಮನದಟ್ಟಾಗಬಹುದು. ಪಾಟೀಲರ ದೇಸಿ ಪ್ರತಿಭೆ, ಉತ್ತರ ಕರ್ನಾಟಕದ ಭಾಷೆಯ ಸೊಗಡು, ಪದ ಪ್ರಯೋಗದ ಹಿಡಿತ, ಅರ್ಥ ಭಾವಗಳ ಮಿಡಿತ, ಉಪ ಕತೆಗಳನ್ನು ನೇಯ್ದು ಕಥನ ಕಟ್ಟುವ ಶೈಲಿ, ಕಥನದ ಧ್ವನಿಶಕ್ತಿ ಮೊದಲಾದ ಬಹುಮುಖಿ ಆಯಾಮಗಳು ಈ ಪುಸ್ತಕದ ಮೂಲಕ ವ್ಯಕ್ತವಾಗುತ್ತವೆ. ಸಂಶೋಧನ ವಿದ್ಯಾರ್ಥಿಗಳಿಗೆ ಇದು ಉತ್ತಮ ಆಕರ ಗ್ರಂಥವಾಗಿದೆ” ಎಂದು ಅಭಿಪ್ರಾಯಪಟ್ಟರು.
“ಕನ್ನಡ ಭಾಷೆಗೆ ಜ್ಞಾನಪೀಠ, ಸರಸ್ವತಿ ಸಮ್ಮಾನ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ದೊರಕಬೇಕಿದ್ದರೆ ಕನ್ನಡ ಸಾಹಿತ್ಯವು ಇತರ ಭಾಷೆಗಳಿಗೆ ಅನುವಾದಗೊಳ್ಳಬೇಕಾದ ಅಗತ್ಯವಿದೆ. ಆದರೆ ಇತರ ಭಾಷೆಗಳ ಕೃತಿಗಳು ಕನ್ನಡ ಭಾಷೆಗೆ ಅನುವಾದವಾಗುವಷ್ಟು ಪ್ರಮಾಣದಲ್ಲಿ ಕನ್ನಡ ಕೃತಿಗಳು ಇತರ ಭಾಷೆಗಳಿಗೆ ಭಾಷಾಂತರವಾಗುತ್ತಿಲ್ಲ. ಇದರಿಂದಾಗಿ ಕನ್ನಡ ಕೃತಿಗಳು ಪ್ರಶಸ್ತಿ ವಂಚಿತವಾಗುತ್ತವೆ. ಕನ್ನಡ ಭಾಷೆಯು ಸಾಹಿತ್ಯಕ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ಮೀರಿ ಬೆಳೆಯಬೇಕಿದೆ” ಎಂದು ‘ಹೃದಯದ ಹಾದಿ’ ಪುಸ್ತಕದ ಸಂಪಾದಕರಾದ ವಿಕಾಸ ಹೊಸಮನಿಯವರು ನುಡಿದರು.
ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹಿರೇಮಠರ ‘ಹಾವಳಿ’ ಕಾದಂಬರಿಯ ಕುರಿತು ಮಾತನಾಡಿದ ಶ್ರೀನಿವಾಸ ವಾಡಪ್ಪಿಯವರು ರಜಾಕಾರರ ಹಾವಳಿಯ ಕುರಿತು ಕನ್ನಡದಲ್ಲಿ ಬಂದ ಮೊದಲ ಪೂರ್ಣ ಪ್ರಮಾಣದ ಕಾದಂಬರಿ ‘ಹಾವಳಿ’ ಮತ್ತು ಇತ್ತೀಚೆಗೆ ಬಂದ ಕನ್ನಡ ಕಾದಂಬರಿಗಳಲ್ಲಿ ‘ಗೈರ ಸಮಜೂತಿ’ಗೆ ಮಹತ್ವದ ಸ್ಥಾನವಿದೆ ಎಂದರು.
ಧಾರವಾಡ ಕಟ್ಟೆಯ ಪ್ರೊ. ಬಸವರಾಜ ಡೋಣೂರರು ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೊ. ರಾಘವೇಂದ್ರ ಪಾಟೀಲ ಮತ್ತು ಪ್ರೊ ಮಲ್ಲಿಕಾರ್ಜುನ ಹಿರೇಮಠರು ಉಪಸ್ಥಿತರಿದ್ದರು. ಕಿರಣ್ ಚೌಹಾಣ್ ನಿರೂಪಿಸಿದರು. ಪ್ರೊ. ವಿಜಯಲಕ್ಷ್ಮಿ ದಾನರೆಡ್ಡಿ ಸ್ವಾಗತಿಸಿ ವಂದಿಸಿದರು.