ಉಡುಪಿ : ಉಡುಪಿಯ ಅಜ್ಜರಕಾಡು ಭುಜಂಗ ಪಾರ್ಕ್ ಇದರ ಬಯಲು ರಂಗಮಂದಿರಲ್ಲಿ ಸುಮನಸಾ ಕೊಡವೂರು ಉಡುಪಿ ಇವರು ಆಯೋಜಿಸಿದ್ದ ವಾರಗಳ ಕಾಲ ನಡೆಯಲಿರುವ ಥಿಯೇಟರ್ ಫೆಸ್ಟಿವಲ್‌ನ 12ನೇ ರಂಗಹಬ್ಬವು ದಿನಾಂಕ 25-02-2024ರಂದು ಪ್ರಾರಂಭವಾಯಿತು. ಈ ರಂಗಹಬ್ಬವನ್ನು ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ದನ್ (ಜನ್ನಿ) ಇವರು ಉದ್ಘಾಟಿಸಿ ಮಾತನಾಡುತ್ತಾ “ರಂಗದಲ್ಲಿ ಪ್ರದರ್ಶಿಸುವ ನಾಟಕಗಳ ಸಂದೇಶ ಸಂಬಂಧಗಳನ್ನು ಬೆಸೆಯುವಂತೆ ಇರಬೇಕು. ರಂಗಭೂಮಿಯು ಸತ್ಯವನ್ನು ಪ್ರತಿಪಾದಿಸುವ ರಂಗಾವರಣವಾಗಿದೆ” ಎಂದು ಹೇಳಿದರು.
ರಂಗ ಸಾಧಕಿ ಗೀತಾ ಸುರತ್ಕಲ್ ಸನ್ಮಾನ ಸ್ವೀಕರಿಸಿ ಮಾತನಾಡಿ, “ರಂಗಭೂಮಿಗೆ ಕಲಾವಿದರಿಗಿಂತ ಪ್ರೇಕ್ಷಕರೇ ಪ್ರಮುಖರಾಗಿದ್ದಾರೆ. ಎಷ್ಟೇ ಖ್ಯಾತ ಕಲಾವಿದರಿದ್ದರೂ ಅವರ ಅಭಿನಯ ನೋಡಲು ಪ್ರೇಕ್ಷರಿಲ್ಲದಿದ್ದರೆ ರಂಗಭೂಮಿ ನಡೆಯದು. ರಂಗಭೂಮಿಯತ್ತ ಪ್ರೇಕ್ಷಕರನ್ನು ಆಕರ್ಷಿಸುವ ಕಾರ್ಯ ಮಾಡುತ್ತಿರುವ ಉಡುಪಿಯ ಸುಮನಸಾ ಸಂಸ್ಥೆಯ ಕಾರ್ಯ ಶ್ಲಾಘನೀಯ” ಎಂದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಸಾಧು ಸಾಲ್ಯಾನ್, ನವೀನ್ ಅಮೀನ್ ಶಂಕರಪುರ, ಕೊಡಂಕೂರಿನ ಶಿರಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ದಿವಾಕರ್ ಶೆಟ್ಟಿ ತೋಟದಮನೆ, ನಗರಸಭಾ ಸದಸ್ಯೆ ರಶ್ಮಿ ಭಟ್, ನೂತನ ಕ್ರೆಡಿಟ್ ಸೊಸೈಟಿಯ ಮಹಾಪ್ರಬಂಧಕ ಗಣೇಶ್ ಶೇರಿಗಾರ್ ಉಪಸ್ಥಿತರಿದ್ದರು. ಕಾರ್ತಿಕ್ ಪ್ರಭು ಪ್ರಾರ್ಥಿಸಿ, ಸಂಸ್ಥೆಯ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿ, ಚಂದ್ರಕಾಂತ್ ಕುಂದರ್ ವಂದಿಸಿ, ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಸುಸ್ಥಿರ ಪ್ರತಿಷ್ಠಾನದ ಕಲಾವಿದರು ಜೋಸೆಫ್ ಜಾನ್ ನಿರ್ದೇಶನದಲ್ಲಿ ‘ಸರಸ ವಿರಸ ಸಮರಸ’ ನಾಟಕ ಪ್ರದರ್ಶಿಸಿದರು. ಮಾರ್ಚ್ 2ರವರೆಗೂ ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ.