ಮಂಗಳೂರು : ವಿಪ್ರವೇದಿಕೆ ಕೋಡಿಕಲ್ ಇದರ ವತಿಯಿಂದ ಶ್ರೀ ರಾಮ ತಾರಕ ಮಂತ್ರ ಸಹಿತ ನೃತ್ಯ ಯಕ್ಷ ನಮನ ಕಾರ್ಯಕ್ರಮವು ದಿನಾಂಕ 21-01-2024ರಂದು ಕೋಡಿಕಲ್ ಬೆನಕ ಸಭಾಭವನದಲ್ಲಿ ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವೇದಮೂರ್ತಿ ವಿಶ್ವಕುಮಾರ ಜೋಯಿಸರು ಮಾತನಾಡಿ “ಪ್ರಭು ಶ್ರೀ ರಾಮಚಂದ್ರ ಮನುಕುಲಕ್ಕೆ ಬದುಕಿನಲ್ಲಿ ಮಾನವತೆಯ ಚೌಕಟ್ಟಿನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಮಾದರಿಯಾಗುವಂತಹ ನೆಲದ ಮೇಲಿನ ಕಲ್ಯಾಣ ಗುಣಗಳನ್ನು ಪ್ರದರ್ಶಿಸಿದ ಆದರ್ಶ ಸ್ವರೂಪಿ. ಮನುಷ್ಯ ಜನ್ಮದ ಆದರ್ಶಗಳನ್ನು ಪಾಲಿಸಿ ಬದುಕನ್ನು ಒಂದು ಉದಾಹರಣೆಯಾಗಿ ತೋರಿಸಿಕೊಟ್ಟಿರುವ ಮಹಾನ್ ಪುರುಷ. ಪ್ರತಿಯೊಬ್ಬ ಮನುಷ್ಯನೂ ಶ್ರೀ ರಾಮಚಂದ್ರನ ಆದರ್ಶ ಗುಣಗಳನ್ನು ಪಾಲಿಸಿಕೊಂಡಾಗ ರಾಮರಾಜ್ಯ ಸಾಕಾರಗೊಳ್ಳಲು ಸಾಧ್ಯ” ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಜಯರಾಮ ಪದಕಣ್ಣಾಯ, ಕಾರ್ಯದರ್ಶಿ ದುರ್ಗಾದಾಸ್ ಕೋಡಿಕಲ್, ನಿಕಟಪೂರ್ವ ಅಧ್ಯಕ್ಷೆ ವಿದ್ಯಾ ಗಣೇಶ್ ರಾವ್, ಕೋಶಾಧಿಕಾರಿ ಕಿಶೋರ್ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಕೊಟ್ಟಾರದ ಭರತಾಂಜಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ಶಿಷ್ಯೆಯರಿಂದ ಶ್ರೀ ರಾಮ ದೇವರ ಕೃತಿಗಳನ್ನಾಧರಿಸಿದ ಭರತನಾಟ್ಯ ವೈಭವ ಮತ್ತು ಸರಯೂ ಮಕ್ಕಳ ಯಕ್ಷ ತಂಡದಿಂದ ಯಕ್ಷ ಗುರು ರವಿ ಅಲೆವುರಾಯ ನಿರ್ದೇಶನದಲ್ಲಿ ‘ಶ್ರೀ ರಾಮ ದರ್ಶನ’ ಯಕ್ಷಗಾನ ಬಯಲಾಟ ಕಾರ್ಯಕ್ರಮ ಜರಗಿತು.