ಉಡುಪಿ : ಅಂಬಲಪಾಡಿ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ 66ನೇ ವಾರ್ಷಿಕೋತ್ಸವವು ಕಂಬ್ಳಕಟ್ಟದ ಶ್ರೀ ಜನಾರ್ದನ ಮಂಟಪದಲ್ಲಿ ದಿನಾಂಕ 03-02-2024ರಂದು ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಜಯಕರ ಶೆಟ್ಟಿ ಅವರಿಗೆ ‘ನಿಡಂಬೂರು ಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಉಡುಪಿ ಶಾಸಕ ಶ್ರೀ ಯಶ್ ಪಾಲ್ ಎ. ಸುವರ್ಣ ಪ್ರಶಸ್ತಿ ಪ್ರದಾನಿಸಿ, “ಕರಾವಳಿ ಕರ್ನಾಟಕದ ಅಪೂರ್ವ ಕಲೆ ಯಕ್ಷಗಾನ ಉಳಿಸಿ ಬೆಳೆಸುವಲ್ಲಿ ಅಂಬಲಪಾಡಿ ಸಂಘದ ಕೊಡುಗೆ ಬಹಳ ಮಹತ್ವದ್ದು” ಎಂದರು.
ನಿಡಂಬೂರು ಬೀಡು ಅಣ್ಣಾಜಿ ಬಲ್ಲಾಳ ಸ್ಮರಣಾರ್ಥ ಶ್ರೀ ರಾಜರಾಜೇಶ್ವರೀ ದೇವರ ಅನುಗ್ರಹದೊಂದಿಗೆ ಡಾ. ವಿಜಯ ಬಲ್ಲಾಳ ಪ್ರಾಯೋಜಕತ್ವದ ಬೆಳ್ಳಿಯ ಫಲಕ ಹಾಗೂ ತಲಾ 10 ಸಾವಿರ ರೂ. ನಗದು ಸಹಿತ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಬೆಂಗಳೂರಿನ ಶ್ರೀ ಕರ್ನಾಟಕ ಕಲಾದರ್ಶಿನಿ ತಂಡಕ್ಕೆ ನೀಡಲಾಯಿತು. ಕಲಾದರ್ಶಿನಿ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಸಾಸ್ತಾನ ಪ್ರಶಸ್ತಿ ಸ್ವೀಕರಿಸಿದರು.
ತಲಾ 8 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡ ‘ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ’ಯನ್ನು ಹಿರಿಯ ಚೆಂಡೆ ವಾದಕರಾದ ರಾಮಕೃಷ್ಣ ಮಂದಾರ್ತಿ, ‘ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿ’ಯನ್ನು ಹಿರಿಯ ಪ್ರಸಾಧನ ತಜ್ಞರಾದ ಕೃಷ್ಣಸ್ವಾಮಿ ಜೋಯಿಸ ಬ್ರಹ್ಮಾವರ ಹಾಗೂ ‘ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿ’ಯನ್ನು ಹಿರಿಯ ಹಾಸ್ಯ ಕಲಾವಿದರಾದ ನಾಗಪ್ಪ ಹೊಳೆಮೊಗೆಯವರಿಗೆ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಭ್ರಮರಿ ಶಿವಪ್ರಕಾಶ್ ಅವರನ್ನು ಅಭಿನಂದಿಸಲಾಯಿತು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಡಾ. ನವೀನ್ ಬಲ್ಲಾಳ ಉಪಸ್ಥಿತರಿದ್ದರು. ಬಳಿಕ ಕೋಟ ನರಸಿಂಹ ತುಂಗ ನಿರ್ದೇಶನದಲ್ಲಿ ಮಂಡಳಿಯ ಬಾಲ ಕಲಾವಿದರಿಂದ ‘ಶಶಿಪ್ರಭಾ ಪರಿಣಯ’ ಹಾಗೂ ಕೆ.ಜೆ.ಗಣೇಶ್ ನಿರ್ದೇಶನದಲ್ಲಿ ಮಂಡಳಿ ಸದಸ್ಯರಿಂದ ‘ಬಭ್ರುವಾಹನ ಕಾಳಗ’ ಯಕ್ಷಗಾನ ಪ್ರಸ್ತುತಗೊಂಡಿತು.
