ಉಳ್ಳಾಲ : 2023- 2024ನೇ ಸಾಲಿನ ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಪ್ರಮೀಳಾ ಮಾಧವ್ (ಸಾಹಿತ್ಯ ಕ್ಷೇತ್ರ) ಹಾಗೂ ಮಾಲತಿ ಹೊಳ್ಳ (ಕ್ರೀಡಾ ಕ್ಷೇತ್ರ) ಇವರನ್ನು ಆಯ್ಕೆ ಮಾಡಲಾಗಿದೆ. ದಿನಾಂಕ 24-02-2024ರಂದು ಉಳ್ಳಾಲದ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ನಡೆಯುವ ‘ಅಬ್ಬಕ್ಕ ಉತ್ಸವ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ತಿಳಿಸಿದರು.
ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷರಾದ ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ “ಇಬ್ಬರಿಗೂ ಒಂದೇ ಹೆಸರಿನ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಮೊತ್ತ ತಲಾ ರೂಪಾಯಿ 25 ಸಾವಿರ ಆಗಿದ್ದು, ಎರಡೂ ರೀತಿಯ ಗೌರವವನ್ನು ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ ಎಂದೇ ಗುರುತಿಸಲಾಗುತ್ತದೆ. ಡಾ. ಕೆ.ಚಿನ್ನಪ್ಪ ಗೌಡ, ಪ್ರೊ. ಎ. ವಿ. ನಾವಡ, ಡಾ. ಗಣೇಶ್ ಅಮೀನ್ ಸಂಕಮಾರ್, ಡಾ. ನಾ. ದಾಮೋದರ ಶೆಟ್ಟಿ, ಬಿ. ಎಂ. ರೋಹಿಣಿ ಆಯ್ಕೆ ಸಮಿತಿಯು ಈ ಆಯ್ಕೆ ಮಾಡಿದೆ.” ಎಂದರು.
ಮಾಲತಿ ಹೊಳ್ಳ :
ಮೂಲತಃ ಉಡುಪಿಯ ಕೋಟದ ಮಾಲತಿ ಹೊಳ್ಳ ಅವರು ಮಾನವೀಯ ಅಂತಃಕರಣಕ್ಕೆ ಸಾಕ್ಷಿಯಾಗಿದ್ದು, ಅವರು 2004ರಲ್ಲಿ ‘ಮಾತೃ ಫೌಂಡೇಷನ್’ ಸ್ಥಾಪಿಸಿ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಆಶ್ರಯ ನೀಡುತ್ತಿದ್ದಾರೆ. ಅವರ ಕ್ರೀಡಾ ಸಾಧನೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ. 14 ತಿಂಗಳ ಮಗು ಇರುವಾಗಲೇ ಪೋಲಿಯೊ ಕಾಯಿಲೆಗೆ ಈಡಾಗಿದ್ದ ಅವರು ಛಲ ಬಿಡದೆ ಪದವಿ ಶಿಕ್ಷಣದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಜಾವೆಲಿನ್, ಶಾಟ್ ಪುಟ್, ಡಿಸ್ಕಸ್ ತ್ರೋ, ವೀಲ್‌ಚೇರ್ ರೇಸಿಂಗ್‌ನಲ್ಲಿ ಪ್ಯಾರಾ ಒಲಿಂಪಿಕ್ಸ್‌ನಲ್ಲಿ 5 ಬಾರಿ, ಏಷ್ಯನ್ ಗೇಮ್ಸ್‌ನಲ್ಲಿ 5 ಬಾರಿ, ಜಾಗತಿಕ ಕ್ರೀಡೆಯಲ್ಲಿ 2 ಬಾರಿ ಹಾಗೂ ಡೆನ್ಮಾರ್ಕ್, ಆಸ್ಟ್ರೇಲಿಯಾ, ಸ್ಪೇನ್, ಚೀನಾ ಮೊದಲಾದ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಇದುವರೆಗೆ 397 ಚಿನ್ನ, 27 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದಿದ್ದಾರೆ. ಪದ್ಮಶ್ರೀ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋ ತ್ಸವ ಪ್ರಶಸ್ತಿ ಪಡೆದಿದ್ದಾರೆ. ಗುಲ್ಬರ್ಗಾದ ಮಹಿಳಾ ವಿ. ವಿ. ಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.
ಪ್ರಮೀಳಾ ಮಾಧವ್ :
ಮೂಲತಃ ಕಾಸರಗೋಡಿನವರಾದ ಪ್ರಮೀಳಾ ಮಾಧವ್ ಹಿರಿಯ ಲೇಖಕಿ ಹಾಗೂ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು. ಸ್ನಾತಕೋತ್ತರ ತರಗತಿ, ಕನ್ನಡೇತರರಿಗೆ ಕನ್ನಡ ಕಲಿಕೆ, ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ, ಕನ್ನಡ ಸಾಹಿತ್ಯ ಕೃತಿಗಳ ವಾಚನ-ವ್ಯಾಖ್ಯಾನ ಹಾಗೂ ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ ಬೆಳ್ಳಿಯ ಪಾರಿತೋಷಕ ಪಡೆದಿದ್ದು, ‘ಕುಮಾರ ಸಂಭವ ಹಾಗೂ ಗಿರಿಜಾ ಕಲ್ಯಾಣ- ಒಂದು ತೌಲನಿಕ ಅಧ್ಯಯನ’ ಎಂಬ ವಿಷಯದ ಸಂಶೋಧನೆಗೆ ಬೆಂಗಳೂರು ವಿ. ವಿ. ಯಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.