ಮಂಗಳೂರು : ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ನಾಗೇಶ ಪ್ರಭುಗಳ ಶೃದ್ಧಾಂಜಲಿ ಕಾರ್ಯಕ್ರಮ ಮೌರಿಷ್ಕ ಪಾರ್ಕ್ ನಲ್ಲಿ ದಿನಾಂಕ 21-02-2024ರಂದು ನಡೆಯಿತು. ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘವನ್ನು 30 ವರ್ಷಗಳ ಕಾಲ ಮುನ್ನಡೆಸಿದ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ವಿವರ ನೀಡಿದರು. ಯಾವುದೇ ಕಷ್ಟಗಳು ಎದುರಾದರೂ ಅವನ್ನೆಲ್ಲ ನಿವಾರಿಸಿಕೊಂಡು ಯಕ್ಷಗಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ನುಡಿ ನಮನ ಸಲ್ಲಿಸಿದರು.
ಬಿ.ಸಿ. ರೋಡಿನಲ್ಲಿ ನಾಗೇಶ ಪ್ರಭುಗಳೇ ಸ್ಥಾಪಿಸಿದ್ದ ಶ್ರೀ ರಾಮ ಯಕ್ಷಗಾನ ಸಂಘದ ಸಂಜೀವ ಶೆಟ್ಟಿಯವರು ಮಾತನಾಡಿ ಪ್ರಭುಗಳು ಭಾಗವತರಾಗಿ, ಮದ್ದಳೆವಾದಕರಾಗಿ, ಅರ್ಥಧಾರಿಯಾಗಿ ಸಲ್ಲಿಸಿದ ಸೇವೆಯನ್ನು ನೆನಪಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದರು.
ಇಸ್ಕಾನ್ ಕಾರ್ಯದರ್ಶಿ ಸನಂದನ ದಾಸ ಪ್ರಭುಗಳು ನಾಗೇಶ ಪ್ರಭುಗಳ ಅಪಾರವಾದ ಪುರಾಣ ಜ್ಞಾನದ ಬಗ್ಗೆ ಹೇಳಿ, ಧಾರ್ಮಿಕತೆಯನ್ನು ಮೈಗೂಡಿಸಿಕೊಂಡಿದ್ದ ಕಾರಣ ನಾಗೇಶರಿಗೆ ಶ್ರೀ ಕೃಷ್ಣ ಸದ್ಗತಿಯನ್ನು ನೀಡಲಿ ಎಂದು ಹಾರೈಸಿದರು.
ದೇರಾಜೆ ಸೀತಾರಾಮಯ್ಯರ ಒಡನಾಡಿಯಾಗಿದ್ದ, ಯಕ್ಷಗಾನ ಕ್ಷೇತ್ರಕ್ಕೆ ಪ್ರಾಮಾಣಿಕ, ನಿಸ್ಪೃಹ ಸೇವೆ ಸಲ್ಲಿಸಿದ ನಾಗೇಶ ಪ್ರಭುಗಳ ಬಗ್ಗೆ ಕೆನರಾ ಪದವಿ ಪೂರ್ವ ವಿಶ್ವವಿದ್ಯಾಲಯದ ನಿವೃತ್ತ ಉಪನ್ಯಾಸಕ ಜಿ.ಕೆ. ಭಟ್, ಸೇರಾಜೆ ನುಡಿ ನಮನ ಸಲ್ಲಿಸಿದರು. ಹಿರಿಯ ಯಕ್ಷಗಾನ ವಿದ್ವಾಂಸ ನಿವೃತ್ತ ಪ್ರಾಂಶುಪಾಲ ಡಾ. ಪ್ರಭಾಕರ ಜೋಶಿ ನಾಗೇಶ ಪ್ರಭುಗಳ 50 ವರ್ಷಗಳ ಒಡನಾಟವನ್ನು ಸ್ಮರಿಸುತ್ತ ಅವರ ಯಕ್ಷಗಾನದ ಪ್ರಾಮಾಣಿಕ ಸೇವೆಯನ್ನು ಮುಕ್ತ ಕಂಠದಿಂದ ಕೊಂಡಾಡಿದರು. “ಕಡೆಯ ತನಕ ದುಡಿಯಬೇಕು ಎನ್ನುವ ಅವರ ಆದರ್ಶ ಪ್ರತಿಯೊಬ್ಬರಿಗೂ ಅನುಕರಣ ಯೋಗ್ಯ. ಹಿರಿಯ ಅರ್ಥಧಾರಿಗಳ ತಪ್ಪನ್ನು ಅವರಿಗೆ ಮನವರಿಕೆ ಮಾಡುತ್ತಿದ್ದ ನಿಷ್ಟುರತೆ ಮೆಚ್ಚುವಂತಹದು” ಎನ್ನುತ್ತಾ ಯಕ್ಷಗಾನಕ್ಕಾಗಿ ಸೇವೆಯನ್ನು ಗೈದ ನಾಗೇಶ ಪ್ರಭುಗಳಿಗೆ ಶೃದ್ದಾಂಜಲಿ ಸಲ್ಲಿಸಿದರು.
ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಗುಣಕರ ರಾಮದಾಸರು ಮಾತನಾಡಿ “ಧರ್ಮದ ಬಗ್ಗೆ, ಪುರಾಣಕತೆಗಳ ಬಗ್ಗೆ ಅಪೂರ್ವ ಜ್ಞಾನ ಹೊಂದಿದ್ದ ನಾಗೇಶ ಪ್ರಭುಗಳು ಶ್ರೀಕೃಷ್ಣನ ಧಾಮವನ್ನು ಸೇರುವುದರಲ್ಲಿ ಅನುಮಾನವಿಲ್ಲ” ಎಂದರು. ಶಿವಶಂಕರ ಪ್ರಭು ಅಗಲಿದ ನಾಗೇಶ ಪ್ರಭುಗಳ ಭಜನಾ ಕ್ಷೇತ್ರದ ಬಗ್ಗೆ ವಿವರ ನೀಡಿದರು. ಯಕ್ಷಗಾನ ಭಾಗವತಿಕೆಯಂತೆಯೇ ಭಜನೆ ಹಾಡುಗಳನ್ನು ಹಾಡುತ್ತಿದ್ದ, ತಬಲ ನುಡಿಸುತ್ತಲೂ ಇದ್ದ ಪ್ರಭುಗಳಿಗೆ ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ನಿರ್ವಹಿಸಿದ ವಾಗೀಶ್ವರೀ ಯಕ್ಷಗಾನ ಸಂಘದ ಮುಖ್ಯ ಸಂಚಾಲಕರಾದ ನವನೀತ ಶೆಟ್ಟಿಯವರು ನಾಗೇಶ ಪ್ರಭುಗಳು ಅರ್ಥ ಹೇಳುವಾಗ ಆ ಪಾತ್ರಗಳಾಗಿ ಬದಲಾಗುತ್ತಿದ್ದ ಪರಿಯನ್ನು ವ್ಯಕ್ತಪಡಿಸುತ್ತಾ, ಸಂಘಕ್ಕೆ ತನ್ನ ಮಗನನ್ನೇ ನೀಡಿ ಸಂಘ ಮುನ್ನಡೆಯುವಂತೆ ಮಾಡಿದ ನಾಗೇಶ್ ಪ್ರಭುಗಳ ಉದಾರತೆಯನ್ನು ನೆನೆದರು. ಸಿ.ಎಸ್. ಭಂಡಾರಿ, ಶರತ್ ಕುಮಾರ್ ಕದ್ರಿ, ಶಿವಪ್ರಸಾದ್ ಪ್ರಭು, ಶೋಭಾ ಐತಾಳ್, ಪ್ರಫುಲ್ಲ ನಾಯಕ್, ಪರಮೇಶ್ ಪಿ.ವಿ., ಕೃಷ್ಣ ಶೆಟ್ಟಿ, ಶ್ರೀನಾಥ್ ಪ್ರಭು, ಸುಭಾಶ್ಚಂದ್ರ ಪ್ರಭು, ಅಶೋಕ ಬೋಳೂರು, ಶಿವಾನಂದ ಪೆರ್ಲಗುರಿ, ಸುದರ್ಶನ ದಂಬೇಲ್, ಪುರಂದರ, ವಿಘ್ನೇಶ ಶೆಟ್ಟಿ ಬೋಳೂರು, ಪ್ರೀತಂ ಭಟ್, ಸುಬ್ರಮಣ್ಯ ಒಡ್ಡೂರು ಉಪಸ್ಥಿತರಿದ್ದರು.