ಪ್ರಶಸ್ತಿ ಪುರಸ್ಕೃತರ ಪರಿಚಯ
ಕರ್ನಾಟಕ ಕಲಾದರ್ಶಿನಿ (ರಿ.) ಬೆಂಗಳೂರು :
ರಾಜಧಾನಿ ಬೆಂಗಳೂರಿನಲ್ಲಿ ಯಕ್ಷಗಾನ ಕಲಿಕೆ, ಪ್ರದರ್ಶನ, ಯಕ್ಷಗಾನ ಸಂಬಂಧಿ ಕಾರ್ಯಾಗಾರ ನಡೆಸುತ್ತಾ ಈ ಕಲೆಯ ಪರಂಪರಾ ಶೈಲಿ, ಸೊಗಸನ್ನು ಕಾಪಾಡಲು ಮೂರುದಶಕಗಳಿಂದ ಕ್ರಿಯಾಶೀಲವಾಗಿರುವ ಸಂಘಟನೆ ‘ಕರ್ನಾಟಕ ಕಲಾ ದರ್ಶಿನಿ’. ಉಡುಪಿ ಜಿಲ್ಲೆಯವರೇ ಆದ ಶ್ರೀನಿವಾಸ ಸಾಸ್ತಾನ ಇವರು ಈ ಕಲಾ ಸಂಘಟನೆಯನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಕರಾವಳಿ ಮಲೆನಾಡು ಪ್ರದೇಶದ ಯಕ್ಷಗಾನಾಸಕ್ತರು ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಗೊಂಡಾಗ ಅವರ ಸಾಂಸ್ಕೃತಿಕ ಕಲಾಭಿವ್ಯಕ್ತಿಗೆ ಅವಕಾಶ ಕಲ್ಪಿಸಿ ಕಲಿಕೆಗೆ ಅನುವು ಮಾಡಿಕೊಟ್ಟಿದೆ. ಮಕ್ಕಳು, ಮಹಿಳೆಯರು, ಉದ್ಯೋಗಸ್ಥ ಪುರುಷರಿಗೆ ಯಕ್ಷಗಾನ ಕಲಿಸಿ, ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತಿದೆ. ಕಲಾದರ್ಶಿನಿಯ ಪ್ರದರ್ಶನಗಳು ಆಕಾಶವಾಣಿ ದೂರದರ್ಶನಗಳಲ್ಲಿ ಬಿತ್ತರಗೊಂಡಿವೆ. ದೇಶದ ವಿವಿಧ ರಾಜ್ಯಗಳಲ್ಲಿ, ಹೊರ ದೇಶಗಳಲ್ಲಿ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಈ ಸಂಸ್ಥೆ ಪಾತ್ರವಾಗಿದೆ. ತನ್ನ ಕಾರ್ಯದಕ್ಷತೆ ಮತ್ತು ಶ್ರಮಕ್ಕೆ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದೆ.
