ಬೆಂಗಳೂರು : ದಿನಾಂಕ 11-02-2024ರಂದು ನಿಧನರಾದ ತುಮಕೂರಿನ ಸಾಂಸ್ಕೃತಿಕ ಧ್ವನಿ ಎಂದೇ ಖ್ಯಾತರಾಗಿದ್ದ ಬರಹಗಾರ ಕವಿತಾಕೃಷ್ಣ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವಲ್ಲಿ ಬಹಳ ಮುಖ್ಯಪಾತ್ರ ವಹಿಸಿದ್ದ ಕವಿತಾಕೃಷ್ಣ ಅವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತುಮಕೂರು ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಹತ್ವದ ಸೇವೆಯನ್ನು ಸಲ್ಲಿಸಿದ್ದಾರೆ. ತುಮಕೂರಿನ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನು ಮಾಡುವಲ್ಲಿ, ತುಮಕೂರು ಜಿಲ್ಲೆಯ ಬರಹಗಾರರು ಸಂಘಟಿತವಾಗುವಲ್ಲಿ ಕವಿತಾ ಕೃಷ್ಣ ಅವರ ಪಾತ್ರ ಬಹಳ ಮುಖ್ಯವಾದದ್ದು. ತುಮಕೂರಿನಲ್ಲಿ ಲೇಖಕಿಯರ ಸಂಘ ಸ್ಥಾಪಿತವಾಗುವಲ್ಲಿ ಮತ್ತು ಬರಹಗಾರ್ತಿಯರು ಧೈರ್ಯವಾಗಿ ಬರೆಯುವಲ್ಲಿ ಅವರ ಪಾತ್ರ ಬಹಳ ಮುಖ್ಯವಾದದ್ದು.
ತುಮಕೂರು ಜಿಲ್ಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಕವಿತಾಕೃಷ್ಣರವರು ನೆಲಮಂಗಲ ತಾಲೂಕಿನ ಮಣ್ಣೆ ಪ್ರೌಡಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದ ನಂತರ ತಮ್ಮನ್ನು ಸಂಪೂರ್ಣ ಸಾಹಿತ್ಯಕ್ಕೇ ಸಮರ್ಪಿಸಿಕೊಂಡಿದ್ದರು. ಒಟ್ಟು 125 ಕೃತಿಗಳನ್ನು ಅವರು ರಚಿಸಿದ್ದು, ವಾಲ್ಮೀಕಿ ವಚನ ರಾಮಾಯಣ, ಮಹಾತ್ಮ ಬುದ್ಧ, ಭಕ್ತಿ ತರಂಗಿಣಿ ಕನಕದಾಸರು, ಸಿದ್ಧಗಂಗೆಯ ಸಿದ್ಧಪುರುಷ, ದೇವರ ದಾಸಿಮಯ್ಯ, ನಾದಯೋಗಿ ನಾರಾಯಣ, ರುದ್ರಮುನಿ ಚರಿತ, ಬದುಕುವ ದಾರಿ ಅವರ ಮಹತ್ವದ ಕೃತಿಗಳು. ಅವರ ‘ಆವರ್ತನ’ ಕಾದಂಬರಿ ನನಗೆ ಬಹಳ ಅಚ್ಚುಮೆಚ್ಚು, ಅವರ ಸಂಶೋಧನಾ ಗ್ರಂಥಗಳಾದ ‘ಕರ್ನಾಟಕದ ತಿಗುಳರು’ ಮತ್ತು ‘ಗಂಗ ಮಾನ್ಯಪುರ’ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಮಹತ್ವದ ಕೊಡುಗೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಕವಿತಾ ಕೃಷ್ಣ ಅವರ ಕೊಡುಗೆಗಳನ್ನು ನೆನಪು ಮಾಡಿಕೊಂಡಿದ್ದಾರೆ.