ಮೂಡುಬಿದಿರೆ : ಮುದ್ದಣ ಕವಿಯ ಶ್ರೇಷ್ಠ ಯಕ್ಷಗಾನ ಪ್ರಸಂಗ ಕೃತಿಗಳಾದ ‘ಕುಮಾರ ವಿಜಯ’ ಹಾಗೂ ‘ರತ್ನಾವತಿ ಕಲ್ಯಾಣ’ದ ಎಲ್ಲಾ ಹಾಡುಗಳ ಧ್ವನಿಮುದ್ರಣವನ್ನು ದಿನಾಂಕ 17-02-2024ರ ಅಪರಾಹ್ನ 3 ಗಂಟೆಗೆ ಮೂಡುಬಿದಿರೆಯ ಆಲಂಗಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ. ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ಈ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವಸಂತ ಭಾರಧ್ವಾಜ್ ಕಬ್ಬಿನಾಲೆ ಇವರು ಧ್ವನಿಮುದ್ರಣ ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ನಂದಳಿಕೆ ಬಾಲಚಂದ್ರ ಹೆಬ್ಬಾರ್ ಮತ್ತು ಚಂದ್ರಶೇಖರ ಭಟ್ ಕೊಂಕಣಾಜೆ ಸಂಯೋಜಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಲಿಪ ಶಿವಶಂಕರ ಭಟ್ ಹಾಗೂ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಹಾಡುಗಾರಿಕೆಯಲ್ಲಿ ‘ಕುಮಾರ ವಿಜಯ’ ಪ್ರಸಂಗದ ಆಯ್ದ ಪದಗಳ ‘ಬಲಿಪ ಗಾನ ಯಾನ’ ಪ್ರಸ್ತುತಿಯಾಗಲಿದೆ.
ಯಕ್ಷಗಾನಕ್ಕೆ ಸಂಬಂಧಿಸಿದಂತೆ ಪ್ರಸಂಗದ ನಡೆ, ಪದ್ಯಗಳ ಹಾಡುವಿಕೆ, ಮಟ್ಟುಗಳ ಪ್ರಸ್ತುತಿ, ರಂಗ ನಡೆಗಳು, ಧಿತ್ತ ಧೀಂಗ್ಣ ಎಲ್ಲಿ ಯಾವಾಗ ಎಂಬೆಲ್ಲ ಮಾಹಿತಿ ಇದುವರೆಗೆ ದಾಖಲಾಗದೇ ಇರುವುದು ಯಕ್ಷಗಾನೀಯತೆಯ ಉಳಿವಿಗೆ ದೊಡ್ಡ ತೊಡಕಾಗಿದೆ. ಇವೆಲ್ಲ ದಾಖಲಿಸಿದರೆ ಮುಂದಿನ ಪೀಳಿಗೆಗೆ ನಿಜವಾದ ಯಕ್ಷಗಾನದ ಪರಂಪರೆಯನ್ನು ದಾಟಿಸುವ ಸಾರ್ಥಕ ಕೆಲಸವಾದೀತು. ಇಂಥದ್ದೊಂದು ಕಾರ್ಯಕ್ಕೆ ಕೈಜೋಡಿಸಿದ್ದಾರೆ ಮುದ್ದಣ ಪ್ರಕಾಶನದ ನಂದಳಿಕೆ ಬಾಲಚಂದ್ರ ರಾವ್ ಮತ್ತು ಬಲಿಪ ಗಾನ ಯಾನ ತಂಡ.
ನಂದಳಿಕೆಯ ಪ್ರಖ್ಯಾತ ಕವಿ, ಆಧುನಿಕ ಕನ್ನಡ ಸಾಹಿತ್ಯದ ಮುಂಗೋಳಿ ಎಂದೇ ಕರೆಯಲಾಗುವ, ನಂದಳಿಕೆ ಲಕ್ಷ್ಮೀನಾರಾಯಣಪ್ಪ ಅಥವಾ ಮುದ್ದಣ. ಈತನ ಸಾಹಿತ್ಯ ಕೃತಿಗಳು ಒಂದಕ್ಕಿಂತ ಒಂದು ಮಿಗಿಲು. ಮುದ್ದಣ ರಚಿಸಿದ ಯಕ್ಷಗಾನ ಕೃತಿಗಳಾದ ‘ಕುಮಾರ ವಿಜಯ’ ಮತ್ತು ‘ರತ್ನಾವತಿ ಕಲ್ಯಾಣ’ ಇವೆರಡೂ ಕಾವ್ಯ ಸಾಹಿತ್ಯದ ವೈಭವವನ್ನು ವಿವರಿಸುವಂಥವು ಮತ್ತು ಯಕ್ಷಗಾನದ ಪ್ರಾತಿನಿಧಿಕ ಕೃತಿಗಳು ಎಂದರೂ ತಪ್ಪಲ್ಲ. ಈ ಹಾಡುಗಳನ್ನು ಯಕ್ಷಗಾನದ ರಾಗ-ಕ್ರಮಗಳಲ್ಲಿ ಅಲಿಸುವುದೇ ಚಂದ.
