ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ನಿಡ್ಪಳ್ಳಿ ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರ ಮಹಾಪೋಷಕತ್ವದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ‘ಗ್ರಾಮ ಸಾಹಿತ್ಯ ಸಂಭ್ರಮ 2024’ ಸರಣಿ ಕಾರ್ಯಕ್ರಮ-13 ದಿನಾಂಕ 24-02-2024ರಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯವಾಗಿ ಯುವಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಂಡು ಅವರಿಗೊಂದು ವೇದಿಕೆಯನ್ನು ಕಲ್ಪಿಸುವ ಹಾಗೂ ಅವರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನ ಜೊತೆಗೆ ಕ.ಸಾ.ಪ. ರಾಜ್ಯಾಧ್ಯಕ್ಷರಾದ ಡಾ. ಮಹೇಶ್ ಜೋಶಿ ಅವರ ಧ್ಯೇಯ ವಾಕ್ಯವಾದ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತನ್ನಾಗಿಸುವಲ್ಲಿ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಡ್ಪಳ್ಳಿ ಗ್ರಾಮ ಸಾಹಿತ್ಯ ಸಂಭ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಖಂಡಿತವಾಗಿಯೂ ಈ ಕಾರ್ಯಕ್ರಮದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸಾಹಿತ್ಯದಲ್ಲಿ ಆಸಕ್ತಿ ಇಲ್ಲದ ಜನರನ್ನ ಸೇರಿಸುವುದಲ್ಲ, ಲಕ್ಷ ಲಕ್ಷ ಹಣ ವ್ಯಯಿಸುವುದಲ್ಲ, ಬದಲಿಗೆ ಸಣ್ಣ ಖರ್ಚಿನಲ್ಲಿ ಆಯಾ ಗ್ರಾಮದಲ್ಲಿರುವ ಶಾಲೆಗಳ ಸಾಹಿತ್ಯದ ಆಸಕ್ತ ವಿದ್ಯಾರ್ಥಿಗಳನ್ನು ಮಾತ್ರವೇ ಬರುವಂತೆ ಮಾಡಿ ಅವರನ್ನು ಪ್ರೋತ್ಸಾಹಿಸುವ, ಸರಳ, ಸುಂದರ, ಅಚ್ಚುಕಟ್ಟಾದ, ಶಿಸ್ತುಬದ್ಧ, ಪರಿಣಾಮಕಾರಿ ಕಾರ್ಯಕ್ರಮವಾಗಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡದಲ್ಲೂ ಐ.ಎ.ಎಸ್. ಬರೆಯಿರಿ ಅಭಿಯಾನ, ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ, ಯುವ ಕಥಾಗೋಷ್ಠಿ, ಪ್ರವಾಸ ಕಥನ, ಸಾಹಿತ್ಯ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ವಿದ್ಯಾರ್ಥಿಗಳ ಸರ್ವಾಧ್ಯಕ್ಷತೆ, ವಿದ್ಯಾರ್ಥಿಗಳಿಂದ ಸಮಾರೋಪ ಭಾಷಣ ಮತ್ತು ವಿದ್ಯಾರ್ಥಿಗಳಿಂದ ನಿರ್ವಹಣೆ/ ನಿರೂಪಣೆ. ಇವಿಷ್ಟು ಗೋಷ್ಠಿಗಳು ಒಂದೇ ಕಾರ್ಯಕ್ರಮದಲ್ಲಿ, ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲೇ ನಿರಂತರ ನಡೆಯುತ್ತಿರುವ ರಾಜ್ಯದ ಮಾತ್ರವಲ್ಲ ದೇಶದ ಏಕೈಕ ಕಾರ್ಯಕ್ರಮವೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಾಮ ಸಾಹಿತ್ಯ ಸಂಭ್ರಮವಾಗಿದೆ.
ಕಾರ್ಯಕ್ರಮದ ಯಶಸ್ಸಿನ ಹಿಂದಿರುವ ದೊಡ್ಡ ಶಕ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸ್ಥಳಿಯ ಗ್ರಾಮ ಪಂಚಾಯತ್, ಮಹಾ ಪೋಷಕರಾದ ಮಿತ್ರಂಪಾಡಿ ಜಯರಾಮ ರೈ ಅಬುದಾಭಿ, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ ಕುಂಬ್ರ, ಚಿರುರೆಲೆ ಸಾಹಿತ್ಯ ಬಳಗ, ಶಿಕ್ಷಕರು- ವಿದ್ಯಾರ್ಥಿಗಳು ಹಾಗೂ ಸಾಹಿತ್ಯ ಸೇವಕರು.
ವಿವಿಧ ಕ್ಷೇತ್ರದ ಸಾಧಕರಾದ ಶ್ರೀ ಜನಾರ್ದನ ದುರ್ಗ, ಶ್ರೀಮತಿ ಭವ್ಯಾ ಪಿ.ಆರ್. ನಿಡ್ಪಳ್ಳಿ, ಕು. ಚಿತ್ರಾ ಎಸ್. ಮತ್ತು ಕು. ಸಮನ್ವಿ ರೈ ನುಳಿಯಾಲು ಇವರನ್ನು ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್ ಹಾಗೂ ಇತರ ಗಣ್ಯರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸುಮಾರು 92 ವರ್ಷ ವಯೋಮಾನದ 175ಕ್ಕೂ ಹೆಚ್ಚು ಕೃತಿಗಳನ್ನು ಹಾಗೂ 3 ಬೃಹತ್ ಗ್ರಂಥಗಳನ್ನು ರಚಿಸಿದ ಹಿರಿಯ ಸಾಹಿತಿಗಳಾದ ಬಹುಭಾಷಾ ಪಂಡಿತರಾದ ವಿದ್ವಾನ್ ಡಾ. ಸದಾಶಿವ ಭಟ್ ಪಳ್ಳು ಹಾಗೂ ಸುಮಾರು 80 ವರ್ಷ ವಯೋಮಾನದ ಹಿರಿಯ ಸಾಹಿತಿಗಳಾದ ಶ್ರೀ ನುಳಿಯಾಲು ರಘುನಾಥ ರೈ ಇವರಿಬ್ಬರಿಗೂ ವಯೋಮಾನ ಸಹಜ ನಿಶ್ಶಕ್ತಿಯ ಕಾರಣ ಅವರ ಮನೆಯಲ್ಲೇ ಅಭಿನಂದಿಸಲಾಯಿತು. ಈ ಇಬ್ಬರು ಹಿರಿಯ ಸಾಹಿತಿಗಳು ನೀಡಿದ ಪ್ರೀತಿಯ ಆಶೀರ್ವಾದ ಅವಿಸ್ಮರಣೀಯ.