ಮಂಗಳೂರು : 2024ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಸಾಹಿತಿ ಡಾ. ಜೆರಾಲ್ಡ್ ಪಿಂಟೊ (ಜೆರಿ, ನಿಡ್ಡೋಡಿ) ಇವರನ್ನು ಆಯ್ಕೆ ಮಾಡಲಾಗಿದೆ.
ಜೆರಿ ನಿಡ್ಡೋಡಿ ಅವರ 6 ಕಾದಂಬರಿಗಳು, 75 ಕತೆಗಳು ಹಾಗೂ 900ಕ್ಕೂ ಮೇಲ್ಪಟ್ಟು ಲೇಖನಗಳು ಕೊಂಕಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಕುಡ್ಮಿ ಕೊಂಕ್ಣಿ ಲೋಕ್ವೇದ್’ ಎಂಬ ಸಂಶೋಧನಾ ಗ್ರಂಥ ಹಾಗೂ ‘ವಿಸಾವ್ಯಾ ಶೆಕ್ಡ್ಯಾಚೆ ಕೊಂಕ್ಣಿ ಮ್ಹಾನ್ ಮನಿಸ್’ ಎಂಬ ಕೃತಿಯನ್ನು ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಕಟಿಸಿದ್ದಾರೆ. ಅವರು ಬರೆದ ಇನ್ನಿತರ ಪುಸ್ತಕಗಳಲ್ಲಿ ತುಜೆಂ ಶಿಕಾಪ್, ತುಜಿ ವೃತ್ತಿ, ಗ್ಯಾಲಕ್ಸಿ, ವಿಶ್ವ್ ವಿಜ್ಞಾನ್ ಪ್ರಮುಖವಾದವುಗಳು. ಶ್ರೀಯುತರ ಸಾಹಿತ್ಯ ಸೇವೆಗೆ ಕೊಂಕ್ಣಿ ಕುಟಮ್ ಬಾಹ್ರೇಯ್ನ್ , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ದಾಯ್ಜಿ ದುಬಾಯ್, ದಿವೊ ಸಾಹಿತ್ಯ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ.
‘ರಾಕ್ಣೊ’ ಸಂಪಾದಕೀಯ ಮಂಡಳಿಯ ಸದಸ್ಯರಾಗಿ, ‘ಆಮ್ಚೊ ಸಂದೇಶ್’ ಪತ್ರಿಕೆಯ ಸಂಪಾದಕರಾಗಿ, ‘ಮಿಲಾರ್ಚಿಂ ಲ್ಹಾರಾಂ’ ತ್ರೈ ಮಾಸಿಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕಥೊಲಿಕ್ ಸಭಾದ ಕೇಂದ್ರೀಯ ಅಧ್ಯಕ್ಷರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದ ಅವರು ಉಡುಪಿಯಲ್ಲಿ ‘ಕೊಂಕ್ಣಿ ಭಾಸ್, ಸಾಹಿತ್ಯ್ ಕಲಾ ಅನಿ ಸಾಂಸ್ಕೃತಿಕ್ ಸಂಘಟನ್’ ಎಂಬ ಸಂಘಟನೆಯನ್ನು ಸ್ಥಾಪಿಸಿ ಅನೇಕ ಕೊಂಕಣಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಎಂ.ಸಿ.ಸಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೊಂಕಣಿ ಲೇಖಕ್ ಸಂಘ್ ಕರ್ನಾಟಕವು ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018 ರಲ್ಲಿ ಆರಂಭಗೊಂಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ್ ಸಂಘ್ ನಿರ್ಧರಿಸಿತು. ಈ ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 17-02-2024ನೇ ಶನಿವಾರ ಸಂಜೆ 6.30ಕ್ಕೆ ಮಂಗಳೂರಿನ ನಂತೂರ್ ಬಳಿಯ , ಬಜ್ಜೋಡಿಯಲ್ಲಿರುವ ಸಂದೇಶ ಪ್ರತಿಷ್ಠಾನದಲ್ಲಿ ನಡೆಯಲಿರುವುದು. ಪತ್ರಿಕಾಗೋಷ್ಠಿಯಲ್ಲಿ ಕೊಂಕಣಿ ಲೇಖಕ್ ಸಂಘ್ ಇದರ ಸಂಚಾಲಕರಾದ ರಿಚರ್ಡ್ ಮೊರಾಸ್, ಸಮಿತಿ ಸದಸ್ಯರಾದ ಡೊಲ್ಫಿ ಎಫ್. ಲೋಬೊ ಹಾಗೂ ಹೆನ್ರಿ ಮಸ್ಕರೇನ್ಹಸ್, ಸಲಹಾ ಸಮಿತಿ ಸದಸ್ಯರಾದ ಜೆ. ಎಫ್. ಡಿಸೋಜಾ ಉಪಸ್ಥಿತರಿದ್ದರು.