ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 12ನೇ ವರ್ಷದ ರಂಗಹಬ್ಬದ 4ನೇ ದಿನದ ಕಾರ್ಯಕ್ರಮವು ದಿನಾಂಕ 28-02-2024ರಂದು ನಡೆಯಿತು. ಈ ದಿನದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್. ಸಾಮಗ ಅವರು ಮಾತನಾಡಿ “ಕಲಾಪ್ರಕಾರಗಳಲ್ಲಿ ನಾಟಕವೇ ಶ್ರೇಷ್ಠವಾದುದು. ಪ್ರೇಕ್ಷಕನಿಗೆ ಬೇಕಾದ ಎಲ್ಲವೂ ನಾಟಕ ಒಳಗೊಂಡಿರುತ್ತದೆ. ಕೊಡವೂರಿನಲ್ಲಿ ಹಿಂದೆ ಶಂಕರನಾರಾಯಣ ನಾಟಕ ಮಂಡಳಿ ಇತ್ತು. ಬಳಿಕ ಅದು ನಿಂತು ಹೋಯಿತು. ಕೊಡವೂರು ಯಕ್ಷಗಾನ ಕಲೆಗೆ ಪ್ರಸಿದ್ಧವಾಗಿತ್ತು. ಈಗ ಸುಮನಸಾ ಕೊಡವೂರು ಸಂಸ್ಥೆಯಿಂದಾಗಿ ನಾಟಕ ರಂಗದಲ್ಲಿಯೂ ಹೆಸರುವಾಸಿಯಾಗುತ್ತಿದೆ. ಕಲಾ ಪ್ರದರ್ಶನಗಳನ್ನು ನೋಡಲು ಹಿರಿಯರೇ ಹೆಚ್ಚಾಗಿ ಬರುತ್ತಾರೆ. ಮಕ್ಕಳು ಇರುವುದಿಲ್ಲ. ಆದರೆ ಇಲ್ಲಿ ಸಣ್ಣ ಮಕ್ಕಳನ್ನೂ ತೊಡಗಿಸಿಕೊಂಡಿದ್ದಾರೆ. ಇದು ಇತರರಿಗೂ ಪ್ರೇರಣೆ. ಕಲಾ ವೇದಿಕೆ ಎಷ್ಟು ಮುಖ್ಯವೋ ಸುತ್ತಲ ಪರಿಸರವೂ ಅಷ್ಟೇ ಮುಖ್ಯ. ಈ ಬಯಲು ರಂಗಮಂದಿರದಲ್ಲಿ ಪರಿಸರವನ್ನು ಉಳಿಸಿಕೊಂಡೇ ರಂಗಪ್ರದರ್ಶನಗಳು ನಡೆಯುತ್ತಿವೆ. ತೆರೆದ ಆಕಾಶದಡಿಯಲ್ಲಿ ಪ್ರೇಕ್ಷಕರು ವೀಕ್ಷಿಸುತ್ತಾರೆ. ಇತ್ತೀಚೆಗೆ ಕಾಂಕ್ರೀಟ್ ಸಭಾಂಗಣಗಳು, ಹವಾನಿಯಂತ್ರಿತ ವ್ಯವಸ್ಥೆಗಳ ನಡುವೆ ನಿದ್ದೆ ಹೋಗುವುದಕ್ಕಿಂತ ಮುಕ್ತವಾಗಿ ಇರುವ ಈ ಪ್ರದೇಶ ರಂಗಚಟುವಟಿಕೆಗೆ ಪೂರಕವಾಗಿದೆ” ಎಂದು ವಿಶ್ಲೇಷಿಸಿದರು.
ರಂಗಸನ್ಮಾನವನ್ನು ಸ್ವೀಕರಿಸಿದ ಕಲಾವಿದ ಉಮೇಶ್ ಶೆಟ್ಟಿ ಮಾತನಾಡಿ, “ಈ ಸನ್ಮಾನವು ಸಂತೋಷ ಮತ್ತು ಸಂಕೋಚವನ್ನು ಉಂಟು ಮಾಡಿದೆ. ಸನ್ಮಾನ ಸ್ವೀಕರಿಸುವ ಯೋಗವನ್ನು ಕಲ್ಪಿಸಿದ್ದಕ್ಕೆ ಸಂತೋಷವಾಗುತ್ತಿದೆ. ಇದಕ್ಕೆ ಅರ್ಹನೇ ಎಂಬ ಜಿಜ್ಞಾಸೆಯು ಸಂಕೋಚವನ್ನು ಉಂಟು ಮಾಡುತ್ತಿದೆ” ಎಂದು ಹೇಳಿದರು.
ಸಿತಾರಾ ಎಂಟರ್‌ಪ್ರೈಸಸ್ ಪ್ರಭಾಕರ ತಿಂಗಳಾಯ ಮಾತನಾಡಿ, “ಶಾಲೆಯಲ್ಲಿ ಓದಿದರೆ ಪರೀಕ್ಷೆ ಮುಗಿದ ಮೇಲೆ ಮರೆತು ಹೋಗುತ್ತದೆ. ನಾಟಕಗಳ ಮೂಲಕ ತಿಳಿಸುವ ವಿಚಾರಗಳು ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಆ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ” ಎಂದು ತಿಳಿಸಿದರು.
ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ, ಕೊಡವೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀನಿವಾಸ ಉಪಾಧ್ಯ, ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಪ್ರಬಂಧಕ ಸುಧಾಕರ್ ಜತ್ತನ್, ಸುಮನಸಾ ಕೊಡವೂರು ಸಂಸ್ಥೆಯ ಜಗದೀಶ್, ಮನೋಹರ್ ಉಪಸ್ಥಿತರಿದ್ದರು. ಪ್ರವೀಣ್‌ಚಂದ್ರ ಸ್ವಾಗತಿಸಿ, ಮುರುಗೇಶ್ ವಂದಿಸಿ, ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು. ಸುಮನಸಾ ಕೊಡವೂರು ಸಂಸ್ಥೆಯ ಕಲಾವಿದರಿಂದ ‘ಸಮುದ್ರೋಲ್ಲಂಘನ’ ಯಕ್ಷ ನಾಟಕ ಪ್ರದರ್ಶನಗೊಂಡಿತು.