ಒಂದು ಯಕ್ಷಗಾನದ ಪ್ರಸಂಗವನ್ನು ಸುಮಾರು ಇಡೀ ರಾತ್ರಿಯ ಅವಧಿಗೆ ಪ್ರದರ್ಶಿಸುವುದಾದರೆ ಬೇಕಿರುವುದು ಸುಮಾರು 250ರಿಂದ 300ರಷ್ಟು ಪದ್ಯಗಳು. ರಾಗ, ತಾಳ, ಮಟ್ಟು, ಛಂದಸ್ಸು ಮೊದಲಾದವುಗಳಿಗೆ ಒಳಪಟ್ಟಿರುವ ಅದ್ಭುತ ಸಾಹಿತ್ಯವಿರುವ ಹಾಡುಗಳು ಪ್ರಸಂಗವೊಂದರ ಕಥೆಯ ನಡೆಯನ್ನು ಹೆಣೆದುಕೊಡುತ್ತವೆ. ಬಹುತೇಕ ಪ್ರಸಂಗಗಳಲ್ಲಿ ಕವಿಯು ಲೆಕ್ಕಕ್ಕಿಂತ ಹೆಚ್ಚು ಪದ್ಯಗಳನ್ನೇ ರಚಿಸಿರುತ್ತಾನೆ. ಉದಾಹರಣೆಗೆ ‘ಕುಮಾರ ವಿಜಯ’ ಪ್ರಸಂಗದಲ್ಲಿಯೇ 700ರಷ್ಟು ಪದ್ಯಗಳಿವೆ. ಇವೆಲ್ಲವೂ ಯಕ್ಷಗಾನ ಪ್ರದರ್ಶನ ಅಥವಾ ತಾಳಮದ್ದಳೆಯ ಪ್ರಸ್ತುತಿಗೆ ಬಳಕೆಯಾಗುವುದಿಲ್ಲ. ಶೇ.50ಕ್ಕಿಂತಲೂ ಹೆಚ್ಚಿನ ಪದ್ಯಗಳನ್ನು ಬಿಟ್ಟುಬಿಡಲಾಗುತ್ತದೆ. ರಂಗಸ್ಥಳದಲ್ಲಿ ಕಥಾ ನಿರೂಪಣೆಗೆ ಲೋಪವಾಗದಂತೆ, ಭಾಗವತರು ನಿರ್ದಿಷ್ಟ ಪದಗಳನ್ನಷ್ಟೇ ಹಾಡುತ್ತಾರೆ. ಉಳಿದ ಪದ್ಯಗಳ ನಿರೂಪಣೆಯು ಅಥವಾ ಕಥೆಯು ಬೇರೆ ಪಾತ್ರಧಾರಿಗಳ ಮಾತಿನ ಮೂಲಕ ಪ್ರೇಕ್ಷಕರಿಗೆ ತಿಳಿಯುತ್ತದೆ. ಪಾತ್ರಧಾರಿಗಳ ಸಂಖ್ಯಾಮಿತಿಯೂ, ಕಾಲಮಿತಿಯೂ ಇದಕ್ಕೆ ಕಾರಣ.
ಈಗಾಗಲೇ ಬಲಿಪ ಭಾಗವತರ ಸಂಪ್ರದಾಯಬದ್ಧ ಯಕ್ಷಗಾನ ಹಾಡುಗಾರಿಕೆಯನ್ನು ‘ಬಲಿಪ ಗಾನ ಯಾನ’ ಎಂಬ ಮನೆ ಮನೆ ಅಭಿಯಾನದ ಮೂಲಕ ಪ್ರಚುರ ಪಡಿಸಿರುವ, ಸ್ವತಃ ಹಿಮ್ಮೇಳ ವಾದಕರೂ ಆಗಿರುವ ಚಂದ್ರಶೇಖರ ಭಟ್ ಕೊಂಕಣಾಜೆ ಅವರ ಬೆಂಬಲದೊಂದಿಗೆ, ಮುದ್ದಣನ ಆರಾಧಕರಾಗಿರುವ ನಂದಳಿಕೆ ಬಾಲಚಂದ್ರ ರಾವ್ ಹಲವಾರು ವರ್ಷಗಳಿಂದ ಇಂಥದ್ದೊಂದು ದಾಖಲೀಕರಣ ಕೈಂಕರ್ಯಕ್ಕಿಳಿದವರು. ಪರಿಣಾಮವಾಗಿ ‘ಕುಮಾರ ವಿಜಯ’ ಹಾಗೂ ‘ರತ್ನಾವತಿ ಕಲ್ಯಾಣ’ ಕೃತಿಗಳ ಅಷ್ಟೂ ಹಾಡುಗಳಲ್ಲಿ ಒಂದನ್ನೂ ಬಿಡದೆ, ಚೆಂಡೆ-ಮದ್ದಳೆ ಸಾಂಗತ್ಯದೊಂದಿಗೆ ದಾಖಲೀಕರಣಗೊಂಡಿವೆ. ಇದು ಯಕ್ಷಗಾನ ಲೋಕದಲ್ಲಿ ಹಿಂದೆಂದೂ
ಆಗಿರದ ಪ್ರಯತ್ನ.