ಮಂದಾರ್ತಿ ರಾಮಕೃಷ್ಣ :
ಬಡಗುತಿಟ್ಟಿನ ಅಗ್ರಮಾನ್ಯ ಚಂಡೆ ವಾದಕರಾದ ಮಂದಾರ್ತಿ ರಾಮಕೃಷ್ಣರಿಗೆ ಈ ಕಲೆ ವಂಶಪಾರಂಪರ್ಯವಾಗಿ ಬಂದ ಬಳುವಳಿ. ಯಕ್ಷಗಾನ ವಲಯದಲ್ಲಿ ರಾಮಣ್ಣ ಎಂದೇ ಖ್ಯಾತರಾದ ಇವರು ಚಂಡೆ ವಾದಕ ಕೆಮ್ಮಣ್ಣು ಆನಂದ ಹಾಗೂ ಸುರಗಿಕಟ್ಟೆ ಹಿರಿಯರ ಶಿಷ್ಯರು. ಹಿರಿಯಡಕ, ಮಂದಾರ್ತಿ, ಮಾರಣಕಟ್ಟೆ, ಸಾಲಿಗ್ರಾಮ ಮೇಳಗಳಲ್ಲಿ ಕಲಾವ್ಯವಸಾಯ ಮಾಡಿರುತ್ತಾರೆ. ಅತಿಥಿ ಕಲಾವಿದರಾಗಿ ಸದಾ ಪ್ರವೃತ್ತರು. ಯಕ್ಷಗಾನದ ರಂಗ ತಂತ್ರವನ್ನು ತಿಳಿದು ಪರಿಣಾಮಕಾರಿಯಾಗಿ ವ್ಯವಹರಿಸುವ ಕಲಾವಿದರೆಂದೇ ಮಾನಿತರು. ಸುಮಾರು ಎರಡು ದಶಕಗಳ ಕಾಲ ಶ್ರೇಷ್ಠ ಭಾಗವತರಾದ ಕಾಳಿಂಗ ನಾವಡರಿಗೆ ಚೆಂಡೆವಾದಕರಾಗಿ ಸಾಥಿಯಾದ ಹೆಗ್ಗಳಿಕೆ ಇವರದು.
ಹೊಳೆಮೊಗೆ ನಾಗಪ್ಪ :
ಕುಂದಾಪುರ ತಾಲೂಕಿನ ಹೊಳೆಮೊಗೆ ನಾಗಪ್ಪ ಪ್ರಸಿದ್ದ ಹಾಸ್ಯ ಕಲಾವಿದರು. ಯಕ್ಷಗಾನದ ಆಸಕ್ತಿಯಿಂದ ಈ ರಂಗಕ್ಕೆ ಆಕರ್ಷಿತರಾಗಿ ಬಂದವರು. ಹತ್ತರ ಹರೆಯದಲ್ಲೇ ಹಾಸ್ಯ ಕಲಾವಿದ ವಂಡ್ಸೆ ನಾಗಯ್ಯರ ಮಾರ್ಗದರ್ಶನದಲ್ಲಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿದವರು. ಮುಂದೆ ಉಡುಪಿ ಯಕ್ಷಗಾನ ಕೇಂದ್ರ ಸೇರಿ ಶ್ರೇಷ್ಠ ಗುರುಗಳ ಮಾರ್ಗದರ್ಶನದಲ್ಲಿ ಹೆಜ್ಜೆಗಾರಿಕೆ, ಅಭಿನಯ ಕಲಿತುಕೊಂಡರು, ಹಾಸ್ಯಪಾತ್ರಕ್ಕೊಪ್ಪುವ ಆಳಂಗ, ಧ್ವನಿ, ಭಾಷೆ, ಹಾವಭಾವಗಳಿಂದ ಹಲವು ಪೌರಾಣಿಕ ಹಾಸ್ಯ ಪಾತ್ರಗಳನ್ನು ಮನೋಜ್ಞವಾಗಿ ಚಿತ್ರಿಸಿ ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾರಣಕಟ್ಟೆ, ಅಮೃತೇಶ್ವರೀ, ಸಾಲಿಗ್ರಾಮ, ಪೆರ್ಡೂರು, ಕೊಡವೂರು, ಕಮಲಶಿಲೆ, ಮಂದಾರ್ತಿ, ನೀಲಾವರ, ಹಾಲಾಡಿ, ಸೌಕೂರು, ಬಗ್ವಾಡಿ, ಗೋಳಿಗರಡಿ, ಕಳವಾಡಿ, ಮೇಗರವಳ್ಳಿ, ಸೀತೂರು, ಹೆಗ್ಗೋಡು ಮೇಳಗಳಲ್ಲಿ ಐದುವರೆ ದಶಕಗಳ ಕಲಾಸೇವೆಗೈದು ಪ್ರಸ್ತುತ ಮಡಾಮಕ್ಕಿ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.
