ಪುತ್ತೂರು : ತುಳುಕೂಟೊ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ‘ತುಳುವೆರೆ ಮೇಳೊ – 2024’ ಹಾಗೂ ‘ತೆನೆಸ್ ಮೇಳೊ’ ದಿನಾಂಕ 02-03-2024 ಮತ್ತು 03-03-2024ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿದೆ.
ದಿನಾಂಕ 02-03-2024ರಂದು ಅಪರಾಹ್ನ 2 ಗಂಟೆಗೆ ‘ತೆನೆಸ್ ಮೇಳೊ’ದಲ್ಲಿ ಬೇರೊದ ಕಲ ಉದಿಪನವನ್ನು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ, ಮೂಡಾಯಿ ತೆನೆಸ್‌ದ ಕಲವನ್ನು ವೈದ್ಯ ಡಾ. ಸುರೇಶ್ ಪುತ್ತೂರಾಯ ಹಾಗೂ ಪಡ್ಡಾಯಿ ತೆನೆಸ್‌ದ ಕಲವನ್ನು ಉದ್ಯಮಿ ಅಭಿಜಿತ್ ಶೆಟ್ಟಿ ಉದಿಪನ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರೂಪೇಶ ರೈ ಅಲಿಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಿತ್ತಳಿಕೆ ಸೂರ್ಯನಾಥ ಆಳ್ವ, ಜನ್ಮ ಫೌಂಡೇಶನ್‌ನ ಡಾ. ಹರ್ಷ ಕುಮಾರ್ ರೈ ಮಾಡಾವು ಭಾಗವಹಿಸಲಿದ್ದಾರೆ. ಸವಣೂರು ಕೆ. ಸೀತಾರಾಮ ರೈ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಪರಾಹ್ನ 3.30ರಿಂದ ‘ತುಳು ಪದ ನಲಿಕೆ’, 5.30ರಿಂದ ಪುರುಷರಕಟ್ಟೆ ಗುರುಕುಲ ಕಲಾ ಕೇಂದ್ರದ ವತಿಯಿಂದ ‘ಗಾನ ನೃತ್ಯ ವೈಭವ’ ನಡೆಯಲಿದೆ. ರಾತ್ರಿ 7 ಗಂಟೆಗೆ ಗಾಯಕನಾದ ನಾದ ಮಣಿನಾಲ್ಕೂರು ಅವರಿಂದ ನಡೆಯುವ ತುಡರ ಪದ ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಅವರು ಉದ್ಘಾಟಿಸಲಿದ್ದಾರೆ.
ದಿನಾಂಕ 03-03-2024ರಂದು ತುಳುವೆರೆ ಮೇಳೊ-2024 ಉದ್ಘಾಟನಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಇವರು ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಲಿದ್ದು, ತುಳುವೆರೆ ಮೇಳೊ ಸಮಿತಿ ಅಧ್ಯಕ್ಷ ರೆ. ವಿಜಯ ಹಾರ್ವಿನ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ 5 ಮಂದಿ ಸಾಧಕರಿಗೆ ‘ಬಿರ್ದ್ ದ ತುಳುವೆರ್ ಪುತ್ತೂರು ತಾಲೂಕು ಪ್ರಶಸ್ತಿ-2024’ ನೀಡಿ ಗೌರವಿಸಲಾಗುವುದು. ಮಧ್ಯಾಹ್ನ ಅಮೃತ ಸೋಮೇಶ್ವರರ ನೆನೆಪು – ತುಳುವಾಮೃತ ಕಾರ್ಯಕ್ರಮವು ಪ್ರಬಂಧ ಮಂಡನೆಯೊಂದಿಗೆ ನಡೆಯಲಿದೆ. 2 ಗಂಟೆಯಿಂದ ಕಬಿ ಕೂಟೊ, 4 ಗಂಟೆಯಿಂದ ತುಳು ಮನರಂಜನೆಲು, ಸಮರ ಸೌಗಂಧಿಕಾ ಪ್ರಸಂಗದ ಯಕ್ಷಗಾನ ತಾಳಮದ್ದಳೆ, ಬಲೆ ತೆಲಿಪುಕೊ ಹಾಸ್ಯ, ತುಳು ಸಿನಿಮಾ ಪದೊಕುಲು, ತುಳು ಹಾಸ್ಯ ನಾಟಕ ‘ನಂಬಿಕೆ ದಾಯೆಗ್’ ಪ್ರದರ್ಶನಗೊಳ್ಳಲಿದೆ. ತೆನೆಸು ಮೇಳದಲ್ಲಿ ತುಳುವೆರೆ ಕಾಯಿಕಜಿಪು ತೆನೆಸುಲು (ಸಸ್ಯಾಹಾರಿ) ಹಾಗೂ ತುಳುವೆರೆ ಮೀನ್ ಮಾಸ ತೆನೆಸುಲು (ಮಾಂಸಾಹಾರಿ) ವಿಶೇಷವಾಗಿರಲಿದೆ.
2007ರಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ತುಳುವಿಗೆ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟದ ಪ್ರಯತ್ನ ಆರಂಭಿಸಿದವರು. ಆ ಬಳಿಕ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಮೂಲಕ ನಿರಂತರ ತುಳು ಪರ ಕೆಲಸ ನಡೆಯುತ್ತಿವೆ. ಡಾ. ಪಾಲ್ತಾಡ್ ರಾಮಕೃಷ್ಣ ಆಚಾರ್ ಅವರನ್ನೊಳಗೊಂಡು ಸವಣೂರಿನಲ್ಲೂ ತುಳು ಸಂಬಂಧಿ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಈಗ ಡಾ. ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭಾ ಸದಸ್ಯರೂ ಆಗಿರುವುದರಿಂದ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದರೊಂದಿಗೆ ಸೇರಿದಂತೆ ವಿಶೇಷ ಸ್ಥಾನಮಾನಕ್ಕಾಗಿ ಮುಂಚೂಣಿಯ ಪ್ರಯತ್ನ ನಡೆಸುತ್ತಿದ್ದಾರೆ. ತುಳು ಮೇಳೊದಂತಹ ಕಾರ್ಯಕ್ರಮಗಳೂ ಈ ಪ್ರಯತ್ನಗಳಿಗೆ ಪೂರಕವಾಗಿದೆ.