ಮುಂಬಯಿ : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾದ ಡಾ.ಉಮಾ ರಾಮರಾವ್ ಅವರು ಪ್ರಸಕ್ತ ಸಾಲಿನ ಭಾರತ ಸರಕಾರದ ಸಂಸ್ಕೃತ ಇಲಾಖೆಯ ಸಂಶೋಧನ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ. ಡಾ. ಉಮಾ ರಾವ್ ಅವರು ‘ಭೈರಪ್ಪನವರ ಕಾದಂಬರಿಗಳಲ್ಲಿ ಏಕೀಕೃತವಾಗಿ ಮೂಡಿರುವ ಭಾರತೀಯ ಸಂಸ್ಕೃತಿಯ ಚಿತ್ರಣ (ಒಂದು ಬಹುಭಾಷಿಕ ಸಂವೇದನೆ) ಮುಂದಿನ ಎರಡು ವರ್ಷಗಳಲ್ಲಿ ಸಂಶೋಧನೆಯನ್ನು ನಡೆಸಲಿದ್ದಾರೆ.
ಮುಂಬೈನ ಹಿರಿಯ ಕನ್ನಡ ಸಾಧಕರಲ್ಲಿ ಡಾ. ಉಮಾ ರಾಮರಾವ್ ಅವರೂ ಒಬ್ಬರು. ಇಂಜಿನಿಯರಿಂಗ್ ಪದವಿ ಪಡೆದು ಮುಂಬೈನ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಪ್ರಾಚಾರ್ಯರಾಗಿ ಕೆಲಸ ಮಾಡುತ್ತಲೇ ಕನ್ನಡದಲ್ಲಿ ಪ್ರಭುತ್ವ ಸಾಧಿಸಿ ಓದು ಬರವಣಿಗೆ ಮಾಡಿ ಸೈ ಎನಿಸಿಕೊಂಡವರು ಡಾ. ಉಮಾ ರಾವ್ ಅವರು. ಸಾಂಪ್ರತ ಮುಂಬೈನ ಮುಂಚೂಣಿಯಲ್ಲಿರುವ ಲೇಖಕರಲ್ಲಿ ಅವರದು ಎದ್ದು ಕಾಣುವ ಹೆಸರು. ಸಾಹಿತ್ಯ, ಇತಿಹಾಸ, ಸಂಗೀತ, ಪುರಾಣ ಎಲ್ಲದರಲ್ಲೂ ಅವರಿಗೆ ವಿಶೇಷ ಆಸ್ಥೆ. ಅವರು ಒಳ್ಳೆಯ ವಾಗ್ಮಿ. ನೇರ ನಡೆನುಡಿಗೆ ಹೆಸರಾಗಿರುವ ಡಾ. ಉಮಾರಾವ್ ಅವರು ದಕ್ಷ ಆಡಳಿತಗಾರರು, ಶಿಸ್ತಿನ ಸಿಪಾಯಿಯೂ ಹೌದು. ಸದ್ದುಗದ್ದಲದ ಈಗಿನ ಪ್ರಚಾರಯುಗದಲ್ಲಿ ಅವರು ತಮ್ಮ ಪಾಡಿಗೆ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರು ನಿಜವಾಗಿಯೂ ಕಾರ್ಯಾನಂದರು.
ಉತ್ಕಟ ಕನ್ನಡ ಅಭಿಮಾನಿಯಾಗಿರುವ ಅವರದು ಬಹುಭಾಷಿಕ ಸಂವೇದನೆ. ಡಾ. ಉಮಾ ರಾವ್ ಅವರು ನಾಡಿನ ನಾಮಾಂಕಿತ ಸಾಹಿತಿ ಡಾ. ಎಸ್. ಎಲ್. ಭೈರಪ್ಪ ಅವರ ನಿಕಟವರ್ತಿಗಳಲ್ಲಿ ಒಬ್ಬರು. ಭೈರಪ್ಪ ಅವರ ಕೃತಿಗಳನ್ನು ವ್ಯಾಪಕವಾಗಿ ಅಭ್ಯಾಸ ಮಾಡಿ ವಿದ್ವತ್ಪೂರ್ಣವಾದ ಸಂಪ್ರಬಂಧ, ಮಹಾಪ್ರಬಂಧಗಳನ್ನು ರಚಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. `ಭೈರಪ್ಪನವರ ಪರ್ವ, ಆಯಾಮ ಮತ್ತು ಅನನ್ಯತೆ’ ಅವರ ಮಹತ್ವದ ಪ್ರಕಟಿತ ಕೃತಿ. ಪರ್ವ ಹಾಗೂ ಉತ್ತರಕಾಂಡ ಕಾದಂಬರಿಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿ ಮುಂಬೈ ವಿಶ್ವವಿದ್ಯಾಲಯದಿಂದ ಎರಡನೆಯ ಬಾರಿಗೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಮಹಾಪ್ರಬಂಧ ಈಗ ಬೆಳಕು ಕಾಣುತ್ತಿರುವುದು ಸಂತೋಷದ ಸಂಗತಿ. ಸರಳ ಸಜ್ಜನಿಕೆಗೆ ಹೆಸರಾಗಿರುವ ಡಾ. ಉಮಾ ಅವರು ಅಣುಶಕ್ತಿ ನಗರದಲ್ಲಿ ಮುಂಬೈ ವಿಶ್ವವಿದ್ಯಾಲಯದ ಕನ್ನಡ ಕಲಿಕಾ ಯೋಜನೆಯಲ್ಲೂ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಸದ್ಯ ಅವರು ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ವಿಭಾಗದ ಉನ್ನತಿಗೆ ಶ್ರಮಿಸುತ್ತಾ ಬಂದಿದ್ದಾರೆ. ಪ್ರತಿಭೆ, ದಕ್ಷತೆ, ಸರಳತೆ ಅವರ ವ್ಯಕ್ತಿತ್ವದ ಅನನ್ಯತೆ. ನಿವೃತ್ತಿಯ ಬಳಿಕ ಕನ್ನಡದ ಪರಿಚಾರಿಕೆಯಲ್ಲಿ ಸಕ್ರಿಯರಾಗಿರುವ ಇವರನ್ನು ಕನ್ನಡ ವಿಭಾಗ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಡಾ. ಜಿ. ಎನ್. ಉಪಾಧ್ಯ ಹಾಗೂ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ. ಎಸ್. ಶೆಟ್ಟಿ ಅವರು ಅಭಿನಂದಿಸಿದ್ದಾರೆ.