ಕೃಷ್ಣಸ್ವಾಮಿ ಜೋಯಿಸ :
ಬ್ರಹ್ಮಾವರದ ಕೃಷ್ಣಸ್ವಾಮಿ ಜೋಯಿಸರು ಬಿ.ಕಾಂ. ಪದವೀಧರರು, ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಗುರು ನಾರ್ಣಪ್ಪ ಉಪ್ಪೂರು, ಬೇಳಂಜೆ ತಿಮ್ಮಪ್ಪ ನಾಯ್ಕರ ಶಿಷ್ಯರಾಗಿ ಯಕ್ಷಗಾನ ತರಬೇತಿ ಪಡೆದು ಹವ್ಯಾಸಿ ಕಲಾವಿದರಾಗಿ ನಾಲ್ಕು ದಶಕಗಳಿಂದ ಯಕ್ಷಗಾನ ಹಿಮ್ಮೇಳ, ಮುಮ್ಮೇಳ ಕಲಾವಿದರಾಗಿ ಆಗಾಗ ರಂಗದಲ್ಲಿ ಕಾಣಿಸಿಕೊಳ್ಳುತ್ತಾ ಬಂದಿದ್ದಾರೆ. ಮುಖ್ಯವಾಗಿ ಪ್ರಸಾಧನ ತಜ್ಞರಾಗಿ ಅವರ ಕೊಡುಗೆ ಈ ಕ್ಷೇತ್ರಕ್ಕೆ ಸಂದಿದೆ. ಸುಬ್ಬಣ್ಣ ಭಟ್ಟರ ‘ಅಜಪುರ ಯಕ್ಷಗಾನ ಸಂಘ’ದಲ್ಲಿ ಪ್ರಸಾಧನ ಕೆಲಸವನ್ನು ನಿರಂತರ ಮಾಡಿಕೊಂಡು ಬಂದಿದ್ದಾರೆ. ಯಕ್ಷಗಾನದ ಗುರುಗಳಾಗಿಯೂ ದುಡಿದಿದ್ದಾರೆ. ಯಕ್ಷಗಾನದಿಂದ ವಿದೇಶ ಪ್ರವಾಸವನ್ನು ಗೈದಿದ್ದಾರೆ.
ಜಯಕರ ಶೆಟ್ಟಿ :
ಶ್ರೀಮತಿ ಶಾಮ ಮತ್ತು ಶ್ರೀಕೃಷ್ಣ ಶೆಟ್ಟಿ ದಂಪತಿಯ ಸುಪುತ್ರರಾದ ಶ್ರೀ ಜಯಕರ ಶೆಟ್ಟಿಯವರು ಉಡುಪಿ ಕ್ರಿಶ್ಚನ್ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆದು ಮಂಗಳೂರಿನಲ್ಲಿ ಶಿಕ್ಷಕ ತರಬೇತಿ ಪೂರೈಸಿ ಕಿದಿಯೂರು ಶಾಲೆಯಲ್ಲಿ ವೃತ್ತಿ ಆರಂಭಿಸಿ ಆದಿಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 36 ವರ್ಷಗಳ ಕಾಲ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಿ ಬದುಕು ರೂಪಿಸಿದ ಇವರು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂಬಲಪಾಡಿ ದೇವಳವು ಸೇರಿದಂತೆ ಹಲವು ದೈವ-ದೇವಾಲಯಗಳ ಭಕ್ತರಾಗಿ ನಿರಂತರ ಸೇವೆ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಅಂಬಲಪಾಡಿ ಪಡುಪಾಲು ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಕೃಷಿಕರು ಆಗಿರುವ ಇವರು ಪತ್ನಿ ಮೂವರು ಮಕ್ಕಳಿಂದ ಕೂಡಿದ ಸಂತೃಪ್ತ ಕುಟುಂಬದ ಯಜಮಾನರು.