‘ಕುಮಾರ ವಿಜಯ’ದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕುತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ, ಏಳೆಂಟು ವರ್ಷಗಳ ಪರಿಶ್ರಮವು ಇದೀಗ ಧ್ವನಿಮುದ್ರಿಕೆಯ ಮೂಲಕ ಲೋಕಮುಖಕ್ಕೆ ಪರಿಚಯವಾಗುತ್ತಿದೆ. ಧ್ವನಿ ನೀಡಿದ್ದ ಬಲಿಪ ನಾರಾಯಣ ಭಾಗವತರು ಮತ್ತು ಪುತ್ರ ಬಲಿಪ ಪ್ರಸಾದ ಭಾಗವತರು ಈಗ ನಮ್ಮೊಂದಿಗಿಲ್ಲ. ಬಲಿಪ ಪರಂಪರೆಯನ್ನು ಮುಂದುವರಿಸುತ್ತಿರುವ ಮತ್ತೊಬ್ಬ ಪುತ್ರ ಬಲಿಪ ಶಿವಶಂಕರ ಭಟ್ ಹಾಗೂ ಸೋದರಳಿಯ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರು ಕೂಡ ಪರಂಪರೆಯ, ಬಲಿಪ ಶೈಲಿಯ ಹಾಡುಗಳೊಂದಿಗೆ ಈ ಪ್ರಸಂಗಕ್ಕೆ ಮೆರುಗು ನೀಡಿದ್ದಾರೆ. ಚೆಂಡೆ ಮದ್ದಳೆಯಲ್ಲಿ ನುರಿತ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್, ಪದ್ಮನಾಭ ಉಪಾಧ್ಯಾಯ ಹಾಗೂ ಕೊಂಕಣಾಜೆ ಚಂದ್ರಶೇಖರ ಭಟ್ ಜೊತೆಯಾಗಿದ್ದಾರೆ.
ಅದೇ ರೀತಿ 400ಕ್ಕೂ ಹೆಚ್ಚು ಪದ್ಯ ಸಾಹಿತ್ಯವುಳ್ಳ ‘ರತ್ನಾವತಿ ಕಲ್ಯಾಣ’ ಪ್ರಸಂಗವು ಸಂಪೂರ್ಣವಾಗಿ ಬಡಗುತಿಟ್ಟಿನಲ್ಲಿ ಪ್ರಸ್ತುತಿಗೊಂಡಿದೆ. ಇದರಲ್ಲಿ ಹಾಡುಗಳನ್ನು ಭಾಗವತರಾದ ವಿದ್ವಾನ್ ಗಣಪತಿ ಭಟ್ ಮತ್ತು ಹೇರಂಜಾಲು ಗೋಪಾಲ ಗಾಣಿಗರು ಹಾಡಿದ್ದರೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ ಹಾಗೂ ಚೆಂಡೆಯಲ್ಲಿ ರವೀಂದ್ರ ಆಚಾರ್ಯ ಕಾಡೂರು ಪ್ರತಿಭೆ ಪ್ರದರ್ಶಿಸಿದ್ದಾರೆ.
ಪದ್ಯಗಳ ಭಾಗವತಿಕೆಗೆ ಮೊದಲು ಅದರ ಏನು-ಎತ್ತ ಕುರಿತಾಗಿರುವ ಬಲಿಪರ ರಂಗ ಟಿಪ್ಪಣಿ ಎಂಬ ಕೃತಿಯೂ ಈ ಧ್ವನಿಮುದ್ರಿಕೆಯ ಜೊತೆಗೆ ಹೊರಬರುತ್ತಿದೆ. ಪದ್ಯವನ್ನು ಯಾವ ಲಯದಲ್ಲಿ ಹಾಡಬೇಕು. ರಂಗಕ್ರಿಯೆ ಹೇಗಿರಬೇಕು, ಪಠ್ಯದಲ್ಲಿರುವ ರಾಗ-ತಾಳಕ್ಕಿಂತ ಭಿನ್ನವಾದ ಬೇರೆ ರಾಗ-ತಾಳಗಳನ್ನು ಹೇಗೆ ಬಳಸಬಹುದು ಇತ್ಯಾದಿ ಮಾಹಿತಿಯೂ ಟಿಪ್ಪಣಿಯಲ್ಲಿದೆ. ಭಾಮಿನಿ, ವಾರ್ಧಕ, ಕಂದ ಪದ್ಯಗಳಿಗೆ ಮೂಲತಃ ನಿರ್ದಿಷ್ಟ ರಾಗವನ್ನು ಸೂಚಿಸಲಾಗಿರುವುದಿಲ್ಲ. ಆದರೆ ರಂಗಟಿಪ್ಪಣಿಯಲ್ಲಿ ಇದನ್ನೂ ಸೂಚಿಸಲಾಗಿದೆ.