ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿನಾಂಕ 23-03-2024 ಮತ್ತು 24-03-2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುವ ಎರಡು ದಿನಗಳ 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭುವನೇಶ್ವರಿ ಹೆಗಡೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ತಿಳಿಸಿದ್ದಾರೆ.
ಪ್ರಾಧ್ಯಾಪಕಿ, ಸಾಹಿತಿ, ಲೇಖಕಿ, ಹಾಸ್ಯ ಭಾಷಣಗಾರ್ತಿ, ಅಂಕಣಗಾರ್ತಿ ಹೀಗೆ ಕನ್ನಡ ಸಾರಸ್ವತ ಲೋಕದ ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸಿದ ಭುವನೇಶ್ವರಿ ಹೆಗಡೆ ಅವರ ಮುಡಿಗೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷತೆಯ ಸೇರ್ಪಡೆಯಾಗುತ್ತಿದೆ. ಕನ್ನಡದ ಪ್ರಮುಖ ಹಾಸ್ಯ ಲೇಖಕಿಯಾದ ಭುವನೇಶ್ವರಿ ಹೆಗಡೆ ಬಹುಮುಖ ಸಾಧಕಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಮನಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಅವರ ಸಾವಿರಕ್ಕೂ ಹೆಚ್ಚು ಹಾಸ್ಯ ಪ್ರಬಂಧಗಳು ಕನ್ನಡದ ಪ್ರಮುಖ ಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಭುವನೇಶ್ವರಿ ಅವರು ಮುಗುಳು, ನಕ್ಕು ಹಗುರಾಗಿ, ಎಂತದು ಮಾರಾಯ್ರೆ, ವಲಲ ಪ್ರತಾಪ, ಹಾಸ ಭಾಸ, ಮೃಗಯಾ ವಿನೋದ, ಬೆಟ್ಟದ ಭಾಗೀರಥಿ, ಮಾತನಾಡಲು ಮಾತೇ ಬೇಕೆ?, ಪುಟ್ಟಿಯ ಪಟ್ಟೆ ಹುಲಿ, ತೆಂಕಣ ಬಡಗಣ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಆಯ್ದ ನಗೆ ಬರಹಗಳು ಬೆಸ್ಟ್ ಆಫ್ ಭು.ಹೆ. ಎಂಬ ಹೆಸರಿನ ಪುಸ್ತಕವಾಗಿ ಪ್ರಕಟವಾಗಿದೆ. ಭುವನೇಶ್ವರಿ ಅವರ ಸಮಗ್ರ ಲಲಿತ ಪ್ರಬಂಧ ಕೃತಿಯನ್ನು ಸಪ್ನಾ ಬುಕ್ ಹೌಸ್ ಪ್ರಕಟಿಸಿದೆ.
ಸೂರು ಸಿಕ್ಕದಲ್ಲ, ಕಚೇರಿ ವೈಭವಂ, ಕಾವ್ಯ ಕೋಲಾಹಲ ಮತ್ತು ಯಂತ್ರ ಅತಂತ್ರ ಎಂಬ ರೇಡಿಯೋ ನಾಟಕಗಳನ್ನು ಕೂಡ ರಚಿಸಿದ್ದಾರೆ. ಅವರ ಸಭಾ ಕಂಪನ, ಮೂಢನಂಬಿಕೆಗಳ ಬೀಡಿನಲ್ಲಿ ಸುಲಭದಲ್ಲಿ ಸಜ್ಜನರಾಗಲಾರಿರಿ, ನಕ್ಕು ಹಗುರಾಗಿ, ಬೈಯಲು ಕಲಿಯಿರಿ ಮುಂತಾದ ಪ್ರಬಂಧಗಳು ಶಾಲಾ- ಕಾಲೇಜುಗಳ ಪಠ್ಯವಾಗಿ ಪ್ರಕಟವಾಗಿವೆ. ಭುವನೇಶ್ವರಿ ಅಂಕಣಗಾರ್ತಿಯಾಗಿಯೂ ಪ್ರಸಿದ್ದಿ ಪಡೆದವರು.
ಅಮೆರಿಕಾ, ಲಂಡನ್ ಸಹಿತ ವಿವಿಧ ಕಡೆ ಅನೇಕ ಸಮ್ಮೇಳನ ಗೋಷ್ಠಿಗಳ ಅಧ್ಯಕ್ಷತೆ, ದಿಕ್ಕೂಚಿ ಭಾಷಣಗೈದಿರುವ ಭುವನೇಶ್ವರಿ ಹಾವೇರಿ ಜಿಲ್ಲೆಯ ಲಿಂಗನಾಯಕನ ಹಳ್ಳಿಯಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ್ದಾರೆ. ಭುವನೇಶ್ವರಿ ಹೆಗಡೆ ಅವರಿಗೆ ಅರಸಿ ಬಂದ ಪ್ರಶಸ್ತಿಗಳು ಹಲವು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಡುಕೋಣೆ ರಮಾನಂದ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಬಹುಮಾನ, ಬನಹಟ್ಟಿ ಪುಸ್ತಕ ಬಹುಮಾನ, ಪುತ್ತೂರಿನ ಉಗ್ರಾಣ ಪ್ರಶಸ್ತಿ, ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಾಗೂ ಇನ್ಫೋಸಿಸ್ ಫೌಂಡೇಶನ್ ಸುಧಾ ಮೂರ್ತಿ ಪ್ರಶಸ್ತಿ ಹಾಗೂ ಇನ್ನೂ ಹಲವು ಪ್ರಶಸ್ತಿಗಳು ಸಂದಿವೆ.