ಮಂಗಳೂರು : ಕೊಂಕಣಿ ಲೇಖಕ್ ಸಂಘ ಕರ್ನಾಟಕ ಇವರ 2024ನೇ ಸಾಲಿನ ‘ಕೊಂಕಣಿ ಲೇಖಕ್ ಸಂಘ್’ ಪ್ರಶಸ್ತಿಯನ್ನು ಕೊಂಕಣಿ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಡಾ. ಜೆರಿ ನಿಡ್ಡೋಡಿಯವರಿಗೆ ದಿನಾಂಕ 17-02-2024 ರಂದು ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ನಡೆದ ಸಮಾರಂಭದಲ್ಲಿ ನೀಡಲಾಯಿತು. ಪ್ರಶಸ್ತಿಯು ಸ್ಮರಣಿಕೆ, ಸಮ್ಮಾನಪತ್ರ ಹಾಗೂ 25 ಸಾವಿರ ರೂಪಾಯಿ ನಗದನ್ನು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಂಗಳೂರು ಧರ್ಮಪ್ರಾಂತದ ಸೆಮಿನರಿಯ ರೆಕ್ಟರ್ ವಂ. ಡಾ. ರೊನಾಲ್ಡ್ ಸೆರಾವೊ “ಪ್ರತಿಯೊಂದು ಸಮುದಾಯಕ್ಕೆ ಅವರದ್ದೇ ಆದ ಸಂಸ್ಕೃತಿ ಇರುವಂತೆ ಕೊಂಕಣಿ ಭಾಷಿಕರಿಗೂ ಒಂದು ಸಂಸ್ಕೃತಿ ಇದೆ. ಇದು ತಲೆತಲಾಂತರದಿಂದ ಬಂದಿದ್ದು ಪರಿವರ್ತನಾಶೀಲವಾಗಿದೆ. ಬದಲಾವಣೆ ಪ್ರಕೃತಿ ನಿಯಮ. ಹಾಗಿರುವಾಗ ಸಮಾಜದೊಡಗಿನ ಮಧುರ ಬಾಂಧವ್ಯಕ್ಕಾಗಿ ಸಮಾನತೆಯನ್ನು ಗುರುತಿಸಿ ಕೊಳ್ಳುವುದು ಅಗತ್ಯ. ಬದಲಾವಣೆಯ ಬಿರುಗಾಳಿಯಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯದ ಉತ್ತಮ ಅಂಶಗಳನ್ನು ಉಳಿಸಿಕೊಂಡು, ಭಾಷೆ ನಾಡು ನುಡಿಯ ಸಂಸ್ಕೃತಿಯ ಬೇರುಗಳೊಂದಿಗೆ ಉಳಿಯುವುದು ನಮ್ಮ ಜವಾಬ್ದಾರಿ. ಸಾಹಿತಿಗಳು ಇದಕ್ಕೆ ಮಹತ್ತರ ಕೊಡುಗೆ ನೀಡುತ್ತಾರೆ. ತಮ್ಮ ಲೇಖನಿಯಿಂದ ಕೊಂಕಣಿ ಲೇಖಕ ಸಮುದಾಯದಲ್ಲಿ ತಮ್ಮದೇ ಛಾಪನ್ನು ಒತ್ತಿದ ಡಾ. ಜೆರಾಲ್ಡ್ ಪಿಂಟೊ ಅವರ ಸಾಧನೆ ಶ್ಲಾಘನೀಯ.” ಎಂದರು.
ಆಳ್ವಾಸ್ ಕಾಲೇಜಿನ ಕನ್ನಡ ಪ್ರೊಫೆಸರ್ ಟಿ. ಎ. ಎನ್. ಖಂಡಿಗೆ ಮಾತನಾಡಿ “ಕರಾವಳಿ ಬಹು ಭಾಷಾ ಸಂಗಮ. ಇಂತಹ ಬಹುತ್ವದ ಸಾಮರಸ್ಯದಲ್ಲಿ ಕೊಂಕಣಿ ಭಾಷಿಗರ ಹಾಗೂ ಸಮುದಾಯದ ಕೊಡುಗೆ ಅಪಾರ” ಎಂದರು. ಕೊಂಕಣಿ ಲೇಖಕ ಸಂಫ್’ ಇದರ ಸಂಚಾಲಕ ರಿಚಾರ್ಡ್ ಮೊರಾಸ್, ಸಮಿತಿ ಸದಸ್ಯರಾದ ಡಾ. ಎಡ್ವರ್ಡ್ ನಜ್ರೆತ್, ಡೊಲ್ಪಿ ಕಾಸ್ಸಿಯಾ, ಹೆನ್ರಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
ನವೀನ್ ಪಿರೇರಾ ಸುರತ್ಕಲ್ ಹಾಗೂ ಸಂದೇಶ ಪ್ರತಿಷ್ಠಾನದ ಪ್ರಶಸ್ತಿ ಪುರಸ್ಕೃತ ವಲ್ಲಿ ಕ್ವಾಡ್ರಸ್ ರನ್ನು ಡೊಲ್ಪಿ ಕಾಸ್ಸಿಯಾ ಮತ್ತು ಆಂಡ್ರೂ ಡಿ’ಕುನ್ಹಾ ಅಭಿನಂದಿಸಿದರು. ಸಂಘದ ಸಂಚಾಲಕ ರಿಚಾರ್ಡ್ ಮೊರಾಸ್ ಪ್ರಸ್ತಾವಿಸಿ, ಡಾ. ಎಡ್ವರ್ಡ್ ನಜೆತ್ ಸ್ವಾಗತಿಸಿ, ಹೆನ್ರಿ ಮಸ್ಕರೇನಸ್ ಅವರು ಡಾ. ಜೆರಿ ನಿದ್ದೋಡಿ ಅವರ ಪರಿಚಯಿಸಿ, ಫೆಲ್ಸಿ ಲೋಬೋ ಸಮ್ಮಾನಪತ್ರ ವಾಚಿಸಿ, ಜಾರ್ಜ್ ಲಿಗೋರಿ ಡಿ’ಸೋಜಾ ವಂದಿಸಿದರು.
ದಿಯಾ ಮಸ್ಕರೇನ್ಹಸ್, ಕೆನಿಸ್ಸಾ ಡಿ’ಸೋಜಾ, ಮ್ಯಾಕ್ಸಿಂ ರೊಡ್ರಿಗಸ್ ಬೊಂದೇಲ್ ಸಹಕರಿಸಿದರು. ವಂ. ಮಾರ್ಕ್ ವಾಲ್ಟರ್, ಸೆವಕ್ ಸಂಪಾದಕ ವಂ. ಚೇತನ್ ಕಾಪುಜಿನ್, ಲೇಖಕ ಜೆ.ಎಫ್. ಡಿ’ಸೋಜಾ, ಎಂ. ಸಿ. ಸಿ. ಬ್ಯಾಂಕ್ ನಿರ್ದೇಶಕ ಐರಿನ್ ಪಿಂಟೊ ಉಪಸ್ಥಿತರಿದ್ದರು. ಸಾಹಿತಿ ಲವಿ ಗಂಜಿಮಠ ನಿರೂಪಿಸಿದರು.